ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ 65 ಆಧುನಿಕ ಜೀವ ರಕ್ಷಕ ಸವಲತ್ತುಗಳಿರುವ ಅ್ಯಂಬುಲೆನ್ಸ್ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು.
ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ ಅಡಿಯಲ್ಲಿ ನೂತನ 65 ಅ್ಯಂಬುಲೆನ್ಸ್ಗಳನ್ನು ಲೋಕಾರ್ಪಣೆ” ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ಅಪಘಾತದ ಸಂದರ್ಭದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳ ಜೀವ ರಕ್ಷಣೆ ಮಾಡುವುದು ಬಹಳ ಮುಖ್ಯ. ಈ ಸಮಯವನ್ನು ಗೋಲ್ಡನ್ ಅವರ್ ಎಂದೇ ತಿಳಿಯಬೇಕು. ಸಕಾಲದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಜೀವ ರಕ್ಷಣೆ ಮಾಡಬೇಕು. ಸಮಯಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಬೇಕು. ಸಕಾಲದಲ್ಲಿ ತುರ್ತು ಚಿಕಿತ್ಸೆ ಸಿಕ್ಕರೆ ನೂರಾರು ಪ್ರಾಣಗಳನ್ನು ಉಳಿಸಲು ಸಾಧ್ಯವಿದೆ. ಈ ಪ್ರಾಣ ಉಳಿಸುವ ಕಾರ್ಯಕ್ಕೆ ಈ ಅ್ಯಂಬುಲೆನ್ಸ್ಗಳು ನೆರವಾಗುತ್ತವೆ. ಸದ್ಯ 65 ಆಧುನಿಕ ಮತ್ತು ಪ್ರಾಥಮಿಕ ಅ್ಯಂಬುಲೆನ್ಸ್ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಆಧುನಿಕ ಸವಲತ್ತುಗಳಿರುವ ಅ್ಯಂಬುಲೆನ್ಸ್ ಗಳನ್ನು ವಿಸ್ತರಿಸಲಾಗುವುದು ಎಂದರು.
ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳು ಸಂಭವಿಸುವುದೇ ಇಲ್ಲ. ಕುಡಿದು ವಾಹನ ಓಡಿಸುವುದನ್ನು ನಿಲ್ಲಿಸಿದರೆ ನೂರಕ್ಕೆ ನೂರರಷ್ಟು ಅಪಘಾತಗಳು ತಪ್ಪುತ್ತವೆ. ಇದರಿಂದ ಕುಟುಂಬಗಳು ಅನಾಥವಾಗುವುದು ತಪ್ಪುತ್ತದೆ. ಆದ್ದರಿಂದ ಯಾರೂ ಸಹ ಯಾವ ಸಮಯದಲ್ಲಾರೂ ಸಹ ಕುಡಿದು ಯಾವುದೇ ತರದ ವಾಹನವನ್ನು ಚಾಲನೆ ಮಾಡಬಾರದು. ಅದರಲ್ಲಿ ಯುವ ಸಮೂಹ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಚಾಲನೆಯಲ್ಲಿ ಮೊಬೈಲ್ ಬಳಸಬಾರದು!
