ಚಿಕ್ಕಮಗಳೂರು: ಮಂಗಳವಾರ ನಿಧನರಾದ ನಾಡು ಕಂಡ ಹಿರಿಯ ಮುತ್ಸದ್ದಿ ಹಾಗೂ ರಾಜಕಾರಣಿ ಡಿ.ಬಿ ಚಂದ್ರೇಗೌಡರ ಅಂತಿಮ ದರ್ಶನವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರು ಅವರು ಪಡೆದರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆಯಲಿರುವ ಚಂದ್ರೇಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಡಿ.ಬಿ ಚಂದ್ರೇಗೌಡರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಚಂದ್ರು, ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು.
ನಮ್ಮಿಬ್ಬರ ನಡುವೆ 35 ವರ್ಷಗಳ ಒಡನಾಟವಿದೆ, ರಾಜಕೀಯ ಮಾತ್ರವಲ್ಲದ ಸಾಹಿತ್ಯ, ಸಂಗೀತ ಮತ್ತು ನಾಟಕ ಕ್ಷೇತ್ರದಲ್ಲಿ ಕೂಡ ಚಂದ್ರೇಗೌಡರು ಆಸಕ್ತಿ ಹೊಂದಿದ್ದರು. 1985ರಲ್ಲಿ ಎಂಎಲ್ಎ, ಎಂಎಲ್ಸಿಯಾಗಿದ್ದ ಸಂದರ್ಭದಲ್ಲಿ ಅವರ ಜೊತೆ ಸದನದಲ್ಲಿ ಭಾಗವಹಿಸಿದ್ದೆ, ಅವರದ್ದು ಅಪರೂಪದ ವ್ಯಕ್ತಿತ್ವ ಎಂದರು.
ರಾಜಕೀಯದಲ್ಲಿ ಸಾಕಷ್ಟು ಎತ್ತರಕ್ಕೆ ಏರಿದರೂ ಕೂಡ ಅವರು ನಿಗರ್ವಿಯಾಗಿದ್ದರು. ಹಲವು ಪಕ್ಷಗಳಲ್ಲಿ ಓಡಾಡಿದರು ಅವರು ಅಜಾತಶತ್ರುವಾಗಿದ್ದರು. ರಾಜಕೀಯ ಹೊರತಾಗಿಯೂ ಅವರು ಹಲವು ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು ಎಂದರು.
ಅಲ್ಲದೆ ತಮ್ಮ ರಾಜಕೀಯ ಜೀವನದಲ್ಲಿ ಅವರು ಕಪ್ಪುಚುಕ್ಕೆ ಹೊಂದಿರಲಿಲ್ಲ, ಅಂತಹವರು ಅಪರೂಪ, ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ಕರುಣಿಸಲಿ, ಅವರ ಕುಟುಂಬಕ್ಕೆ ಧೈರ್ಯ ಕೊಡಲಿ ಎಂದು ನಾನು ಪಕ್ಷ ಮತ್ತು ರಾಜ್ಯದ ಜನತೆ ಪರವಾಗಿ ಕೋರುತ್ತೇನೆ ಎಂದರು.
ರಾಜಕಾರಣ ಬಹಳ ಬದಲಾಗಿದೆ
ಅಂದಿನ ರಾಜಕೀಯಕ್ಕೂ ಇಂದಿನ ರಾಜಕೀಯಕ್ಕೂ ಸಾಕಷ್ಟು ವ್ಯತ್ಯಾಸವಿದೆ, ಇಂದಿನ ರಾಜಕೀಯ ಸಾಕಷ್ಟು ಕಲುಷಿತವಾಗಿದೆ, ಅಂದಿನ ರಾಜಕಾರಣದಲ್ಲಿ ಮೌಲ್ಯಕ್ಕೆ ಬೆಲೆ ಇತ್ತು, ಅಂದು ತಪ್ಪು ಮಾಡಿದರೆ ರಾಜಕೀಯದಲ್ಲಿ ಇರಬೇಕಿತ್ತಾ ಎಂದು ಯೋಚಿಸುತ್ತಿದ್ದರು. ಇಂದು ಅದು ರಾಜಕೀಯದ ಭಾಗವಾಗಿ ಹೋಗಿದೆ, ಅಂದು ನಾವು ಜನಸೇವಕರು ಎನ್ನುವ ಭಾವನೆ ರಾಜಕಾರಣಿಗಳಲ್ಲಿತ್ತು, ಇಂದು ಜನ ನಮ್ಮ ಸೇವಕರು ಎನ್ನುವಂತಾಗಿದೆ, ಎಲ್ಲರೂ ಅಲ್ಲದಿದ್ದರೂ ಬಹುತೇಕ ರಾಜಕಾರಣಿಗಳ ಮನಸ್ಥಿತಿ ಇದೇ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭೆ ಹಾಗೂ ವಿಧಾನಸಭೆಯ ನಾಲ್ಕು ಸದನಗಳಲ್ಲಿ ಚಂದ್ರೇಗೌಡರು ಅತ್ಯಂತ ಕ್ರಿಯಾಶೀಲರಾಗಿದ್ದರು, ಈಗಿನ ಮತ್ತು ಮುಂದಿನ ಪೀಳಿಗೆಯ ರಾಜಕಾರಣಿಗಳಿಗೆ ಅವರ ಬದುಕು ಮಾದರಿಯಾಗಿದೆ ಎಂದು ಹೇಳಿದರು. ಆಮ್ ಆದ್ಮಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದರ್ಶನ್ ಜೈನ್ ಹಾಗೂ ಪ್ರಧಾನ ಕಾರ್ಯದರ್ಶಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.