ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೇವೆಯನ್ನು ಮಿತವ್ಯಯ ದರದಲ್ಲಿ ಒದಗಿಸುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ತಿಳಿಸಿದರು.
ಅರ್ಥಪೂರ್ಣ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಲ್ಲಿಸುವ ಮುಖಾಂತರ ಸಂವಿಧಾನದ ಆಚರಣೆ ಮಾಡಲಾಯಿತು. ಸರ್ಕಾರ ಜಾರಿಗೆ ತಂದಿರುವ 5 ಯೋಜನೆಗಳನ್ನು ಸಮರ್ಪಕವಾಗಿ ಇಲಾಖೆ ನಿಭಾಯಿಸಿಕೊಂಡು ಹೋಗುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಸರ್ಕಾರಿ ಸಾರಿಗೆ ಇರುವುದೇ ಜನಸಾಮಾನ್ಯರ ಎಳೆಗೆಗಾಗಿ, ಸರ್ಕಾರ ಅಂತಹವರನ್ನು ಒಳಗೊಂಡಂತೆ ನಾಡಿನ ಎಲ್ಲರಿಗೂ ಒಳ್ಳೆದಾಗಲಿ ಎಂದು ಯೋಜನೆ ಜಾರಿಗೆ ತಂದಿದ್ದಾರೆ.
ಸಂವಿಧಾನವನ್ನು ಎಲ್ಲರೂ ಓದಬೇಕು, ಅದರ ಜೊತೆಗೆ ಅರ್ಥ ಮಾಡಿಕೊಂಡು ಸಮಾಜದಲ್ಲಿ ಬದುಕಬೇಕು, ಎಲ್ಲದಕ್ಕಿಂತ ಮುಖ್ಯವಾಗಿ ತಂದೆತಾಯಿಗಳು ಭಾರತದ ಅತಿದೊಡ್ಡ ಸಂವಿಧಾನದ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು, ಸಂವಿಧಾನದ ಮೂಲಭೂತ ಅಂಶಗಳನ್ನು ತಿಳಿಯಬೇಕಾಗಿದೆ ಎಂದರು.ʼಸಂವಿಧಾನ ದಿನನಿತ್ಯ ಜೀವನದ ಒಂದು ಭಾಗ, ಅದನ್ನು ಸರಿಯಾಗಿ ಅಳವಡಿಸಿಕೊಂಡಲ್ಲಿ, ಶ್ರೇಯೊಭಿವೃದ್ಧಿ ಸಾಧ್ಯʼ ಎಂದು ತಿಳಿಸಿದರು.
ಶಾಂತಿನಗರದಲ್ಲಿನ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ, ಭಾ.ಆ.ಸೇ ಮತ್ತು ನಿರ್ದೇಶಕರು (ಭ&ಜಾ) ಕಲಾ ಕೃಷ್ಣಸ್ವಾಮಿ, ಭಾ.ಪೋ.ಸೇ ರವರ ಸಮ್ಮುಖದಲ್ಲಿ ಎಲ್ಲಾ ಇಲಾಖ ಮುಖ್ಯಸ್ಥರು, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಅಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಜೊತೆಯಾಗಿ ಭಾರತ ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ ಸಂವಿಧಾನದ ಮೌಲ್ಯಗಳನ್ನು ಪ್ರಚಾರ ಪಡಿಸಲಾಯಿತು.
ಸಂವಿಧಾನ ತಜ್ಞರಿಂದ ಸಂವಿಧಾನದ ಕುರಿತು ಉಪನ್ಯಾಸ , ಸಂಸ್ಥೆಯ ಸಿಬ್ಬಂದಿಗಳಿಗೆ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಮುಂತಾದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಹೆಮ್ಮೆಯ ಸಂವಿಧಾನದ ಬಗ್ಗೆ ಅರಿವು ಮೂಡಿಸಬಹುದಾಗಿದೆʼ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು.