ಬೆಂಗಳೂರು: ಒಳಮೀಸಲಾತಿ ವಿಚಾರದಲ್ಲಿ ನ್ಯಾ. ನಾಗಮೋಹನದಾಸರವರು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿಯಲ್ಲಿ ಸುಪ್ರೀಂ ಕೋರ್ಟಿನ ಆದೇಶದಂತೆ ಎಂಪಿರಿಕಲ್ ಡಾಟಾ (ಪ್ರಾಯೋಗಿಕ ದತ್ತಾಂಶ) ಸಂಗ್ರಹಣೆ ಮಾಡದೇ ಒಳಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಬರುವ ಪ್ರತಿಯೊಂದು ಜಾತಿಯ ಸ್ಥಿತಿಗತಿ ಕುರಿತು ಅಧ್ಯಯನ ಮಾಡಲು ಆದೇಶಿಸಿದೆ ಎಂದು ಕರ್ನಾಟಕ ಬಂಜಾರಾ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ರಾಜ ನಾಯಕ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆಯೋಗವು ಶಾಲಾ ಶಿಕ್ಷಕರನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿ ಮೇ 5 ರಿಂದ ಮೇ 17ರವರೆಗೆ ಸಮೀಕ್ಷೆ ಕಾರ್ಯ ನಡೆಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಸರ್ಕಾರ ಜಾತಿ ಸಮೀಕ್ಷೆ ಅಚ್ಚುಕಟ್ಟಾಗಿ ನಡೆಸಿ ಜಾತಿಗಳ ಅಂಕಿ ಅಂಶಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಒಳಮೀಸಲಾತಿಯ ಸಮೀಕ್ಷೆ ಆಗಿರುವ ಆತಂಕಗಳ ಅವಗಾಹನೆಗೆ ಸಲ್ಲಿಕೆಯ ಕೆಲವು ಅಂಶಗಳು
1. ಆಯೋಗ ಕೈಗೊಳ್ಳುತ್ತಿರುವ ಸಮೀಕ್ಷೆಯಲ್ಲಿ ಯಾವ ಯಾವ ಅಂಶಗಳ ಕುರಿತು ಜನರು ವಿವರ ನೀಡಬೇಕೆಂಬುದು ಇದುವರೆಗೆ ಯಾರಿಗೂ ತಿಳಿದಿಲ್ಲ. ನಾವು ಪ್ರತಿನಿಧಿಸುವ ಜಾತಿಯ ಬಹುಪಾಲು ಜನರು ದಾಖಲೆ ರಹಿತ ಜನವಸತಿಗಳಲ್ಲಿ ವಾಸಿವಿರುವ ಅಮಾಯಕರು, ಅನಕ್ಷರಸ್ತರು ಮತ್ತು ಅರೆಕಾಲಿಕ ಉದ್ಯೋಗಕ್ಕಾಗಿ ತಮ್ಮ ತಾಂಡಾಗಳನ್ನು ಬಿಟ್ಟು ಹೊರ ರಾಜ್ಯ, ಹೊರ ಜಿಲ್ಲೆಗಳಿಗೆ ವಲಸೆ ಹೋಗಿರುವವರಾಗಿದ್ದಾರೆ. ಆಯೋಗದ ಸಮೀಕ್ಷಾ ವೇಳಾ ಪಟ್ಟಿ ಗಮನಿಸಿದರೆ ಅವರ ಎಲ್ಲಾ ಮಾಹಿತಿ ಸಂಗ್ರಹಿಸಲು ಸಾಧ್ಯವಿಲ್ಲಾ.
2. ಪರಿಶಿಷ್ಟ ಜಾತಿಗಳ ಜೀವನ ವಿಧಾನ, ವಾಸಸ್ಥಾನ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಸ್ಥಿತಿಗತಿಗಳು ಜಾತಿ ಜಾತಿಗೆ ವಿಭಿನ್ನವಾಗಿರುತ್ತವೆ. ಅವುಗಳ ವಾಸ್ತವಾಂಶವನ್ನು ತಿಳಿಯಲು ನಡೆಸಲು ಉದ್ದೇಶಿಸಿದ ಸಮೀಕ್ಷೆಯ ನಮೂನೆಯಲ್ಲಿ ಆ ಮಾಹಿತಿಗಳು ಸಂಗ್ರಹಣೆಯಾಗುವಂತೆ ಮಾಡಲು ಅವಶ್ಯವಿರುವ ಎಲ್ಲಾ ಅಂಶಗಳು ಒಳಗೊಂಡಿರಬೇಕಾಗುತ್ತದೆ. ಅವು ಸೇರಿವೆಯೊ ಅಥವಾ ಇಲ್ಲವೋ ಎಂಬುದರ ಮಾಹಿತಿ ನಮಗಿಲ್ಲದಿರುವುದರಿಂದ ಸಧ್ಯಕ್ಕೆ ನಮ್ಮ ಹಾಗೂ ನಮ್ಮಂತೆ ಇರುವ ಇತರೆ ಕೆಲವು ಜಾತಿಗಳಿಗೆ ಸಂಬಂದಿಸಿದ ಕೆಲವು ವಿಶಿಷ್ಟ ಮಾಹಿತಿಗಳ ಸಂಗ್ರಹಕ್ಕೆ ಸಮೀಕ್ಷಾ ನಮೂನೆಯಲ್ಲಿ ಅವಕಾಶವಿರಬೇಕು. ಅದಕ್ಕಾಗಿ ಈ ವಿಷಯ/ಅಂಶಗಳನ್ನು ಹೆಚ್ಚುವರಿಯಾಗಿ ಸಮೀಕ್ಷಾ ನಮೂನೆಯಲ್ಲಿ ಸೇರಿಸಲು ಕೋರುತ್ತೇವೆ.
