ಬೆಂಗಳೂರು: ಕುಮಾರಸ್ವಾಮಿ ಅವರು ಶಾಸಕರಾಗಿದ್ದ ಚನ್ನಪಟ್ಟಣದಲ್ಲಿ ಜನರು ತಮ್ಮ ಕುಂದುಕೊರತೆಗಳ ಬಗ್ಗೆ 10 ಸಾವಿರ ಅರ್ಜಿಗಳನ್ನು ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಜನರ ಪರ ಕೆಲಸ ಮಾಡಿಲ್ಲ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?” ಎಂದು ಡಿಸಿಎಂ ಡಿಸಿಎಂ ಡಿ. ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
“ಮಂಡ್ಯದ ಜನತಾದರ್ಶನದಲ್ಲಿ ಮೂರುವರೆ ಸಾವಿರ ಅರ್ಜಿಗಳನ್ನು ಸ್ವೀಕಾರ ಮಾಡಿದ್ದೇನೆ. ಸರ್ಕಾರ ಜನರ ಸಮಸ್ಯೆ ನಿವಾರಿಸುವಲ್ಲಿ ವಿಫಲಾಗಿದೆ. ಸಚಿವರು, ಶಾಸಕರು ಕೆಲಸ ಮಾಡಿಲ್ಲ” ಎಂದು ಕುಮಾರಸ್ವಾಮಿ ಅವರು ಮಾಡಿರುವ ಆರೋಪದ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೀಗೆ ತಿರುಗೇಟು ಕೊಟ್ಟರು.
“ಕುಮಾರಸ್ವಾಮಿ ಅವರು ಏನೋ ಒಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮ ಸಮಸ್ಯೆಗಳ ನಿವಾರಣೆಗೆ ಚನ್ನಪಟ್ಟಣದ ಜನರು ಸಾವಿರಾರು ಅರ್ಜಿ ಕೊಟ್ಟಿರುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ದೂರವಾಣಿ ಸಂಖ್ಯೆಯಿದೆ. ಇದಕ್ಕೆ ಏನು ಹೇಳಬೇಕು” ಎಂದು ಮರು ಪ್ರಶ್ನಿಸಿದರು.
ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ “ಕಾರ್ಯಕರ್ತರೊಂದಿಗೆ ನಿಮ್ಮ ಡಿಸಿಎಂ” ಕಾರ್ಯಕ್ರಮದ ನಡುವೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು “ಕುಮಾರಸ್ವಾಮಿ ಒಬ್ಬರೇ ರಾಜಕಾರಣ ಮಾಡುತ್ತಿದ್ದಾರಾ? ನಮಗೂ ರಾಜಕಾರಣ ಬರುತ್ತದೆ. ಆದರೆ ನಮಗೆ ರಾಜಕಾರಣ ಮುಖ್ಯವಲ್ಲ, ಜನರ ಸೇವೆ ಮುಖ್ಯ. ಆದ ಕಾರಣ ಈ ಕಾರ್ಯಕ್ರಮ ಮಾಡುತ್ತಿದ್ದೇವೆ” ಎಂದು ತಿವಿದರು.
*ಮೂಡಾದಲ್ಲಿ ಕಾನೂನು ಪ್ರಕಾರ ಪರಿಹಾರ ನೀಡಲಾಗಿದೆ*
ಮುಡಾ ಅಕ್ರಮದ ದಾಖಲೆಗಳನ್ನು ನಾಶ ಮಾಡಲಾಗುತ್ತಿದೆ, ಹಗರಣ ಮುಚ್ಚಿ ಹಾಕಲಾಗುತ್ತಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ “ಯಾರು ಯಾವುದನ್ನು ಮುಚ್ಚಿ ಹಾಕಬೇಕಾಗಿಲ್ಲ. ಇಲ್ಲಿ ಯಾವುದೇ ಅನ್ಯಾಯವೂ ಆಗಿಲ್ಲ. ಆಸ್ತಿ ಕಳೆದುಕೊಂಡವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಡಾ ನಿಯಮದಂತೆ ಪರಿಹಾರ ನೀಡಲಾಗುತ್ತದೆ. ಬಿಡಿಎನಲ್ಲಿ ಶೇ 60:40 ಅನುಪಾತ ಇದ್ದು ಮೂಡಾದಲ್ಲಿ 50:50 ಅನುಪಾತದಲ್ಲಿ ಪರಿಹಾರ ನೀಡುವಂತೆ ಕಾನೂನು ಮಾಡಿಕೊಂಡಿದ್ದಾರೆ. ಹೀಗಾಗಿ ಕಾನೂನು ಪ್ರಕಾರವೇ ಪರಿಹಾರ ನೀಡಲಾಗಿದೆ. ಸಿಎಂ ಅವರು ಚುನಾವಣಾ ಅಫಿಡವಿಟ್ ನಲ್ಲಿ ತಮ್ಮ ಪತ್ನಿಗೆ ಬಂದಿರುವ ಆಸ್ತಿಗಳ ಬಗ್ಗೆ ಹೇಳಿದ್ದಾರೆ ಎಂದು ತಿಳಿಸಿದರು.
