ಬೆಂಗಳೂರು: ಬಿಬಿಎಂಪಿ ಹವಾಮಾನ ಕ್ರಿಯೆ ಕೋಶದ ಹೊಸ ಉಪಕ್ರಮ -ಬೆಂಗಳೂರು ಹವಾಮಾನ ಕ್ರಿಯಾ ಬಳಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಹವಾಮಾನ ಕ್ರಿಯೆ ಕೋಶ, ನಗರದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಹವಾಮಾನ ಕ್ರಿಯೆಯ ಉದ್ದೇಶಗಳಿಗೆ ಒಗ್ಗೂಡಿಸುವ ಸಲುವಾಗಿ ಬೆಂಗಳೂರು ಹವಾಮಾನ ಕ್ರಿಯಾ ಬಳಗ ಕಾರ್ಯಕ್ರಮವನ್ನು ಆರಂಭಿಸಿದೆ.
ಈ ಯೋಜನೆಯು ವಿದ್ಯಾರ್ಥಿಗಳಲ್ಲಿ ಹವಾಮಾನ ಶಿಕ್ಷಣವನ್ನು ಬೋಧಿಸಿ, ಚಟುವಟಿಕೆಗಳ ಮೂಲಕ ಕೈಗೊಳ್ಳಬಹುದಾದ ಪರಿಸರ ಜಾಗೃತಿ ಮತ್ತು ಶಾಶ್ವತ ಅಭಿವೃದ್ಧಿಗೆ ದಾರಿ ನೀಡಲಿದೆ. ಶಾಲೆಗಳಲ್ಲಿನ ಹವಾಮಾನ ಕ್ರಿಯಾ ಬಳಗಗಳು ಬದಲಾವಣೆಗೆ ಪ್ರೇರಕ ಶಕ್ತಿಯಾಗಿದ್ದು, ವಿದ್ಯಾರ್ಥಿಗಳನ್ನು ಹಸಿರು ಸಂವೇದನಾಶೀಲ ನಾಗರಿಕರಾಗಿ ರೂಪಿಸುತ್ತವೆ.
ಈ ಕಾರ್ಯಕ್ರಮವು ಕರ್ನಾಟಕ ಸರ್ಕಾರದ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ಮಾರ್ಗದರ್ಶನ ಹಾಗೂ ಬೆಂಬಲದೊಂದಿಗೆ ಆರಂಭಗೊಂಡಿದ್ದು, ಬೆಂಗಳೂರು ನಗರದಲ್ಲಿನ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಹವಾಮಾನ ಬದಲಾವಣೆಯ ಕುರಿತು ಅರಿವು ಮೂಡಿಸಿ, ನೈಜ ಕ್ರಮಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತದೆ.
2025ರ ಜೂನ್ 5ರ ವಿಶ್ವ ಪರಿಸರ ದಿನದಂದು, ಮೊದಲು ನೋಂದಾಯಿಸಿದ ಶಾಲೆಗಳಿಗೆ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಿಂದ ಪ್ರಶಸ್ತಿ ಹಾಗೂ ಗುರುತಿನ ಪತ್ರ ನೀಡಲಾಗುವುದು. ಮೊದಲ ಹಂತದಲ್ಲಿ 100 ಶಾಲೆಗಳ ನೋಂದಣಿಗೆ ಗುರಿಯಾಗಿದ್ದು, ಮುಂದಿನ ಹಂತಗಳಲ್ಲಿ 6000ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಒಳಗೊಳ್ಳಲು ಉದ್ದೇಶವಾಗಿದೆ.
ಬಿಬಿಎಂಪಿ ಹವಾಮಾನ ಕ್ರಿಯೆ ಕೋಶವು ನಗರದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಈ ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದೆ. ಬೆಂಗಳೂರು ಹವಾಮಾನ ಕ್ರಿಯಾ ಬಳಗದಲ್ಲಿ ಸದಸ್ಯರಾಗಲು ಇಂದೇ ನೊಂದಾಯಿಸಿಕೊಳ್ಳಲು ಭೇಟಿ ನೀಡಿ https://bengaluruclimateactionclubs.in