ಬೆಂಗಳೂರು: ಅನ್ ಬಾಕ್ಸಿಂಗ್ ಬಿಎಲ್ಆರ್ ಪೌಂಡೇಷನ್ ವತಿಯಿಂದ ಡಿಸೆಂಬರ್ 1 ರಿಂದ 11ನೇ ತಾರೀಖಿನವರೆಗೆ ನಗರದಾದ್ಯಂತ “ಅನ್ ಬಾಕ್ಸಿಂಗ್ BLR ಹಬ್ಬ” ವನ್ನು ಆಚರಿಸಲಾಗುತ್ತಿದ್ದು, ಅದರ ಅಂಗವಾಗಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಅವೆನ್ಯೂ ರಸ್ತೆಯ ರಾಜಮಾರ್ಕೆಟ್ ವೃತ್ತ ಬಳಿ ಚಾಲನೆ ನೀಡಿದರು.
ಬೆಂಗಳೂರು ಹಬ್ಬದ ಅಂಗವಾಗಿ ಚಿಕ್ಕಪೇಟೆಯಲ್ಲಿ ನಡೆದ ಕೆಂಪೇಗೌಡರ ಎತ್ತಿನ ಬಂಡಿ ಮೆರವಣಿಗೆಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು.ಇಂದು ಅನ್ ಬಾಕ್ಸಿಂಗ್ ಬೆಂಗಳೂರು ಹಬ್ಬಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಪ್ರಶಾಂತ್ ಪ್ರಕಾಶ್ ಹಾಗೂ ಅವರ ಸ್ನೇಹಿತರು ತಮ್ಮ ದುಡ್ಡಿನಲ್ಲಿ ನಮ್ಮ ಮನೆಯ ಹಬ್ಬವನ್ನು ಆಚರಿಸುತ್ತಿದ್ದಾರೆ. ಬೆಂಗಳೂರಿನ 1.40 ಕೋಟಿ ಜನರು ಈ ಹಬ್ಬದಲ್ಲಿ ಪಾಲ್ಗೊಂಡು ಸಂತೋಷ ಪಡಬೇಕು ಎಂದು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ. ನಾಡಪ್ರಭು ಕೆಂಪೇಗೌಡರು ಇದೇ ಜಾಗದಿಂದ ಎಲ್ಲ ವೃತ್ತಿ, ಎಲ್ಲಾ ಜನಾಂಗ, ಎಲ್ಲಾ ಧರ್ಮವನ್ನು ಒಟ್ಟಿಗೆ ಸೇರಿಸಿ ಬೆಂಗಳೂರು ನಗರ ಕಟ್ಟಿದರು.
ಇಡೀ ವಿಶ್ವ ಭಾರತ, ಅದರಲ್ಲೂ ಬೆಂಗಳೂರಿನ ಕಡೆ ನೋಡುತ್ತಿದೆ
ಬೆಂಗಳೂರು ವಿಶ್ವಕ್ಕೆ ದೊಡ್ಡ ಮಾದರಿಯಾಗಿದೆ. ಪ್ರಪಂಚದ ಎಲ್ಲ ಜನ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದ್ದಾರೆ. ಇದಕ್ಕೆ ಕೆಂಪೇಗೌಡರು ಹಾಕಿಕೊಟ್ಟ ಅಡಿಪಾಯ ಕಾರಣ. ಇದನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಈ ದೇಶದ ಆಸ್ತಿ ನಮ್ಮ ಸಂಸ್ಕೃತಿ. ಎಲ್ಲಾ ವರ್ಗದ ಜನ ಸುಭಿಕ್ಷವಾಗಿ ಇರಬೇಕು ಎಂಬುದು ನಮ್ಮ ಆಸೆ. ಈ ಬೆಂಗಳೂರು ಹಬ್ಬವನ್ನು 11 ದಿನಗಳ ಕಾಲ ಆಚರಿಸಲು ರೂಪಿಸಲಾಗಿದೆ. ಈ ವರ್ಷ ಅವರು ಅವರದೇ ಆದ ರೀತಿಯಲ್ಲಿ ಈ ಹಬ್ಬ ಆಚರಿಸುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಬಿಬಿಎಂಪಿ, ಮೆಟ್ರೋ ಸೇರಿದಂತೆ ಎಲ್ಲಾ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಎಲ್ಲಾ ಸಂಘಟನೆ ವ್ಯಾಪಾರಿಗಳು ಇದರಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು ಎಂದು ಮನವಿ ಮಾಡುತ್ತೇನೆ.
ಅಂದು ಕೆಂಪೇಗೌಡರು ಈ ಸ್ಥಳದಿಂದ ನಾಲ್ಕು ದಿಕ್ಕಿಗೆ ನಾಲ್ಕು ಜೋಡಿ ಎತ್ತಿನ ಗಾಡಿಯನ್ನು ತೆಗೆದುಕೊಂಡು ಹೋಗಿದ್ದರು. ಆ ಪದ್ಧತಿ ಮುಂದುವರಿಸಿಕೊಂಡು ಹೋಗುವ ಕೆಲಸ ಮಾಡಲಾಗುತ್ತಿದ್ದು, ಈ ಸುಸಂದರ್ಭದಲ್ಲಿ ನಾನು ಭಾಗಿಯಾಗಿ ಚಾಲನೆ ನೀಡಿದ್ದೇನೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಸಂಘಟನೆ, ಹೋರಾಟ ಮಾಡಿ, ಇಲ್ಲಿ ಬಂದು ಊಟ ಮಾಡುತ್ತಿದ್ದ ಕಾಲ ಈಗ ನೆನಪಿಗೆ ಬರುತ್ತಿದೆ.