3. ಸಮೀಕ್ಷೆಗೆ ನೀಡಿರುವ ಸಮಯದ ಅವಧಿಯೊಳಗೆ ಅರೆಕಾಲಿಕ ಉದ್ಯೋಗಕ್ಕಾಗಿ ತಾಂಡಾಗಳಿಂದ ಹೊರಗೆ ಹೋಗಿರುವ ಕುಟುಂಬಗಳ ಜನರು ವಾಪಸಾಗುವುದಿಲ್ಲ. ಅವರನ್ನು ಕರೆತರುವುದು ಕಷ್ಟದ ಕೆಲಸ. ಅದಕ್ಕಾಗಿ ಈ ಸಮೀಕ್ಷಾ ಅವಧಿಯನ್ನು ದೀಪಾವಳಿಯವರೆಗೆ ಮುಂದುವರೆಸಲು ಅಥವಾ ಅವರು ಕೆಲಸ ಮಾಡುವ ಸ್ಥಳಗಳಿಗೆ ಸಮೀಕ್ಷಕರನ್ನು ನಿಯೋಜಿಸಿ ಮಾಹಿತಿಗಳನ್ನು ಸಂಗ್ರಹಣೆ ಮಾಡಿಸಲು ಅಥವಾ ಅವರ ಪರವಾಗಿ ಮಾಹಿತಿ ಕೊಡಲು ಬೇರೆಯವರಿಗೆ ಅವಕಾಶ ಕಲ್ಪಿಸುವ ದಿಶೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲು ಕೋರುತ್ತೇವೆ.
4. ಕೇಂದ್ರ ಸರ್ಕಾರ ಜಾತಿಗಣತಿ ಮಾಡಲು ನಿರ್ಧಾರ ಮಾಡಿದ್ದು, ಕೇಂದ್ರ ಸರ್ಕಾರದ ಜಾತಿಗಣತಿಯು ವೈಜ್ಞಾನಿಕವಾಗಿ ಮಾಡುವುದರಿಂದ ಯಾವುದೆ ಸಮುದಾಯಗಳಿಗೂ ಅನ್ಯಾಯ ಆಗುವುದಿಲ್ಲಾ. ಹಾಗಾಗಿ ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕಾಗಿ ಕೈಗೊಳ್ಳುತ್ತಿರುವ ಸಮೀಕ್ಷೆಯ ಪ್ರಮೇಯವೇ ಬರುವುದಿಲ್ಲಾ.
5. ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕಾಗಿ ಕೈಗೊಳ್ಳುತ್ತಿರುವ ಸಮೀಕ್ಷೆಯು ತರಾತುರಿಯಲ್ಲಿ ನಡೆಯುವುದರಿಂದ ಸಮಂಜಸವಾದ ವರದಿ ಬರಲು ಸಾಧ್ಯವಿಲ್ಲಾ ಹಾಗಾಗಿ ಎಲ್ಲಾ ಸಮುದಾಯಗಳಿಗೆ ಅನ್ಯಾಯವಾಗುತ್ತದೆ.
6. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಮ್ಮ ಸಮುದಾಯದ ಮುಖಂಡರುಗಳು ಹಲವಾರು ಬಾರಿ ಭೇಟಿ ಮಾಡಿ ಸಭೆ ನಡೆಸಲು ಮನವಿ ಮಾಡಿದರು ಸಭೆ ಮಾಡದೆ ಯಾವುದೋ ಹಿತಾಶಕ್ತಿಗೆ ಮುಣಿದು ಕೆಲವೇ ಸಮುದಾಯಗಳ ಸಭೆ ನಡೆಸಿ ನಮ್ಮ ಸಮುದಾಯವ್ಯನ್ನು ಕಡೆಗಣಿಸಿದ್ದಾರೆ.
7. ಪರಿಶಿಷ್ಟ ಜಾತಿಗಳ ಸಮುದಾಯಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗೆ ಬಳಸಿ ಅವರಿಗೆ ಅನ್ಯಾಯ ಮಾಡುತ್ತಾ ಬಂದಿವೆ.
ಹೀಗಾಗಿ ಸರ್ಕಾರ ಲಂಬಾಣಿ ಸಮುದಾಯದ ಬಗ್ಗೆ ಸರಿಯಾದ ಸಮೀಕ್ಷೆ ನಡೆಸಿ ಈಗ ನಡೆಸಿರುವ ಅಂಕಿ ಅಂಶಗಳು ಸರಿಯಾಗಿಲ್ಲದ ಕಾರಣ, ಸರಿಯಾಗಿ ನಡೆಸಿ ಸೂಕ್ತ ಅಂಕಿ ಅಂಶಗಳು ಸಿಗಬೇಕು, ನಮಗೆ ಇರುವ ಅಂಕಿ ಅಂಶಗಳ ಪ್ರಕಾರ ಸರ್ಕಾರ ನಡೆಸಿ ಜಾತಿ ಸಮೀಕ್ಷೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಪರಮೇಶ ನಾಯಕ, ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್, ಧರ್ಮ ನಾಯ್ಕ್,ಅಶೋಕ್,ಹನುಮಂತ ರಾಮ್ ನಾಯ್ಕ್ ಸೇರಿ ಹಲವರು ಉಪಸ್ಥಿತಿತರುದ್ದರು.