ಬೆಂಗಳೂರು: ರಾಜ್ಯದಲ್ಲಿ “ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ” ಕಾರ್ಯಕ್ರಮದ ಮೊದಲ ಹಂತದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಪ್ರವಾಸದ ವೇಳೆ ಬಸವನಾಡು ಕಲ್ಯಾಣ ಕರ್ನಾಟಕದಲ್ಲಿ ವೀಕ್ಷಿಸಿದ ಸ್ಮಾರಕಗಳಲ್ಲಿ ಸ್ವಚ್ಛತೆ, ಮೂಲಭೂತ ಸೌಲಭ್ಯ, ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ” ಕಾರ್ಯಕ್ರಮದಡಿ, ಮೂರು ದಿನಗಳ ಮೊದಲನೇ ಹಂತದಲ್ಲಿ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸ್ಮಾರಕಗಳ ದರ್ಶನ ಮಾಡಲಾಯಿತು. ಭೇಟಿ ನೀಡಿದ ಬಹುತೇಕ ಸ್ಮಾರಕಗಳನ್ನು ಆಸಕ್ತ, ಖಾಸಗಿ ವ್ಯಕ್ತಿಗಳಿಗೆ ದತ್ತು ನೀಡಲಾಗಿದೆ. ಈ ಸ್ಮಾರಕಗಳ ರಕ್ಷಣೆ ಹಾಗೂ ನಿರ್ವಹಣೆಗೆ ಹಲವಾರು ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸರ್ಕಾರದ ದತ್ತು ಯೋಜನೆಗೆ ಸ್ಪಂದಿಸಿವೆ ಎಂದರು.
ಬೀದರ್ ಜಿಲ್ಲೆಯ ಸ್ಮಾರಕಗಳಿಗೆ ಭೇಟಿ; ಪರಿಶೀಲನೆ
ಐತಿಹಾಸಿಕ ಬೀದರ್ ಜಿಲ್ಲೆಯ ನರಸಿಂಹ ಝರಣಾ ದೇಗುಲ ದರ್ಶನದೊಂದಿಗೆ ಆರಂಭವಾದ ಸಚಿವರ ತಂಡದ ಪ್ರವಾಸ ಕಾರ್ಯಕ್ರಮ ಬೀದರ್ನ ಅಷ್ಟಕೋನಾಕಾರದ ಬಾವಿಯ ವೀಕ್ಷಣೆ ಮಾಡಲಾಯಿತು. ಇದಾದ ನಂತರ ಇರಾನ್ ದೇಶದ ಸುರಂಗ ಕಾಲುವೆಗಳನ್ನು ಹೋಲುವ ನೀರಿನ ಕರೇಜ್ (Karez)ನ್ನು ತಂಡ ವೀಕ್ಷಿಸಿತು. ಈ ರೀತಿಯ ನೀರಿನ ಕಾಲುವೆಗಳು ಬೀದರಿನಲ್ಲಿ ವಿಶೇಷಗಳಾಗಿವೆ. ನೂರಾರು ವರ್ಷಗಳ ಹಿಂದೆ ನಿರ್ಮಿಸಿರುವ ಈ ಸುರಂಗ ಕಾಲುವೆಗಳನ್ನು ಅಭಿವೃದ್ಧಿ ಪಡಿಸಿ ಸಂರಕ್ಷಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಸವ ಕಲ್ಯಾಣದಲ್ಲಿ ನಿರ್ಮಾಣ ಹಂತದಲ್ಲಿರುವ ಅನುಭವ ಮಂಟಪಕ್ಕೆ ಭೇಟಿ ನೀಡಲಾಯಿತು. ಬಸವಕಲ್ಯಾಣ ಕೋಟೆಗೆ ಬೇಟಿ ನೀಡಿ ‘ಲೇಸರ್ ಶೋ ವೀಕ್ಷಿಸಿ ತಂಡ ನಿರೂಪಣೆ ಬಗ್ಗೆ ಹರ್ಷ ವ್ಯಕ್ತಪಡಿಸಿತು. ಬಸವ ಕಲ್ಯಾಣದ ಕೋಟೆ ದತ್ತು ಪತ್ರ ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಮತ್ತು ಸಚಿವರಾದ ರಹೀಮ್ ಖಾನ್ ಹಾಗೂ ಶಾಸಕರು, ಜನಪ್ರತಿನಿಧಿಗಳು ಹಾಜರಿದ್ದರು.
ಕಲಬುರಗಿಯ ನಾಗಾವಿ ಶ್ರೀ ಯಲ್ಲಮ್ಮದೇವಿ ದೇವಾಸ್ಥಾನದ ಐತಿಹಾಸಿಕ ತಾಣ
ಕಲಬುರಗಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರದ್ಧಾ ಕೇಂದ್ರ ನಾಗಾವಿ ಶ್ರೀ ಯಲ್ಲಮ್ಮ ದೇವಿ ದೇವಾಸ್ಥಾನದ ಐತಿಹಾಸಿಕ ತಾಣಕ್ಕೆ ಭೇಟಿ ನೀಡಲಾಯಿತು ಎಂದು ಹೇಳಿದ ಸಚಿವ ಎಚ್.ಕೆ. ಪಾಟೀಲ್ ಅವರು, ರಾಷ್ಟಕೂಟರ ಆಳ್ವಿಕೆಯ ಕಾಲದಲ್ಲಿ ನಾಗಾವಿ ವಿಶ್ವವಿದ್ಯಾಲಯದ ಕೇಂದ್ರವಾಗಿತ್ತು ಎಂಬುದು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಇಲ್ಲಿರುವ 60 ಕಂಬಗಳ ಮಂಟಪವನ್ನು ಅಂದಿನ “ಘಟಿಕಾಸ್ಥಾನ” ಎಂದು ಶಾಸದಲ್ಲಿ ಹೆಸರಿಸಲಾಗಿದ್ದು, ವಿಶ್ವವಿದ್ಯಾಲಯ ಅಸ್ತಿತ್ವದ ಮೊದಲ ಕನ್ನಡ ವಿಶ್ವವಿದ್ಯಾಲಯ ದೇಶದ ಮೊದಲ ವಿಶ್ವವಿದ್ಯಾಲಯ ಎಂದು ಇತಿಹಾಸಕಾರರು ಹೆಮ್ಮೆಯಿಂದ ಹೇಳುತ್ತಿದ್ದಾರೆ ಎಂದರು.
ಹೈದ್ರಾಬಾದ್ ಮ್ಯೂಜಿಯಂ ವಸ್ತು ಸಂಗ್ರಹಾಲಯದಲ್ಲಿ ದೊರಕಿರುವ ಸಾಹಿತ್ಯ ನಾಗಾವಿ ವಿಶ್ವವಿದ್ಯಾಲಯದ ಕುರಿತು ವಿವರ ಬಹಿರಂಗಪಡಿಸುತ್ತದೆ. 1928ರಲ್ಲಿ ಹೈದ್ರಾಬಾದ್ನ ನಿಜಾಮ್ ಸರ್ಕಾರ ಸಂಶೋಧನೆ ಪ್ರಾರಂಭಿಸಿ, ನಾಗಾವಿ ವಿಶ್ವವಿದ್ಯಾಲಯದ ಕುರುಹುಗಳ ಕುರಿತು ಪುಸ್ತಕ ಪ್ರಕಟಿಸಿದೆ. ಪತ್ರಿಕೆಯವರು ಪ್ರಕಟಿಸಿರುವ ಹಲವಾರು ಮಾಹಿತಿಗಳು ಸಚಿವರ ತಂಡದ ಪ್ರವಾಸದ ಸಂದರ್ಭದಲ್ಲಿ ಲಭ್ಯಗೊಂಡವು ಎಂದು ಸಚಿವ ಎಚ್.ಕೆ. ಪಾಟೀಲ್ ವಿವರ ನೀಡಿದರು.
ಕೃಷ್ಣಕೃಪಾ ಫೌಂಡೇಶನ್ಗೆ ʻಮಳಖೇಡ ಕೋಟೆʼ ದತ್ತು
ರಾಷ್ಟಕೂಟರ ರಾಜಧಾನಿಯಾಗಿದ್ದ ಮಾನ್ಯಖೇಟ ಇಂದಿನ ಮಳಖೇಡಕ್ಕೆ ತಂಡ ಭೇಟಿ ಕೊಟ್ಟಿತು. ಮಳಖೇಡ ಕೋಟೆ, ನೃಪತುಂಗನ ಆಡಳಿತದ ಕೇಂದ್ರವಾಗಿತ್ತು. ಚರಿತ್ರಾರ್ಹ ಘಟನೆಗಳಿಗೆ ಸಾಕ್ಷಿಯಾಗಿದ್ದ ಈ ಕೋಟೆಗೆ ಉತ್ಕೃಷ್ಟವಾದ ಸಾಹಿತ್ಯದ ನೆಲೆಬೀಡಾದ ಈ ಕೋಟೆಗೆ ಭೇಟಿ ಕೊಟ್ಟು ಕೋಟೆಯನ್ನು ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಕಲ್ಬುರ್ಗಿ ಮೂಲದ ವ್ಯಕ್ತಿಯ ಮಾಲೀಕತ್ವದ ಖಾಸಗಿ ಕಂಪನಿ ಕೃಷ್ಣಕೃಪಾ ಫೌಂಡೇಶನ್ಗೆ ವಹಿಸಲಾಯಿತು. ಸ್ಥಳದಲ್ಲಿಯೇ ದತ್ತು ಒಪ್ಪಿಗೆ ಪತ್ರವನ್ನು ಕೂಡ ಹಸ್ತಾಂತರಿಸಲಾಯಿತು ಎಂದು ಸಚಿವರು ತಿಳಿಸಿದರು.
ಶಿರವಾಳದಲ್ಲಿದೆ ಅದ್ಭುತ ಶಿಲ್ಪಕಲಾ ವೈಭವ
ಯಾದಗಿರಿ ಜಿಲ್ಲೆಯ ಶಿರವಾಳ ಗ್ರಾಮಕ್ಕೆ ಭೇಟಿ ನೀಡಿದ ಸಚಿವರ ತಂಡ ಅಲ್ಲಿಯ ಶಿಲ್ಪಕಲಾ ವೈಭವವನ್ನು ನೋಡಿ ಮೂಕವಿಸ್ಮಿತವಾಯಿತು. ಸ್ಥಳಿಯರ ಮಾಹಿತಿಯಂತೆ ಶಿರವಾಳದಲ್ಲಿ 360 ದೇಗುಲಗಳು, 360 ಬಾವಿಗಳು, ಸಾವಿರಾರು ಲಿಂಗಗಳು ಇರುವ ಪ್ರತೀತಿ ಇದೆ. ‘ನನ್ನಯ್ಯ ನಾದಯ್ಯ’ ಎಂಬ ದೇವಸ್ಥಾನ ಶಿಲ್ಪಕಲೆಯ ವೈವಿಧ್ಯಮಯ ಸಂಸ್ಕೃತಿಯನ್ನು ಹೊರಹೊಮ್ಮಿಸುತ್ತದೆ. ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕಗಳಾದ ಸ್ಮಾರಕಗಳನ್ನು ರಕ್ಷಿಸಲು ಸರ್ಕಾರದೊಂದಿಗೆ ಸಾರ್ವಜನಿಕ ಸಹಭಾಗೀತ್ವ ಅಪೇಕ್ಷಿಸಲಾಗಿದೆ ಎಂದು ಹೇಳಿದರು.
ಮುಖ್ಯವಾಗಿ ಶಹಪುರದ ‘ದಿಡ್ಡಿ ಬಾಗಿಲು’ ವೀಕ್ಷಿಸಲಾಯಿತು. ದುರಸ್ತಿಗಾಗಿ ಸೂಕ್ತ ನೆರವು ನೀಡುವ ಭರವಸೆಯನ್ನು ನೀಡಲಾಯಿತು. ಸಚಿವರ ತಂಡದಲ್ಲಿದ್ದ ತಜ್ಞರು, ಇತಿಹಾಸಕಾರರು ಮತ್ತು ಆಸಕ್ತರ ತಂಡ ಬೇರೆ ಬೇರೆ ಸ್ಥಳಗಳಿಗೆ ಭೇಟಿಕೊಟ್ಟು ರಕ್ಷಣೆ ಇಲ್ಲದೇ ಅನೇಕ ಶಾಸನಗಳು ನೆಲಕಚ್ಚಿರುವುದು ಕಂಡು ಬಂದವು. ಯಾದಗಿರಿಯ ಭಾಗಶಃ ಕೋಟೆಯನ್ನು ವೀಕ್ಷಿಸಲಾಯಿತು. ಈ ಎಲ್ಲಾ ಸ್ಮಾರಕಗಳ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.