ಹಾಸನ: ಕದ್ದ ಮಾಲು ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡು ಶೋಕಿ ಮಾಡಿದ ನೀವು ನನ್ನ ಬಗ್ಗೆ ಮಾತನಾಡುತ್ತೀರಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಕುಮಾರಸ್ವಾಮಿ ಏನು ಮಾಡಿಲ್ಲ ಎಂದು ಕೆಲವರು ಮಾತನಾಡುತ್ತಾರೆ. ಆದರೆ, ನಾನು ರಾಜ್ಯದ ರೈತರ ಸಾಲಮನ್ನಾ ಮಾಡಿದ್ದೇನೆ. ಮಂಡ್ಯದಲ್ಲಿ 750 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಈಗ ನಿಮ್ಮ ಸರಕಾರದ ಅವಧಿಯಲ್ಲೂ ನಿಮ್ಮ ನಾಯಕರಿಂದ ಸಾಲ ಮನ್ನಾ ಮಾಡಿಸಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಬಿಟ್ಟಾಯ್ತು, ರೈತರ ಉಳಿವಿಗೆ ಇದನ್ನಾದ್ರೂ ಮಾಡಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಈ ರಾಜ್ಯಕ್ಕೆ ನಾನು ಏನು ಮಾಡಿದ್ದೇವೆ, ಏನು ಕೊಡುಗೆ ಕೊಟ್ಟಿದ್ದೇನೆ ಎಂಬುದಕ್ಕೆ ದಾಖಲೆಗಳಿವೆ. ಕುಮಾರಸ್ವಾಮಿ ಸರಕಾರದ ಆಡಳಿತ ಹೇಗಿತ್ತು, ಸಿದ್ದರಾಮಯ್ಯನವರ ಆಡಳಿತ ಹೇಗಿದೆ ಎಂದು ನಿಮ್ಮ ಅಧಿಕಾರಿಗಳನ್ನು ಪ್ರಶ್ನಿಸಿದರೆ ದಾಖಲೆ ಕೊಡುತ್ತಾರೆ ಎಂದು ಅವರು ಹೇಳಿದರು.
ಹಳೆಯದೆಲ್ಲ ಮರಿಬೇಡಿ ಸ್ವಾಮಿ. ಕದ್ದ ಮಾಲು ಹ್ಯುಬ್ಲೋಟ್ ವಾಚ್ ಹಾಕಿಕೊಂಡ ಮುಖ್ಯಮಂತ್ರಿ ನೀವು. ದುಬೈನಿಂದ ಯಾರನ್ನೋ ಕರೆಸಿ ಇಲ್ಲಿ ಸುಳ್ಳು ಬೇರೆ ಹೇಳಿಸಿದ್ದಿರಿ. ಇಂತವರು ನನ್ನ ಬಗ್ಗೆ ಮಾತನಾಡ್ತೀರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಅಧಿಕಾರಿಗಳಿಗೆ ಮೈ ಬಗ್ಗಿಸಿ ಕೆಲಸ ಮಾಡೋದಕ್ಕೆ ಸೂಚನೆ ಕೊಡಿ. ಕೇವಲ ಬೆಳೆ ನಷ್ಟವಾಗಿದೆ ಎಂದು ಹೇಳುತ್ತಿರುವ ನೀವು, ಬೆಳೆ ನಷ್ಟದ ಪರಿಹಾರದ ಬಗ್ಗೆ ಚಿಂತನೆ ನಡೆಸಿದ್ದೀರಾ? ಬೆಳೆ ವಿಮೆ ಬಗ್ಗೆ ಏನಾದರೂ ಕ್ರಮ ವಹಿಸಿದ್ದಿರಾ? ಎಂದು ಖಾರವಾಗಿ ಪ್ರಶ್ನಿಸಿದರು.
ವಿಪಕ್ಷದ ಕೆಲಸ ಏನು ಅಂತ ನಾವು ನಿಮ್ಮಿಂದ ಪಾಠ ಕಲಿಯಬೇಕಾಗಿಲ್ಲ. ಮುಖ್ಯಮಂತ್ರಿಯಾಗಿ ನಿಮ್ಮ ಕೆಲಸ ನೀವು ಮಾಡಿ, ಪ್ರಾಮಾಣಿಕವಾಗಿ ಜನರ ಜೀವನ ರಕ್ಷಿಸುವ ಕೆಲಸ ಮಾಡಿ ಎಂದು ಅವರು ಎಚ್ಚರಿಸಿದರು.
ಸಚಿವ ಕೆ.ಹೆಚ್.ಮುನಿಯಪ್ಪಗೆ ತರಾಟೆ
ದಲಿತರು ಶಾಸಕರ ಮನೆ ಮುಂದೆ ಧರಣಿ ಮಾಡಿ ಎಂದು ಹೇಳಿಕೆ ನೀಡಿದ್ದ ಸಚಿವ ಕೆ. ಹೆಚ್.ಮುನಿಯಪ್ಪ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಇಂತಹ ಹೇಳಿಕೆಗಳನ್ನು ರಾಜಕೀಯ ಕಾರಣಗಳಿಗೆ ಭಾಷಣದಲ್ಲಿ ಹೇಳುವುದನ್ನು ಬಿಟ್ಟು, ಸಮಸ್ಯೆ ಬಗೆಹರಿಸಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಹಾಗೂ ಸಿಎಂ ಗಮನಕ್ಕೆ ತನ್ನಿ ಎಂದು ಕುಟುಕಿದರು.
‘ಒಳಮೀಸಲಾತಿ ವಿಚಾರವಾಗಿ ನಿನ್ನೆ ಮುನಿಯಪ್ಪನವರು ಶಾಸಕರ ಮನೆ ಮುಂದೆ ಧರಣಿ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ದಲಿತ ಸಮುದಾಯದವರು ಮೊದಲು ಕಾಂಗ್ರೆಸ್ ಶಾಸಕರ ಮನೆ ಮುಂದೆ ಧರಣಿ ಮಾಡಬೇಕಾಗಿದೆ. ದಲಿತರ ಹೆಸರು ಹೇಳಿಕೊಂಡು ಬಂದವರು ನೀವು. ಯಾರು ಕೊಡದಿದ್ದನ್ನೂ ಕೊಡುತ್ತೇವೆ, ಯಾರು ಮಾಡದಿದ್ದನ್ನೂ ಮಾಡುತ್ತೇವೆ, ಮೀಸಲಾತಿ ಕೊಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ನೀವು.
ಒಬ್ಬ ಮಂತ್ರಿಯಾಗಿ ಮುಖ್ಯಮಂತ್ರಿ ಜತೆ ಈ ವಿಚಾರ ಚರ್ಚೆ ಮಾಡಬೇಕಾಗಿತ್ತು. ಜಾತಿ ಹೆಸರಲ್ಲಿ ಲೋಕಸಭಾ ಚುನಾವಣೆಗೆ ಟ್ರಂಪ್ ಕಾರ್ಡ್ ನಡೆಸುತ್ತಿದ್ದಾರೆ. ದಲಿತ ಸಮುದಾಯದವರು ಮೊದಲು ನೀವು ಅಧಿಕಾರ ಕೊಟ್ಟಿರುವ ನಾಯಕರ ಮನೆಗೆ ನುಗ್ಗಿ ನಿಮ್ಮ ಆಗ್ರಹ ಮಂಡಿಸಿ ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.