ಬೆಂಗಳೂರು: ಸತತವಾಗಿ ಪ್ರಯತ್ನವನ್ನು ಮಾಡುತ್ತಿರಬೇಕು. ಸತತ ಪ್ರಯತ್ನ ಪಟ್ಟರೆ ಯಶಸ್ಸು ಸಾಧ್ಯ ಇದಕ್ಕೆ ಭಗೀರಥರೇ ಸಾಕ್ಷಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ತಿಳಿಸಿದರು.
ನಯನ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಶಾಲಾ ಮಕ್ಕಳಿಗೆ ಭಗೀರಥ ಕಥೆಯ ಅವಶ್ಯಕತೆ ಇದೆ. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಮನೆ ಬಿಟ್ಟು ಹೋಗುವುದು, ಇನ್ನಿತರ ಅನಾಹುತವನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಮನಸ್ಸಿಗೆ ನೋವುಂಟಾಗುತ್ತದೆ ಎಂದು ವಿಷಾದವನ್ನು ವ್ಯಕ್ತಪಡಿಸಿದ ಸಚಿವರು ಮಕ್ಕಳಿಗೆ ಭಗೀರಥ, ಮಹಾನ್ ಪುರುಷರ ಕಥೆಯನ್ನು ಪೋಷಕರು ಹೇಳಬೇಕು ಎಂದು ತಿಳಿಸಿದರು.
ಮಹಾತ್ಮರ ಜಯಂತಿಗಳನ್ನು ಸಮಾಜವು ಮಾಡಿದರೆ ಸಮಾಜಕ್ಕೆ ಮಾತ್ರ ಸೀಮಿತವಾಗುತ್ತದೆ. ಸರ್ಕಾರವು ಮಹಾಪುರುಷರ ಜಯಂತಿಯನ್ನು ಆಚರಿಸಿದರೆ ಎಲ್ಲಾ ಜನಾಂಗದವರಿಗೂ ಆಚರಿಸಬಹುದು ಎಂದು ಸರ್ಕಾರವೇ ಜಯಂತಿಗಳನ್ನು ಮಾಡುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಉಪ್ಪಾರ ನಿಗಮಕ್ಕೆ 42 ಕೋಟಿ ಅನುದಾನ ನೀಡಲಾಗಿದೆ. 1600 ಕೋಟಿಗಳನ್ನು ನಿಗಮಗಳಿಗೆ ಒದಗಿಸಲಾಗಿದೆ.. ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮದಲ್ಲಿ ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ, ಅಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬಸವಾದಿ ಶರಣರು, ಬುದ್ದ, ಡಾ. ಬಾಬಾಸಾಹೇಬ್ ಅಂಬೇಡ್ಕರ್, ಸೇರಿದಂತೆ ಹಲವು ಮಹನೀಯರು ಯಾವುದೇ ಒಂದು ಧರ್ಮ ಮತ್ತು ಜಾತಿಗೆ ಸೀಮಿತವಾದವರಲ್ಲ. ಅವರು ಆಗಿನ ಕಾಲದಲ್ಲೇ ಸಮಸಮಾಜ ನಿರ್ಮಾಣದ ಚಿಂತನೆ ನಡೆಸಿದ್ದರು. ಅವರ ಆದರ್ಶವನ್ನು ನಾವು ಪಾಲಿಸಬೇಕು. ಸಮಾಜದಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಸಮಾನತೆ ಇರಬಾರದು. ಸಾಮಾಜಿಕ ನ್ಯಾಯ, ಸಮಾಜದ ಅಭಿವೃದ್ಧಿ, ಒಳಿತಿಗಾಗಿ ಮುಖ್ಯಮಂತ್ರಿಗಳು ಬದ್ದರಾಗಿದ್ದಾರೆ ಎಂದು ತಿಳಿಸಿದರು.
ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಮಹಾತ್ಮರು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಅವರ ಸಾಧನೆ ಕೊಡುಗೆ ಲೋಕಕಲ್ಯಾಣಕ್ಕಾಗಿ. ಮಹಾತ್ಮರ ಆದರ್ಶ, ವಿಚಾರಗಳನ್ನು ಎಲ್ಲರೂ ಪರಿಪಾಲನೆ ಮಾಡಬೇಕೆಂಬ ಉದ್ದೇಶದಿಂದ ಮಹಾತ್ಮರ ಜಯಂತಿಯನ್ನು ಸರ್ಕಾರವು ಆಚರಿಸುತ್ತಿದೆ ಎಂದು ಹೇಳಿದರು.
ಭಗೀರಥ ಗುರುಪೀಠ 33 ಜಯಂತಿಗಳನ್ನು ಆಚರಿಸುತ್ತಿದೆ. ಆಯಾ ಸಮುದಾಯದ ಮುಖಂಡರು, ಗುರುಗಳನ್ನು ಕರೆಸಿ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಭಗೀರಥರು ಇಕ್ವಾಷು ವಂಶದವರು. ಭಗೀರಥರು ಪಂಚಾಗ್ನಿ ತಪಸ್ಸು, ಒಂಟಿ ಕಾಲಿನಲ್ಲಿ ತಪಸ್ಸು, ನೀರಿನ ಒಳಗೆ ಕುಳಿತು ತಪಸ್ಸು ಮುಂತಾದ ತಪಸ್ಸನ್ನು ಆಚರಿಸಿ ತನ್ನ 60000 ಜನ ಪೂರ್ವಜರ ಮೋಕ್ಷಕ್ಕಾಗಿ ಭೂಮಿಗೆ ಗಂಗೆಯನ್ನು ಹರಿಸಿದರು ಎಂದು ತಿಳಿಸಿದರು.
ಉಪ್ಪಾರ ಸಮಾಜದವರು ದೇಶಕ್ಕೆ ಉಪ್ಪನ್ನು ಕೊಟ್ಟ ಸಮಾಜವಾಗಿದೆ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಇದೆ. ಭಗೀರಥ ಮಹರ್ಷಿಗಳ ಏಕ ಶಿಲಾ ಮೂರ್ತಿ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಇದರ ಕಾರ್ಯವು ಪ್ರಾರಂಭವಾಗಿದೆ ಎಂದು ತಿಳಿಸಿದರು. ಹಚ್.ಕೆ.ಬಿ.ಕೆ ತಾಂತ್ರಿಕ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಸಂಗಮೇಶ ಎಸ್. ಗಣಿ ಭಗೀರಥ ಮಹರ್ಷಿಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಯು. ವೆಂಕೋಬ, ಬೆಂಗಳೂರು ನಗರ ಜಿಲ್ಲೆಯ ಉಪ್ಪಾರ ಸಂಘದ ಅಧ್ಯಕ್ಷ ಎನ್.ಸುನೀಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಕೆ.ಎಂ.ಗಾಯತ್ರಿ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಕೆ.ಎನ್.ರವೀಂದ್ರನಾಥ್ ಸೇರಿದಂತೆ ಹಿರಿಯ ಗಣ್ಯರು, ಸಮಾಜದವರು ಉಪಸ್ಥಿತರಿದ್ದರು.