ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತುರ್ತಾಗಿ ಇ-ಖಾತಾ ಪಡೆಯಲು ಬರುವ ಆಸ್ತಿ ಮಾಲೀಕರಿಗೆ ಸರಿಯಾಗಿ ಸ್ಪಂದಿಸಬೇಕೆಂದು ಕಂದಾಯ ವಿಭಾಗದ ಜಂಟಿ ಆಯುಕ್ತೆಯಾದ ಲಕ್ಷ್ಮೀದೇವಿ ರವರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇ-ಖಾತಾ ನೀಡುವ ವಿಚಾರವಾಗಿ ನಗರದ ಎನ್.ಆರ್. ಕಾಲೋನಿಯ ಡಾ.ಸಿ ಅಶ್ವತ್ಥ್ ಕಲಾ ಭವನ ನಡೆದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ-ಆಸ್ತಿ ಸೇವೆಗಳ ಸುಗಮ ವಿತರಣೆ ಹಾಗೂ ತುರ್ತು ಸಂದರ್ಭಗಳಲ್ಲಿ ನೋಂದಣಿ ಪ್ರಕರಣಗಳಿಗೆ ಆದ್ಯತೆಯನ್ನು ನೀಡಲು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 2024ರ ಅಕ್ಟೋಬರ್ ತಿಂಗಳೊಳಗೆ ಉಪ-ನೋಂದಣಾಧಿಕಾರಿ ಕಛೇರಿಯಲ್ಲಿ ತುರ್ತು ಆಸ್ತಿ ನೋಂದಣಿಗಾಗಿ ಅಂತಿಮ ಇ-ಖಾತಾವನ್ನು ಪಡೆಯುವ ಸಲುವಾಗಿ ಕಂದಾಯ ಅಧಿಕಾರಿಗಳ ಕಛೇರಿಗೆ ಬರುವ ನಾಗರೀಕರು/ಆಸ್ತಿ ಮಾಲೀಕರಿಗೆ ಕೂಡಲೆ ಸ್ಪಂದಿಸಿ ಇ-ಖಾತಾ ನೀಡುವ ವ್ಯವಸ್ಥೆ ಮಾಡಲು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿನ 21 ಲಕ್ಷಕಿಂತಲೂ ಹೆಚ್ಚು ಆಸ್ತಿಗಳನ್ನು ಡಿಜೀಟಲಿಕರಣಗೊಳಿಸಲಾಗಿದ್ದು, ದಿನಾಂಕ 1ನೇ ಅಕ್ಟೋಬರ್ 2024 ರಿಂದ ಜಾರಿಗೆ ಬರುವಂತೆ ಇ-ಆಸ್ತಿ ವ್ಯವಸ್ಥೆಗೆ ಒಳಪಡಿಸಿ bbmp.eaasthi.karnataka.gov.in ನಲ್ಲಿ ರಚಿಸಿ ಇರಿಸಲಾಗಿರುತ್ತದೆ ಎಂದರು.
ಇ-ಖಾತಾ ಪಡೆಯಲು ಹೆಲ್ಪ್ ಡೆಸ್ಕ್:
ಆಸ್ತಿ ನೊಂದಣಿ ಮಾಡಿಸುವವರಿಗೆ ಶೀಘ್ರವಾಗಿ ಇ-ಖಾತಾ ಪಡೆಯುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳಲ್ಲಿ Help Desk ತೆರೆಯಲಾಗಿದ್ದು, ಈ ಮೂಲಕ ಶೀಘ್ರವಾಗಿ ಇ-ಖಾತಾ ಬಗ್ಗೆ ಅಗತ್ಯ ಮಾಹಿತಿ ಪಡದು ಇ-ಖಾತಾ ಪಡೆಯಬಹುದಾಗಿದೆ.
ತುರ್ತಾಗಿ ಆಸ್ತಿ ನೋಂದಣಿ ಮಾಡಿಸುವವರಿಗೆ ಹಾಗೂ ಅನಿವಾಸಿ ಭಾರತೀಯರಿಗೆ ಯಾವುದೇ ತೊಂದರೆ ಆಗದಂತೆ ಅತಿ ಶೀಘ್ರದಲ್ಲಿ ಇ-ಖಾತಾ ವಿತರಿಸುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಗಳಲ್ಲಿನ ಹೆಲ್ಪ್ ಡೆಸ್ಕ್ ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ನೆರವಾಗುವಂತೆ ಸೂಚಿಸಿದರು.
8 ವಲಯಗಳ ಅಧಿಕಾರಿಗಳೊಂದಿಗೆ ಕಾರ್ಯಗಾರ:
ಇ-ಖಾತಾ ನೀಡುವ ವಿಚಾರವಾಗಿ ಪಾಲಿಕೆಯ ಎಂಟೂ ವಲಯಗಳಲ್ಲಿ ಬರುವ ಕಂದಾಯ ವಿಭಾಗದ ಉಪ ಆಯುಕ್ತರು, ಸಹಾಯಕ ಕಂದಾಯ ಅಧಿಕಾರಿಗಳು, ವಿಷಯ ನಿರ್ವಾಕರುಗಳು, ಎನ್.ಐ.ಸಿ ಅಧಿಕಾರಿಗಳು ಸೇರಿದಂತೆ 350ಕ್ಕೂ ಹೆಚ್ಚು ಅಧಿಕಾರಿ/ಸಿಬ್ಬಂದಿಗಳು ಕಾರ್ಯಗಾರದಲ್ಲಿದ್ದರು.