ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ನಿರ್ದೇಶನದಂತೆ ಮುಂಬರುವ ಬೇಸಿಗೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳ ಸಮರ್ಥ ನಿರ್ವಹಣೆಗೆ ಬೆಂಗಳೂರು ಜಲಮಂಡಳಿ ನೀರು ಸರಬರಾಜು ಮತ್ತು ಸರಬರಾಜು ಮಂಡಳಿ ಸಜ್ಜಾಗುತ್ತಿದೆ. ನಗರದ ಹೊರ ಪ್ರದೇಶಗಳಲ್ಲಿ ಅಂತರ್ಜಲದ ಮೇಲಿನ *ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶೇಷ ಕಾವೇರಿ ಸಂಪರ್ಕ ಅಭಿಯಾನವನ್ನು ನಡೆಸುವಂತೆ ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ನಗರದ ಪೂರ್ವಭಾಗದ ಸೇವಾಠಾಣೆಗಳಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿದವರಿಗೆ ಹೊಸ ಸಂಪರ್ಕ ವಿತರಿಸಿದರು. ನಂತರ ಬೆಂಗಳೂರು ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಕಳೆದ ಬಾರಿ ಬೇಸಿಗೆಯ ಸಂಧರ್ಭದಲ್ಲಿ ಲಭ್ಯವಿದ್ದಂತಹ ನೀರಿನ ಬಳಕೆಯ ಮೂಲಕ ಸಮರ್ಪಕವಾಗಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅಪಾರ್ಟ್ಮೆಂಟ್ ಫೆಡರೇಷನ್ ಸಹಕಾರ ನೀಡಿದೆ. ಕಾವೇರಿ ಐದನೇ ಹಂತದ ಅನುಷ್ಠಾನದ ಬಳಿಕ ಬೆಂಗಳೂರು ಜಲಮಂಡಳಿಯ ಬಳಿ ಸಾಕಷ್ಟು ನೀರು ಲಭ್ಯವಿದೆ. ಈ ಲಭ್ಯವಿರುವ ನೀರನ್ನು ಅಪಾರ್ಟ್ಮೆಂಟ್ಗಳಿಗೆ ಸರಬರಾಜು ಮಾಡಲು ಜಲಮಂಡಳಿ ಸಿದ್ದವಿದೆ. ಕಾವೇರಿ ನೀರಿನ ಸಂಪರ್ಕ ಅಭಿಯಾನದ ಮೂಲಕ ಈಗಾಗಲೇ 2643 ಅಪಾರ್ಟ್ಮೆಂಟ್ಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ಇವುಗಳೀಗೆ ಈಗಾಗಲೇ ಡಿಮ್ಯಾಂಡ್ ನೋಟೀಸ್ ಜಾರಿಗೊಳಿಸಲಾಗಿದೆ. ಇನ್ನು ಸುಮಾರು 1252 ಅಪಾರ್ಟ್ಮೆಂಟ್ ಗಳು ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿರುವ ಹಾಗೂ ಅರ್ಜಿ ಸಲ್ಲಿಸದೇ ಇರುವಂತಹ ಅಪಾರ್ಟ್ಮೆಂಟ್ಗಳ ಪಟ್ಟಿಯನ್ನು ನೀಡಲಾಗುವುದು. ಡಿಮ್ಯಾಂಡ್ ನೋಟೀಸ್ ನೀಡಿರುವ ಅಪಾರ್ಟ್ಮೆಂಟ್ಗಳಿಗೆ ಹಣ ಪಾವತಿಸುವಂತೆ ಹಾಗೂ ಅರ್ಜಿ ಸಲ್ಲಿಸದೇ ಇರುವ ಅಪಾರ್ಟ್ಮೆಂಟ್ಗಳಿಗೆ ಅರ್ಜಿ ಸಲ್ಲಿಸುವಂತೆ ಅಗತ್ಯ ಮಾಹಿತಿ ನೀಡುವಂತೆ ಜಲಮಂಡಳಿ ಅಧ್ಯಕ್ಷರು ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
*ವಿಶೇಷ ಕಾವೇರಿ ಸಂಪರ್ಕ ಅಭಿಯಾನ:*
ನಗರದ ಹೊರ ಪ್ರದೇಶಗಳಲ್ಲಿ ಅಂತರ್ಜಲದ ಮೇಲಿನ ಅವಲಂಬನೆ ಹೆಚ್ಚಾಗಿದೆ. ಬೇಸಿಗೆಯ ಸಂಧರ್ಭದಲ್ಲಿ ಅಂತರ್ಜಲ ಕುಸಿಯವ ಬಗ್ಗೆ ಐಐಎಸ್ಸಿ ವರದಿ ತಿಳಿಸಿದೆ. ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕೊಳಚೆ ಪ್ರದೇಶಗಳು, ಜನಸಾಂದ್ರಿತ ಪ್ರದೇಶಗಳು ಹಾಗೂ ಅಪಾರ್ಟ್ಮೆಂಗಳಿಗೆ ಕಾವೇರಿ ಸಂಪರ್ಕ ನೀಡುವ ನಿಟ್ಟಿನಲ್ಲಿ ವಿಶೇಷ ಅಭಿಯಾನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂಬರುವ ಬೇಸಿಗೆಯ ಬವಣೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಈಗಾಗಲೇ ಕಾರ್ಯ ಪ್ರಾರಂಭಿಸಿದೆ. ಸಾರ್ವಜನಿಕರು ಜಲಮಂಡಳಿಗೆ ಸಹಕಾರ ನೀಡಬೇಕು ಎಂದು ಅಧ್ಯಕ್ಷರು ತಿಳಿಸಿದರು.