ವಾಹನಗಳನ್ನು ಚಾಲನೆ ಮಾಡುವಾಗ ಮೊಬೈಲ್ ಬಳಸಬಾರದು. ಮೊಬೈಲ್ನಲ್ಲಿ ಮಾತಾಡಿಕೊಂಡು ವಾಹನ ಓಡಿಸಿದರೆ ನಮ್ಮ ಗಮನ ಬೇರೆಡೆಗೆ ಹರಿದು ಅಪಘಾತಗಳಾಗುತ್ತವೆ. ಆದ್ದರಿಂದ ಚಾಲನಾ ಸಮಯದಲ್ಲಿ ಮೊಬೈಲ್ ಬಳಕೆಯನ್ನು ತಪ್ಪಿಸಬೇಕು. ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ. ನಿಮ್ಮ ಕುಟುಂಬಕ್ಕೆ ನೀವೇ ಜವಾಬ್ದಾರಿ. ಆದ್ದರಿಂದ ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಸಂಚಾರಿ ನಿಯಮ ಪಾಲಿಸದೆ ವಾಹನ ಓಡಿಸುವವರ, ಕುಡಿದು ವಾಹನ ಚಲಾಯಿಸುವರ ಚಾಲನಾ ಪರವಾನಗಿಯನ್ನು ರದ್ದು ಮಾಡಲು ಮುಖ್ಯಮಂತ್ರಿಗಳು ಸಾರಿಗೆ ಸಚಿವರಿಗೆ ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ರಾಜ್ಯದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು, ಸಾವು ನೋವುಗಳನ್ನು ನಿಯಂತ್ರಿಸಲು ರಸ್ತೆ ಸುರಕ್ಷತಾ ಕ್ರಮಗಳನ್ನು ರೂಪಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಘಟಿಸುವ ಅಪಘಾತಗಳಲ್ಲಿನ ಗಾಯಾಳುಗಳಿಗೆ ತ್ವರಿತ ಸ್ಪಂದನೆ ಮತ್ತು ಚಿಕಿತ್ಸೆ ನೀಡಲು ಅನುವಾಗುವಂತೆ ಆರೋಗ್ಯ ಸಂಸ್ಥೆಗಳಿಗೆ ರವಾನೆ ಮಾಡಲು ನೂತನ ಆಂಬುಲೆನ್ಸ್ಗಳು ಕಾಯಾಚರಣೆ ಮಾಡಲಿದೆ ಎಂದು ತಿಳಿಸಿದರು.
ನೂತನ 65 ಆ್ಯಂಬುಲೆನ್ಸ್ಗಳಲ್ಲಿ 26 ಅಡ್ವಾನ್ಸ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಹಾಗೂ 39 ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್. ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ಗಳು ಮೂಲಭೂತ ಜೀವ ರಕ್ಷಕ ಸಲಕರಣೆಗಳನ್ನು ಹೊಂದಿದೆ. 26 ಅಡ್ವಾನ್ಸ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ಗಳು ಟ್ರಾನ್ಸ್ಪೋರ್ಟ್ ವೆಂಟಿಲೇಟರ್ ಮತ್ತು ಡಿಫಿಬ್ರಿಲೇಟರ್ಗಳನ್ನು ಹೊಂದಿದ್ದು, ಸದರಿ ಉಪಕರಣಗಳಿಂದ ಹೃದಯ ಮತ್ತು ಉಸಿರಾಟದ ತುರ್ತುಸ್ಥಿತಿಗಳನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರುಈ ಆ್ಯಂಬುಲೆನ್ಸ್ಗಳನ್ನು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಸನಿಹದಲ್ಲಿರುವ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ನೀಡಲಾಗುವುದು ಮತ್ತು ಅಂತರ ಆರೋಗ್ಯ ಸಂಸ್ಥೆಗಳಿಗೆ ತ್ವರಿತವಾಗಿ ಅಪಘಾತಕ್ಕೆ ಒಳಗಾದ ಗಾಯಾಳುಗಳನ್ನು ರವಾನೆ ಮಾಡಲು ಬಳಸಲಾಗುವುದು ಎಂದು ತಿಳಿಸಿದರು.
ಸಾರಿಗೆ, ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ವರದಿಯನ್ವಯ 2023ನೇ ವರ್ಷದಲ್ಲಿ ಒಟ್ಟಾರೆ 40,456 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 9844 ಜನರು ಮೃತಪಟಿದ್ದು, 30,612 ಜನರು ಗಾಯಾಳುಗಳಾಗಿರುತ್ತಾರೆ ಎಂದು ನುಡಿದರು.
ಸಾರ್ವಜನಿಕರು ಟ್ರಾಫಿಕ್ ರೂಲ್ಸ್ ಮಾಡಿ
ಅಪಘಾತ, ಅಪಘಾತದಿಂದ ಮೃತಪಡುವವರ ಸಂಖ್ಯೆಯ ಪ್ರಮಾಣ ಕಡಿಮೆ ಮಾಡಲು ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿದೆ. ಸಾರ್ವಜನಿಕರು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ.ರೇವಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ, ಸೇರಿದಂತೆ ಹಲವು ಮುಖಂಡರು ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.