ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ಭೂಮಾಪಕರಿಂದ ಮಾರ್ಕ್ ಮಾಡಿದ್ದು, ತಹಶೀಲ್ದಾರ್ ರವರಿಂದ ಆದೇಶಗಳನ್ನು ಜಾರಿಮಾಡಿರುವಂತಹ ಒತ್ತುವರಿಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳ ಒತ್ತುವರಿ ತೆರವು ಕಾರ್ಯಾಚರಣೆಯ ಸಂಬಂಧ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರಿಗೆ ತಹಶೀಲ್ದಾರ್ ರವರಿಂದ ಆದೇಶ ನೀಡೀರುವಂತಹ ಒತ್ತುವರಿಗಳನ್ನು ಕೂಡಲೆ ತೆರವುಗೊಳಿಸಬೇಕು. ಆದೇಶಗಳನ್ನು ನೀಡದೇ ಇರುವ ಒತ್ತುವರಿಗಳಿಗೆ ಕೂಡಲೆ ಆದೇಶಗಳನ್ನು ನೀಡಿ ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ನಗರದ ಎಲ್ಲಾ ವಲಯಗಳಲ್ಲಿಯೂ ಬೃಹತ್ ನೀರುಗಾಲುವೆ ಒತ್ತುವರಿ ತೆರವು ಕಾಯಾಚರಣೆಯನ್ನು ನಡೆಸಬೇಕು. ಈ ಸಂಬಂಧ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಪೊಲೀಸ್ ಭದ್ರತೆಯೊಂದಿಗೆ ಒತ್ತುವರಿಗಳ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೂ ಮಾಪನ ಕಾರ್ಯ ಮಾಡಿರುವ ಕಡೆ ಗ್ರಾಮ ನಕ್ಷೆ ಮತ್ತು ಟಿಪ್ಪಣಿಗಳ ಅನ್ವಯ ಯಾವುದೇ ವ್ಯತ್ಯಾಸ ಮಾಡದೆ ಸಂಬಂಧಪಟ್ಟ ಭೂ ಮಾಪಕರು ನಕ್ಷೆಯನ್ನು ಸಿದ್ಧಪಡಿಸಿ ತಹಶೀಲ್ದಾರ್ ರವರು ಅದಕ್ಕೆ ಆದೇಶಗಳನ್ನು ಜಾರಿಮಾಡಬೇಕು. ಒತ್ತುವರಿ ತೆರವುಗೊಳಿಸಿ ಸಮರ್ಪಕ ಕಾಲುವೆಯನ್ನು ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ನಿಗಧಿತ ಸಮಯದಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿ ತೆರವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಚ್ಛ ನ್ಯಾಯಾಲಕ್ಕೆ ನೀಡಿರುವ ಮಾಹಿತಿಯಂತೆ ಕ್ರಮ:
ನಗರದಲ್ಲಿ ಬೃಹತ್ ನೀರುಗಾಲುವೆ ಒತ್ತುವರಿ ಹಾಗೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಉಚ್ಛನ್ಯಾಯಾಲಕ್ಕೆ ಪಾಲಿಕೆಯಿಂದ ವರದಿಯನ್ನು ನೀಡಲಾಗಿದೆ. ಅದರಂತೆ, ಪಾಲಿಕೆ ವ್ಯಾಪ್ತಿಯಲ್ಲಿ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಅದರಂತೆ, ನಗರದಲ್ಲಿ ಹೊಸ ಒತ್ತುವರಿಗಳು ಸೇರಿದಂತೆ 3147 ಒತ್ತುವರಿಗಳನ್ನು ಗುರುತಿಸಲಾಗಿದ್ದು, 2247 ಒತ್ತುವರಿಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಇನ್ನು 900 ಒತ್ತುವರಿಗಳನ್ನು ತೆರವುಗೊಳಿಸಬೇಕಾಗಿದ್ದು, ಈ ಪೈಕಿ 130 ಒತ್ತುವರಿ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, 401 ಆದೇಶಗಳನ್ನು ಜಾರಿಗೊಳಿಸುವ ಹಂತದಲ್ಲಿದೆ. ಇನ್ನು 370 ಒತ್ತುವರಿಗಳಿಗೆ ತಹಶಿಲ್ದಾರಿಂದ ಆದೇಶಗಳನ್ನು ಜಾರಿಗೊಳಿಸಲಾಗಿದ್ದು, ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕಿದೆ ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಕೆರೆಗಳ ಒತ್ತುವರಿಗಳನ್ನು ಗುರುತಿಸಿ ಸಮೀಕ್ಷೆ ನಡೆಸಿ:
ಪಾಲಿಕೆ ವ್ಯಾಪ್ತಿಯಲ್ಲಿ 202 ಕೆರೆಗಳಿದ್ದು, 159 ಕೆರೆಗಳಲ್ಲಿ ಒತ್ತುವರಿಯಿದೆ ಎಂಬುದನ್ನು ಗುರುತಿಸಿ, ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ರಿಯಾ ಯೋಜನೆ ಪ್ರಕಾರ ಕ್ರಮವಹಿಸಲು ತಹಶೀಲ್ದಾರರಿಗೆ ಪತ್ರಗಳನ್ನು ಬರೆಯಲಾಗಿದೆ. ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿ 130 ಕೆರೆಗಳ ಸರ್ವೇ ಮಾಡಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಕೇಳಲಾಗಿದೆ. ಅದರಂತೆ ಇದುವೆರೆಗೆ ಅಂದಾಜು 20 ಕೆರೆಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಉಳಿದ ಕೆರೆಗಳಲ್ಲಿ ಒತ್ತುವರಿ ಸಮೀಕ್ಷೆ ಕಾರ್ಯವನ್ನು ತ್ವರಿತವಾಗಿ ನಡೆಸಲು ಸೂಚಿಸಲಾಯಿತು.
ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ:
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಗಳಲ್ಲಿ ಹಂತ-ಹಂತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ವಲಯ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಡಾ. ದಯಾನಂದ್, ವಲಯ ಆಯುಕ್ತರು, ವಕಯ ಜಂಟಿ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರರು, ರಾಜಕಾಲುವೆ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರ್ ಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.