ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ತಮ್ಮ ಗನ್ ಮ್ಯಾನ್ ನಿಂದ ಶೂ ಹಾಕಿಸಿಕೊಳ್ಳುತ್ತಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ. ಈ ಕೂಡಲೇ ರಾಜ್ಯದ ಜನತೆಯ ಮುಂದೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ” ಡಾ ಬಿ ಆರ್ ಅಂಬೇಡ್ಕರ್ ರವರು ಪ್ರತಿಪಾದಿಸಿಕೊಂಡು ಬಂದ ಸಾಮಾಜಿಕ ನ್ಯಾಯ , ಸಮಾನತೆಯ ತತ್ವಗಳಿಗೆ ಸಂಪೂರ್ಣ ಎಳ್ಳು ನೀರು ಬಿಟ್ಟು ಅಧಿಕಾರದ ಮದದಿಂದ ಈ ರೀತಿಯ ವರ್ತನೆಗಳನ್ನು ಮಾಡುವುದನ್ನು ರಾಜ್ಯದ ಜನ ಸಹಿಸುವುದಿಲ್ಲ.
ನಿಮ್ಮಿಂದ ಶೋಷಣೆ ಒಳಗಾಗಿರುವ ಸಮುದಾಯಗಳು ಎಷ್ಟರಮಟ್ಟಿಗೆ ನ್ಯಾಯವನ್ನು ಪಡೆದುಕೊಳ್ಳುತ್ತವೆ ಎಂಬ ಪ್ರಶ್ನೆ ನಿಮ್ಮ ವರ್ತನೆಯನ್ನು ಮೂಡಿ ಬಂದಿದೆ . ನಿಮ್ಮಂತಹ ಬಲಿತ, ದೂರ್ತ ರಾಜಕಾರಣಿಗಳು ಈಗಾಗಲೇ ರಾಜಕಾರಣದಿಂದ ಹೆಸರಿಲ್ಲದೆ ಅಳಿಸಿ ಹೋಗಿದ್ದಾರೆ. ಮುಂಬರುವ ದಿವಸಗಳಲ್ಲಿ ಇದೇ ಸಾಲಿನಲ್ಲಿ ತಾವು ಸಹ ಅಳಿಸಿ ಹೋಗುವ ಮೊದಲು ನಿಮ್ಮ ಈ ಕೃತ್ಯಕ್ಕೆ ಬಳಸಿಕೊಂಡ ಆ ಪೊಲೀಸ್ ಗನ್ ಮ್ಯಾನ್ ಮುಂದೆ ಹಾಗೂ ರಾಜ್ಯದ ಜನತೆಯ ಮುಂದೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಿ” ಎಂದು ಮೋಹನ್ ದಾಸರಿ ಆಗ್ರಹಿಸಿದರು.