ಬೆಂಗಳೂರು:ನವೆಂಬರ್ 9ರಂದು ಅರಮನೆ ಮೈದಾನದಲ್ಲಿ ಸೇವಾದಳದ ಶತಮಾನೋತ್ಸವ ಹಾಗೂ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಸೇವಾದಳದ ಅಧ್ಯಕ್ಷರಾದ ಲಾಲ್ ಜಿ ಅವರು ಧ್ವಜಾರೋಹಣ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಸಚಿವರುಗಳು ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಇದೇ ತಿಂಗಳ 28ರಂದು ಸೇವಾದಳ ನೂರು ವರ್ಷಗಳನ್ನು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಮೂಲಕ ಸೇವಾದಳದ ಇತಿಹಾಸದ ಬಗ್ಗೆ ದೇಶಕ್ಕೆ ಸಂದೇಶ ರವಾನಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸೇವಾದಳದ 3 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಮುಂದಿನ ದಿನಗಳಲ್ಲಿ ಸೇವಾದಳ ಯಾವ ರೀತಿ ಕೆಲಸ ಮಾಡಬೇಕು, ಲೋಕಸಭೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಮಾಡಬೇಕು ಎಂದು ಈ ಕಾರ್ಯಕ್ರಮದಲ್ಲಿ ಚರ್ಚೆಯಾಗಲಿದೆ.
ಇನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಸಚಿವರುಗಳನ್ನು ನಿಯೋಜನೆ ಮಾಡಲಾಗಿದ್ದು, ಶೇ.75ರಷ್ಟು ಸಚಿವರು ಜಿಲ್ಲೆಗಳಲ್ಲಿ ಸಭೆ ಮಾಡಿದ್ದಾರೆ. ಮುಂದಿನ ಒಂದು ವಾರಗಳಲ್ಲಿ ಮಂತ್ರಿಗಳು ಹಾಗೂ ವೀಕ್ಷಕರುಗಳು ಲೋಕಸಭೆ ಚುನಾವಣೆಯ ಸಂಭಾವ್ಯ ಅಭ್ಯರ್ಥಿ ಕುರಿತು ವರದಿ ಸಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ನಂತರ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಉಸ್ತುವಾರಿ ಸಚಿವರಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚರ್ಚೆ ಮಾಡಿ ನಂತರ ನಮ್ಮ ಹೈಕಮಾಂಡ್ ಗೆ ವರದಿ ಸಲ್ಲಿಸಲಿದ್ದಾರೆ. ಮುಂಬರುವ ಜನವರಿ 2ನೇ ವಾರದಲ್ಲಿ ಲೋಕಸಭೆ ಅಭ್ಯರ್ಥಿಗಳ ಘೋಷಣೆ ಆಗಲಿದೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಾವು ಲೋಕಸಭೆ ಚುನಾವಣೆ ತಯಾರಿ ಮಾಡಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಮ್ಮ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿ ಆಗಿದ್ದು, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಮ್ಮ ಸರ್ಕಾರ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ರೂಪಿಸುತ್ತಿದೆ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶಈರ್ವಾದ ಮಾಡುವ ವಿಶ್ವಾಸವಿದೆ. ನಮ್ಮ ಪಕ್ಷ ಕನಿಷ್ಠ 20 ಸೀಟುಗಳನ್ನು ರಾಜ್ಯದಲ್ಲಿ ಗೆದ್ದು, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ 17,900 ಕೋಟಿ ಹಣವನ್ನು ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರೂ ಇದುವರೆಗೂ ಕೇಂದ್ರದಿಂದ ಸ್ಪಂದನೆ ಸಿಗದಿರುವುದು ದುರದೈವ. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಹಾಗೂ 5 ಜನ ಕೇಂದ್ರ ಸಚಿವರಿದ್ದು ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ರಾಜ್ಯದವರೇ ಆಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡದೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.
ಸೇವಾದಳದ ಅಧ್ಯಕ್ಷರಾದ ರಾಮಚಂದ್ರಪ್ಪ:
ಸೇವಾದಳ 1923ರಲ್ಲಿ ಸ್ಥಾಪನೆಯಾಗಿದ್ದು, ಹರ್ಡಿಕರ್ ಅವರು ಜೈಲಿನಲ್ಲಿ ಈ ಸಂಘಟನೆ ಆರಂಭಿಸಿದರು. ಆರಂಭದಲ್ಲಿ ಹಿಂದುಸ್ಥಾನಿ ಸೇವಾದಳ ಎಂದು ಸ್ಥಾಪನೆಯಾಗುತ್ತದೆ. ನಂತರ 1930-31ರಲ್ಲಿ ಗಾಂಧಿಜಿ, ನೆಹರೂ ಸೇರಿದಂತೆ ಅನೇಕ ನಾಯಕರು ಸೇವಾದಳವನ್ನು ಕಾಂಗ್ರೆಸ್ ಗೆ ವಿಲೀನ ಮಾಡುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಸೇವಾದಳ ಕಾಂಗ್ರೆಸ್ ವಿಭಾಗವಾಗಿ ಸಂಘಟನೆ ಮಾಡಿಕೊಂಡು ಬಂದಿದೆ.
ಬ್ರಿಟೀಷರ ಹಿಂಸೆ ತಾಳಲಾರದೆ ಹುಟ್ಟುಕೊಂಡ ಸಂಘಟನೆ ಇದಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಸೇವಾದಳ ಬೆಳಎದುಕೊಂಡು ಬಂದಿದೆ. ನಾನು ಇದರ ಅಧ್ಯಕ್ಷನಾಗಿ 2 ವರ್ಷಗಳಾಗಿದ್ದು, ಈ ಅವಧಿಯಲ್ಲಿ ರಾಜ್ಯಮಟ್ಟದ ಜಿಲ್ಲಾಮಟ್ಟದ ಪದಾಧಿಕಾರಿಗಳ ನೇಮಕ ಮಾಡಿ ಈ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಮಾಡಲು ರಾಷ್ಟ್ರೀಯ ಅಧ್ಯಕ್ಷರು ಹಾಗೂ ಎಐಸಿಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮ ಮಾಡಲು ಸೂಚನೆ ನೀಡಿದರು.
ಮುಖ್ಯಮಂತ್ರಿಗಳು ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ರಾಷ್ಟ್ರೀಯ ಅಧ್ಯಕ್ಷರಾದ ಲಾಲ್ ಜಿ ಅವರು ಧ್ವಜಾರೋಹಣ ಮಾಡಲಿದ್ದಾರೆ. ಈ ಕಾರ್ಯಕ್ರಮ ಶಿಸ್ತಿನಿಂದ ನಡೆಯಲ್ಲಿದ್ದು, ಜಾತಿ, ಧರ್ಮ, ಭಾಷೆ ವ್ಯತ್ಯಾಸವಿಲ್ಲದೆ ಸಂಘಟನೆ ಮಾಡಿಕೊಂಡು ಬಂದಿದೆ. ಈ ಶತಮಾನೋತ್ಸವಕ್ಕೆ 3-5 ಸಾವಿರ ಸೇವಾದಳದ ಸೇನಾನಿಗಳು ಭಾಗವಹಿಸಲಿದ್ದಾರೆ.