ಈ ಹಬ್ಬವನ್ನು ಬೆಳೆಸಿಕೊಂಡು, ಮುಂದುವರಿಸಿಕೊಂಡು ಹೋಗಿ ಎಂದು ಬೆಂಗಳೂರಿನ ಜನರಲ್ಲಿ ಮನವಿ ಮಾಡುತ್ತೇನೆ. ನಮ್ಮ ಜೀವ ಶಾಶ್ವತವಲ್ಲ. ದೇವರು ನಮಗೆ ವರ ಹಾಗೂ ಶಾಪ ಎರಡನ್ನೂ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಈ ಹಬ್ಬವನ್ನು ಆಚರಣೆ ಮಾಡಿ ನಮ್ಮ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳುವುದು ನಿಮ್ಮ ನಮ್ಮ ಕೈಯಲ್ಲಿದೆ. ಡಿಸೆಂಬರ್ ನಲ್ಲಿ ಮಳೆ ಇಲ್ಲದಾಗ ಈ ಹಬ್ಬ ಆರಂಭವಾಗುತ್ತಿದ್ದು, ಶುಭ ಗಳಿಗೆಯಲ್ಲಿ ಶುಭ ಮುಹೂರ್ತದಲ್ಲಿ ನಿಮ್ಮ ಸಂತೋಷಕ್ಕಾಗಿ ಈ ಹಬ್ಬ ಆಚರಿಸಲಾಗುತ್ತಿದೆ. ಕಲೆ, ಸಾಹಿತ್ಯ, ಆಹಾರ, ನೃತ್ಯ, ನಾಟಕ ಸೇರಿದಂತೆ ವಿವಿಧ ಕ್ಷೇತ್ರಗಳ ಮೂಲಕ ಬೆಂಗಳೂರಿನ 300ಕ್ಕೂ ಹೆಚ್ಚು ಕಡೆಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತಿದೆ.
ಮುಂದೆ ಪ್ರತಿ ವಾರ್ಡ್, ವಿಧಾನಸಭಾ ಕ್ಷೇತ್ರದಲ್ಲಿ ಈ ಹಬ್ಬವನ್ನು ಆಯೋಜಿಸಿ ಆಯಾ ಭಾಗದ ಜನ ಅಲ್ಲೇ ಈ ಹಬ್ಬವನ್ನು ಆನಂದಿಸುವಂತೆ ಮಾಡಲಾಗುವುದು. ಎಲ್ಲರೂ ತಮ್ಮ ಮನೆಗಳಲ್ಲೂ ಈ ಹಬ್ಬದ ರೀತಿ ಅಲಂಕಾರ ಮಾಡಿ ಸುಂದರ ವಾತಾವರಣ ಮೂಡಿಸಬೇಕು. ಆ ಮೂಲಕ ನಮ್ಮ ಇತಿಹಾಸ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು.
ನಾನು ಅನೇಕ ಬಾರಿ IF you forget the root, You will not get the fruit ಎಂಬ ಮಾತನ್ನು ಹೇಳುತ್ತಿರುತ್ತೇನೆ. ನಾವು ನಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸುವುದಿಲ್ಲ. ನಾವು ನಮ್ಮ ಬೆಂಗಳೂರಿನ ಮೂಲವನ್ನು ಉಳಿಸಿಕೊಂಡು ಹೋಗಬೇಕು. ಅನ್ ಬಾಕ್ಸಿಂಗ್ ಬೆಂಗಳೂರು ಸಂಸ್ಥೆ ನಿಮ್ಮನ್ನು ಸೇರಿಸಿಕೊಂಡು ಈ ಹಬ್ಬ ಆಚರಿಸುತ್ತಿದ್ದಾರೆ. ಈ ಹಬ್ಬದಲ್ಲಿ ನೀವು ಭಾಗವಹಿಸಿ ಎಂದು ಮನವಿ ಮಾಡುತ್ತೇನೆ.
ಬಾಕ್ಸಿಂಗ್ ಬಿಎಲ್ಆರ್ ಹಬ್ಬದ ವಿವರ:
ಅನ್ ಬಾಕ್ಸಿಂಗ್ ಬಿಎಲ್ಆರ್ ಹಬ್ಬ ಆಚರಣೆಯ ಕುರಿತು https://habba.unboxingblr.com/ ವೆಬ್ಸೈಟ್ ನಲ್ಲಿ ಸಂಪೂರ್ಣ ವಿವರಗಳನ್ನು ನಾಗರಿಕರು ಪಡೆಯಬಹುದಾಗಿದೆ.
ಈ ವೇಳೆ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ವಲಯ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ಆರ್. ಸ್ನೇಹಲ್, ವಿನೋತ್ ಪ್ರಿಯಾ, ಅನ್ ಬಾಕ್ಸಿಂಗ್ ನಿರ್ದೇಶಕರಾದ ಪ್ರಶಂತಾ ಪ್ರಕಾಶ್, ಅನ್ ಬಾಕ್ಸಿಂಗ್ ಬಿಎಲ್ಆರ್ ಹಬ್ಬದ ನಿರ್ದೇಶಕರಾದ ರವಿಚಂದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.