ಬೆಂಗಳೂರು: ಐಷಾರಾಮಿ ಹೋಟೆಲ್ಗಳಲ್ಲಿ ಕೂತು ‘ಬ್ರ್ಯಾಂಡ್ ಬೆಂಗಳೂರು’ ಮಾಡುವುದಾಗಿ ಪ್ರಚಾರ ಮಾಡುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಗರದ ಪಾದಚಾರಿ ಮಾರ್ಗಗಳೆಲ್ಲವೂ ಯಮಪಾಶವಾಗಿ ಪರಿಣಮಿಸಿರುವುದು ಗೊತ್ತಿದೆಯೇ? ಗುಂಡಿಬಿದ್ದ ರಸ್ತೆಗಳು, ಬೀದಿದೀಪಗಳಿಲ್ಲದ ಬೀದಿಗಳ ಬಗ್ಗೆ ಅರಿವಿದೆಯೇ? ಪ್ರತಿನಿತ್ಯ ನಾಗರಿಕರ ಸಾವುನೋವುಗಳಿಗೆ ಕಾರಣವಾಗಿರುವ ಇಂತಹ ಲೋಪಗಳನ್ನು ನಗರದುದ್ದಕ್ಕೂ ನಾವು ತೋರಿಸಿಕೊಡುತ್ತೇವೆ. ಡಿ.ಕೆ.ಶಿವಕುಮಾರ್ ಅವರೇ ನಿಮಗೆ ಧೈರ್ಯವಿದ್ದಲ್ಲಿ ನಮ್ಮ ಜೊತೆ ಪಾದಯಾತ್ರೆ ಮಾಡಿ. ನಾಗರಿಕರ ಜೀವ ಬಲಿಪಡೆಯಲು ಕಾದಿರುವ ಯಮಸದೃಶ ಜಾಗಗಳನ್ನು ನಾವು ತೋರಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಸವಾಲು ಹಾಕಿದರು .
ಹೋಂ ಫಾರ್ಮ್ ಜಂಕ್ಷನ್ ಬಳಿಯ ಪಾಜಚಾರಿ ಮಾರ್ಗದಲ್ಲಿ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ-ಮಗು ಮೃತಪಟ್ಟಿದ್ದು ಅತ್ಯಂತ ದುಃಖಕರ ಸಂಗತಿಯಾಗಿದೆ. ಬೆಸ್ಕಾಂನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ. ಬೆಂಗಳೂರು ನಗರದ ಉಸ್ತುವಾರಿ ಹೊತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ತಕ್ಷಣ ವೈಫಲ್ಯದ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದರು.
ಕಳೆದ 5 ವರ್ಷದಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ 81 ಜನರಿಗೆ ವಿದ್ಯುತ್ ತಂತಿ ತಗುಲಿದ್ದು, ಇದರಲ್ಲಿ ಒಟ್ಟು 70 ಜನ ಮೃತಪಟ್ಟಿದ್ದಾರೆ. ಈ ವರ್ಷ ಬೆಸ್ಕಾಂ ವಿದ್ಯುತ್ ತಂತಿ ಅವಘಡದಿಂದ 8 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಒಟ್ಟು 21 ಜನರಿಗೆ ಬೆಸ್ಕಾಂ ವಿದ್ಯುತ್ ತಂತಿ ತಗುಲಿತ್ತು. ಈ ಪೈಕಿ 19 ಜನ ಸಾವೀಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದರು. ಅಧಿಕಾರಿಗಳ ಬೇಜವಾಬ್ದಾರಿಗಳಿಂದ ಸಂಭವಿಸುತ್ತಿರುವ ಸಾವು-ನೋವುಗಳು ಅಮಾನವೀಯವಾಗಿವೆ.
ನಿರಂತರವಾಗಿ ಇಂತಹ ದುರಂತಗಳು ನಡೆಯುತ್ತಿದ್ದರೂ ಅಧಿಕಾರದಲ್ಲಿರುವವರು ಮೃತಪಟ್ಟ ದುರ್ದೈವಿಗಳ ಕುಟುಂಬ ಸದಸ್ಯರಿಗೆ ರೂ. 5 ಲಕ್ಷ ಪರಿಹಾರವನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಮುಂದೆಂದೂ ಇಂತಹ ಘಟನೆ ನಡೆಯದಿರುವಂತೆ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಖಂಡನಾರ್ಹ. ಒಂದು ಜೀವಕ್ಕೆ 5 ಲಕ್ಷ ರೂ. ಬೆಲೆಕಟ್ಟುತ್ತಿರುವುದು ಅಂತ್ಯಂತ ಅಮಾನವೀಯ ನಡೆಯಾಗಿದೆ.ಇಂತಹ ದುರ್ಘಟನೆ ಮೂಲಕ ಯಾವ ಸಂದೇಶ ಹೋಗುತ್ತಿದೆ? ನವೆಂಬರ್ 29ರಿಂದ 3 ದಿನಗಳ ಕಾಲ ಅಂತರರಾಷ್ಟ್ರೀಯ ಹೂಡಿಕೆದಾರರನ್ನು ಸೆಳೆಯುವ ಬೆಂಗಳೂರು ಟೆಕ್ ಸಮ್ಮಿಟ್ ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ರಸ್ತೆ ಬದಿ ನಡೆದು ಹೋಗುತ್ತಿರುವ ಮಂದಿ ಇದ್ದಕ್ಕಿದ್ದಂತೆ ಜೀವಂತವಾಗಿ ಸುಟ್ಟು ಹೋಗುತ್ತಾರೆ ಎಂದಾದರೆ ಯಾರು ತಾನೆ ಹೂಡಿಕೆ ಮಾಡಲು ಮುಂದೆಬರುತ್ತಾರೆ? ನಗರ ಬೀದಿಯಲ್ಲಿ ಓಡಾಡುವ ಪ್ರತಿಯೊಬ್ಬನು ಎಲ್ಲಿ ವಿದ್ಯುತ್ ತಂತಿ ತಲೆ ಮೇಲೆ ಬೀಳುತ್ತದೆ? ಎಲ್ಲಿ ಪಾದಚಾರಿ ರಸ್ತೆ ಕುಸಿದು ಚರಂಡಿ ಒಳಗೆ ಬೀಳುತ್ತೇವೆ, ಎಲ್ಲಿ ಒಣಗಿದ ಮರದ ಕೊಂಬೆ ಬೀಳುತ್ತದೆ, ಎಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾವನ್ನಪ್ಪುತ್ತೇವೆ ಎಂಬ ಭಯದಲ್ಲೇ ದಿನನಿತ್ಯವೂ ಓಡಾಡಬೇಕಾದ ದುಸ್ಥಿತಿ ಬಂದೊದಗಿದೆ ಎಂದು ಮೋಹನ್ ದಾಸರಿ ಕಳವಳ ವ್ಯಕ್ತಪಡಿಸಿದರು.