ಬೆಂಗಳೂರು: ಪರಿಪೂರ್ಣದೆಡೆಗೆ ಸಾಗುವುದೇ ಮನುಷ್ಯನ ಪರಮ ಗುರಿ. ಆರಿವು ಆದರ್ಶಗಳನ್ನು ಬೋಧಿಸಿ ಉದ್ಧರಿಸಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು, ಅವರು ಬೋಧಿಸಿದ ತತ್ವ ಸಿದ್ಧಾಂತಗಳು ಶಾಂತಿ ನೆಮ್ಮದಿಯ ಬದುಕಿಗೆ ಮೂಲ ಸೆಲೆಯಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಭವ್ಯ ಸಭಾಂಗಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣುಗಳು ಇದ್ದಹಾಗೆ. ಭಾರತೀಯ ಸಂಸ್ಕೃತಿಯನ್ನು ಆಚಾರ್ಯರು, ಋಷಿ ಮುನಿಗಳು ಸಂತ ಮಹನೀಯರು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಧರ್ಮ ಮತ್ತು ಆಚರಣೆ ಬೇರೆ ಬೇರೆಯಾದರೂ ತಲುಪುವ ಗುರಿ ಎಲ್ಲರದೂ ಒಂದೇಯಾಗಿರುತ್ತದೆ ಎಂದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದೈತ ತತ್ವ ಸಿದ್ಧಾಂತಗಳ ಅರಿವು ಮಾನವ ಜೀವನದ ಸುಖ ಶಾಂತಿಯ ಬದುಕಿಗೆ ಗಂಗೋತ್ರಿಯಾಗಿದೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳನ್ನು ಬೋಧಿಸಿ ಸಕಲರನ್ನು ಉದ್ಧರಿಸಿದ ಶ್ರೇಯಸ್ಸು ಅವರದಾಗಿದೆ. ಕಾಯಕ ಮತ್ತು ದಾಸೋಹದ ಮೂಲಕ ಸಂತೃಪ್ತಿ ಬದುಕಿಗೆ ಸ್ಫೂರ್ತಿಯ ಸೆಲೆಯಾದವರು. ಇಂಥ ಮಹಾತ್ಮರ ಜಯಂತಿ ಆಚರಿಸುತ್ತಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ರೋಣ ಶಾಸಕರಾದ ಜಿ.ಎಸ್.ಪಾಟೀಲ ಮಾತನಾಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾವತಾರಿಗಳಾಗಿ ಅವತರಿಸಿ ಭೂ ಮಂಡಲದಲ್ಲಿ ವೀರಶೈವ ಸಿದ್ಧಾಂತವನ್ನು ಪ್ರತಿಷ್ಠಾಪನೆಗೈದ ಕೀರ್ತಿ ಅವರದು. ಅವರು ಈ ನಾಡಿನ ಸಂಸ್ಕೃತಿಗೆ ಮತ್ತು ಪರಂಪರೆಗೆ ಕೊಟ್ಟ ಕೊಡುಗೆ ಅಮೂಲ್ಯ ಎಂದರು.
ಮಹಲಿಂಗಪುರದ ವಿನಾಯಕ ಚಿಕ್ಕೋಡಿ ಇವರು ರೇಖಾ ಚಿತ್ರದಲ್ಲಿ ಬಿಡಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ನವಲೀಲೆಯ ಭಾವಚಿತ್ರಗಳನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಇವರು ಅನಾವರಣಗೊಳಿಸಿ ಹರುಷ ವ್ಯಕ್ತಪಡಿಸಿದರು. ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಚ್.ವಿ.ಪಂಚಾಕ್ಷರಯ್ಯ ಅವರು ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳನ್ನು ಕುರಿತು ಉಪನ್ಯಾಸ ನೀಡಿದರು. ಸಮಾರಂಭದ ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು ಉಪದೇಶಗಳನ್ನು ನೀಡಿದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪುರಸ್ಕಾರ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಯು.ಎಂ.ಬಸವರಾಜ ವಹಿಸಿದ್ದರು. ಡಾ.ರೂಪ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ಜರುಗಿತು. ಡಾ.ಪ್ರೇಮ ಸಿದ್ಧರಾಜು ಸ್ವಾಗತಿಸಿದರು. ಡಾ.ಮಮತಾ ಸಾಲಿಮಠ ಮತ್ತು ಲಾವಣ್ಯ ಜಿ.ಕೆ. ನಿರೂಪಿಸಿದರು. ಇದೆ ವೇಳೆ ಸಮಾಜದ ಮುಖಂಡರು, ಪದಾಧಿಕಾರಿಗಳು, ರೇಣುಕಾ ಚಾರ್ಯ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.