2010 ರಲ್ಲೇ ಆಸ್ತಿ ಬಂದಿದ್ದರೂ ಸಿಎಂ ಅವರು 2013 ರ ಅಫಿಡವಿಟ್ ನಲ್ಲಿ ಈ ಮಾಹಿತಿ ನಮೂದಿಸಿಲ್ಲ ಎಂದು ಮಾಧ್ಯಮದವರು ಮರುಪ್ರಶ್ನಿಸಿದಾಗ, “ಅದು ನನಗೆ ಗೊತ್ತಿಲ್ಲ. ಈ ಬಾರಿಯ ಅಫಿಡವಿಟ್ ನಲ್ಲಿ ಈ ಎಲ್ಲ ಮಾಹಿತಿಯಿದೆ. ಬಿಜೆಪಿ ಸರ್ಕಾರ ಇದ್ದಾಗಲೇ ಅವರಿಗೆ ಪರಿಹಾರ ನೀಡಲಾಗಿದೆ. ಈಗ ಬಿಜೆಪಿಯವರು, ದಳದವರು ರಾಜಕಾರಣ ಮಾಡುತ್ತಿದ್ದಾರೆ. ಪಾಪ ದಳದವರಂತೂ ಈಗ ಇದ್ದಕ್ಕಿದ್ದಂತೆ ಬಹಳ ಅನುಕಂಪ ತೋರಿಸುತ್ತಿದ್ದಾರೆ” ಎಂದು ಕುಟುಕಿದರು.
*13 ಕ್ಕೆ ಮುಖ್ಯಮಂತ್ರಿಗಳಿಂದ ಕಾರ್ಯಕರ್ತರ ಭೇಟಿ*
ಪದಾಧಿಕಾರಿಗಳು, ಕಾರ್ಯಕರ್ತರನ್ನು ಭೇಟಿ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಬೇಕಾಗಿತ್ತು. ಅನ್ಯ ಕಾರ್ಯನಿಮಿತ್ತ ಬರಲಾಗಲಿಲ್ಲ. ಆದರೆ ಜುಲೈ 13 ರಂದು ಭೇಟಿಯಾಗಲಿದ್ದಾರೆ. ಶೀಘ್ರದಲ್ಲೇ ದಿನಕ್ಕೆ ಇಬ್ಬರು ಮಂತ್ರಿಗಳು ಕಾರ್ಯಕರ್ತರನ್ನು ಭೇಟಿಯಾಗುವ ಕಾರ್ಯಕ್ರಮ ರೂಪಿಸಲಾಗುವುದು. ಯಾವ, ಯಾವ ಮಂತ್ರಿಗಳು ಯಾವಾಗ ಲಭ್ಯವಿರಲಿದ್ದಾರೆ ಎನ್ನುವ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು” ಎಂದು ತಿಳಿಸಿದರು.
“ಪಕ್ಷವನ್ನು ಅಧಿಕಾರಕ್ಕೆ ತಂದಂತಹ ಕಾರ್ಯಕರ್ತರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಕರ್ತವ್ಯ. ಹಲವಾರು ಮಂದಿ ತಮ್ಮ ಕ್ಷೇತ್ರದ ಜನರ ಸಮಸ್ಯೆ, ಜಮೀನು ಖಾತೆ, ವೈಯಕ್ತಿಕ ಕುಂದು ಕೊರತೆಗಳು, ಪಕ್ಷದಲ್ಲಿ ಹುದ್ದೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊತ್ತು ತಂದಿದ್ದಾರೆ. ನಮ್ಮ ವ್ಯಾಪ್ತಿಯಲ್ಲಿ ಬಗೆಹರಿಸುವಂತಹ ಸಮಸ್ಯೆಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಆಯಾಯಾ ಇಲಾಖೆಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು” ಎಂದರು.