ಬೀದರ್ ಜಿಲ್ಲೆ ಬಸವ ಕಲ್ಯಾಣದ ಬಸವ ಮಹಾ ಮನೆ ಟ್ರಸ್ಟ್ ನ ಅಧ್ಯಕ್ಷರಾದ ಪೂಜ್ಯ ಡಾ.ಸಿದ್ದರಾಮ ಶರಣರು ಚೆಲ್ಲಾಳ ರವರು ಯೋಗಜೀವನ ಮಾಡುತ್ತಾ 12ನೇ ಶತಮಾನದ ಶಿವಶರಣರ ತತ್ವ ಸಿದ್ಧಾಂತಗಳನ್ನು ಅಧ್ಯಯನ ಮತ್ತು ಅನುಷ್ಠಾನ ಮಾಡುತ್ತಾ ಶರಣರ ಇತಿಹಾಸವನ್ನು ಸಂಶೋಧನೆ ಮಾಡುತ್ತಾ ಬಂದಿದ್ದಾರೆ. ವಚನಗಳನ್ನು ನಿರ್ವಚನ ಮಾಡುವ ಮಹಾನ್ ತತ್ವಜ್ಞಾನಿಗಳಾಗಿದ್ದಾರೆ. ಷಟಸ್ಥಲ ಮಾರ್ಗದ ವಚನಗಳನ್ನು ಮತ್ತು ಅಲ್ಲಮಪ್ರಭುಗಳ ಬೆಳಗಿನ ವಚನಗಳನ್ನು ಸುಸೂತ್ರವಾಗಿ ಬಿಡಿಸಿ ಅರ್ಥಪೂರ್ಣವಾಗಿ ಬರೆಯುತ್ತಾರೆ. ಆಧ್ಯಾತ್ಮಿಕ ಜೀವಿಗಳಾದ ಶರಣರು ಈ ವರೆಗೆ ಅನೇಕ ಗ್ರಂಥಗಳನ್ನು ಬರೆದು ಬಸವ ತತ್ವವನ್ನು ಶ್ರೀಮಂತ ಗೊಳಿಸಿದ್ದಾರೆ.
12 ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರದಲ್ಲಿ ವಚನ ಸಾಹಿತ್ಯವನ್ನು ಅಭಿವೃದ್ಧಿಪಡಿಸಿ ಪ್ರಸಾರ ಮಾಡಿದ ಆಧುನಿಕ ವಚನಕಾರರು ವಿದ್ವಾಂಸರು, ಸಾಹಿತಿಗಳು, ತತ್ವಜ್ಞಾನಿಗಳು, ಕವಿಗಳು, ಪ್ರೌಢದೇವರಾಯ ಹೀಗೆ ವಚನ ಸಾಹಿತ್ಯವನ್ನು ಕೃಷಿ ಮಾಡಿ ಮುಂದಿನ ತಲೆಮಾರುಗಳಿಗೆ ತಲುಪಿಸಿದವರ ಬಗ್ಗೆ ಸತ್ಯಾ ಸತ್ಯಗಳ ಅಧ್ಯಯನ ಮತ್ತು ಸಂಶೋಧನೆಯನ್ನು ಮಾಡಿದ್ದಾರೆ. ಇವರ ಸುಮಾರು ಮೂರು ವರ್ಷಗಳ ನಿರಂತರ ಸಾಧನೆಯ ಫಲವಾಗಿ “ಸತ್ಯ ಶರಣರು ಸತ್ಯ ಶೋಧ” ಎನ್ನುವ ಬೃಹತ್ ಸಂಶೋಧನಾ ಗ್ರಂಥ ಬಿಡುಗಡೆಗೆ ಸಿದ್ದವಾಗಿದೆ. ಪೂಜ್ಯ ಡಾ. ಸಿದ್ದರಾಮಯ್ಯ ಶರಣರು ಬೆಲ್ಲಾಳ ರವರು ದಿನಾಂಕ 9-3-2025 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣ ಮತ್ತು ಬಸವ ಸಮಿತಿ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಬಸವ ಸಮಿತಿ ಅನುಭವ ಮಂಟಪದಲ್ಲಿ ಲೋಕಾರ್ಪಣೆ ಮಾಡಲು ಬಯಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪೂಜ್ಯ ಡಾ.ಶರತ್ ಚಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಶಿವರಾಜ್ ಪಾಟೀಲ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಎಂ. ಬಿ ಪಾಟೀಲರವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಡಾ. ಎಚ್. ಸಿ ಮಹದೇವಪ್ಪ ಸಮಾಜ ಕಲ್ಯಾಣ ಸಚಿವರು ಭಾಗವಹಿಸಲಿದ್ದು, ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿಯವರು ಸಹ ಅತಿಥಿಗಳಾಗಿ ಭಾಗವಹಿಸಲಿದ್ದು ಸ್ವಾಗತವನ್ನು ಶ್ರೀಕಾಂತ ಸ್ವಾಮಿ ಕರ್ನಾಟಕ ರಾಜ್ಯ ಲಿಂಗಾಯತ ಸಮನ್ವಯ ಸಮಿತಿ ಇವರು ಮಾಡಲಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಪೂಜ್ಯ ಸತ್ಯ ದೇವಿ ತಾಯಿಯವರು ಬಸವ ಮಹಾಮನೆ ಟ್ರಸ್ಟ್ ಇವರು ಮಾಡಲಿದ್ದಾರೆ. ಅನೇಕ ಪೂಜ್ಯರು ಬಸವಭಕ್ತರು ಸತ್ಯ ಚಿಂತಕರು ಭಾಗವಹಿಸಲಿದ್ದಾರೆ.