ರಾಮನಗರ: ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ನೂರಾರು ಮುಖಂಡರು ಇಂದು ಬಿಡದಿಯ ತೋಟಕ್ಕೆ ಬಂದು ಮಾಜಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷರಾದ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು.
ಕ್ಷೇತ್ರದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ಆಗುಹೋಗುಗಳ ಬಗ್ಗೆ ಅವರು ಮಾಜಿ ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಂದ ಆಗುತ್ತಿರುವ ಕಿರುಕುಳ ಮತ್ತು ತೊಂದರೆಯ ಬಗ್ಗೆ ಮುಖಂಡರೆಲ್ಲರೂ ಮಾಜಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಮುಖಂಡರಿಗೆ ಸಮಾಧಾನ ಮಾಡಿದ ಕುಮಾರಸ್ವಾಮಿ ಅವರು; ಪಕ್ಷ ಬಿಡಲ್ಲ ಎಂದು ಇದೇ ಜಾಗದಲ್ಲಿ ಗೌರಿ ಶಂಕರ್ ಅವರು ಪ್ರಮಾಣ ಮಾಡಿದ್ದರು. ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಹಿತವಚನ ಹೇಳಿದ್ದೆ. ನನ್ನ ಮಾತು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿಸೆಂಬರ್ ನಲ್ಲಿ ಮುಖಂಡರು, ಕಾರ್ಯಕರ್ತರ ಸಭೆ ನಡೆಸುತ್ತೇನೆ
ಮತ್ತೊಮ್ಮೆ ನಾನು ಕ್ಷೇತ್ರದ ಹಿರಿಯ ಮುಖಂಡರ ಸಭೆ ಕರೆದು ಮಾತನಾಡುತ್ತೇನೆ ಅಲ್ಲದೆ ವಿಧಾನಸಭೆ ಅಧಿವೇಶನ ಮುಗಿದ ನಂತರ ಮುಖಂಡರ ಜತೆ ಚರ್ಚೆ ಮಾಡುತ್ತೇನೆ. ಡಿಸೆಂಬರ್ 23ನೇ ತಾರೀಖು ಅಥವಾ ಅದರ ಆಜುಬಾಜಿನಲ್ಲಿ ನಾನೇ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದು ಮುಖಂಡರು ಮತ್ತು ಕಾರ್ಯಕರ್ತರ ಜತೆ ನಾನು ಸಮಾಲೋಚನೆ ನಡೆಸುತ್ತೇನೆ. ಯಾರೂ ದೃತಿಗೆಟ್ಟು ಹೆದರಬೇಕಿಲ್ಲ ಎಂದು ಕುಮಾರಸ್ವಾಮಿ ಅವರು ಧೈರ್ಯ ತುಂಬಿದರು.
HD ಕುಮಾರಸ್ವಾಮಿ ಜತೆ ತುಮಕೂರು ಗ್ರಾಮಾಂತರ ಮುಖಂಡರ ಜತೆ ಚರ್ಚೆ
ತುಮಕೂರು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅತ್ಯಂತ ಪ್ರಬಲವಾಗಿದೆ. ಪಕ್ಷಕ್ಕೆ ಅತ್ಯಂತ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ. ಕಾರ್ಯಕರ್ತರು ಇದ್ದರೆಷ್ಟೇ ಪಕ್ಷ. ಕಾರ್ಯಕರ್ತರ ಜೊತೆ ನಾನು ಇದ್ದೇನೆ. ಕಾಂಗ್ರೆಸ್ ಒಡ್ಡುವ ಆಮಿಷಗಳಿಗೆ ಯಾರು ಬಲಿಯಾಗುವುದು ಬೇಡ. ಅವರು ಮಾಡುತ್ತಿರುವ ಕೀಳು ರಾಜಕೀಯ ಅವರಿಗೆ ತಿರುಗುಬಾಣವಾಗುತ್ತದೆ ಎಂದು ಅವರು ಹೇಳಿದರು.
ಕೆ.ಬಿ.ಆರ್.ರಾಜಣ್ಣ, ಮೊಟ್ಟೆ ಅಂಗಡಿ ಗೋವಿಂದಪ್ಪ, ಎಸ್. ವೆಂಕಟೇಶ್ ಮಹದೇವದ ಗೌಡ, ಕರಿಯಣ್ಣ, ಶ್ರೀನಿವಾಸ, ಅಪ್ಪೇಗೌಡ, ಬೋಚನಹಳ್ಳಿ ಶ್ರೀನಿವಾಸ್, ಕುಲುಮಕುಂಟೆ ಗಂಗಾಧರ್, ಚಿಕ್ಕ ಗೊಲ್ಲಹಳ್ಳಿ ಗಿರೀಶ್, ಹನುಮಂತಪ್ಪ, ಲಾಟರಿ ನಾರಾಯಣಪ್ಪ, ನಿಡುವಳ್ಳಿ ಕೃಷ್ಣಪ್ಪ, ಚೋಳಾಪುರ ಬೋರೇಗೌಡ, ಬಳೆಗೆರೆ ಮುನಿಸ್ವಾಮಿ, ಲೋಕೇಶ, ರಾಜು, ಉದಯಕುಮಾರ್, ಸಿದ್ದರಾಜು, ವಿಜಯ್ ಕುಮಾರ್, ಚಂದ್ರು, ಮೂಗ, ಸ್ವಾಮಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.