ವಿಜಯಪುರ: ಇಲ್ಲಿನ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಫುಡ್ಸ್ ಮೆಕ್ಕೆಜೋಳ ಸಂಸ್ಕರಣಾ ಘಟಕದಲ್ಲಿ ಸಂಭವಿಸಿರುವ ದುರಂತದಲ್ಲಿ ಮೃತರಾಗಿರುವ ಏಳು ಕಾರ್ಮಿಕರಿಗೂ ತಲಾ 7 ಲಕ್ಷ ರೂ. ಪರಿಹಾರ ಕೊಡಲಾಗುವುದು. ಜೊತೆಗೆ ಗಾಯಾಳುಗಳಿಗೆ ಚಿಕಿತ್ಸೆಗೆಂದು ತಲಾ 50 ಸಾವಿರ ರೂ. ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಭಾರೀ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಕಿಶೋರ್ ಜೈನ್ ಅವರ ಒಡೆತನದ ಈ ಉದ್ಯಮ ಘಟಕದಲ್ಲಿ ಮಿತಿ ಮೀರಿ ತುಂಬಿದ್ದ ಟ್ಯಾಂಕರುಗಳ ಪಿಲ್ಲರ್ ಗಳು ಸೋಮವಾರ ಕುಸಿದು, ಅದರಡಿ ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವರು ಬೆಳಗಾವಿಯಿಂದ ರಾತ್ರಿಯೇ ಇಲ್ಲಿಗೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ಮತ್ತು ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, ಮಧ್ಯರಾತ್ರಿಯವರೆಗೂ ಅವರು ಸ್ಥಳದಲ್ಲೇ ಇದ್ದು ಸೂಕ್ತ ನಿರ್ದೇಶನ ನೀಡಿದರು.
ಘಟನೆ ಬಗ್ಗೆ ಸಿಎಂಗೆ ನಿರಂತರ ಮಾಹಿತಿ ಕೊಟ್ಟ ಸಚಿವರು
ಮಂಗಳವಾರ ಬೆಳಿಗ್ಗೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಿದರು. ಎನ್ ಡಿಆರ್ ಎಫ್ ಸೇರಿದಂತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಸಚಿವರು ಅಭಿನಂದಿಸಿದರು.
ಸಚಿವರು ಮಂಗಳವಾರ ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ಸ್ಥಿತಿಗತಿಯನ್ನು ವಿಚಾರಿಸಿದರು. ಜತೆಗೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಮೃತ ಕಾರ್ಮಿಕರೆಲ್ಲರೂ ಬಿಹಾರದವರು. ಇವರ ಪಾರ್ಥಿವ ಶರೀರಗಳನ್ನು ಬೆಳಗಾವಿ ಅಥವಾ ಕಲಬುರಗಿ ವಿಮಾನ ನಿಲ್ದಾಣದ ಮೂಲಕ ಪಾಟ್ನಾಗೆ ಕಳಿಸಿ ಕೊಡಲಾಗುವುದು. ಬಳಿಕ, ಮೃತ ಕಾರ್ಮಿಕರ ಊರುಗಳಲ್ಲಿರುವ ಕುಟುಂಬಗಳಿಗೆ ಶವಗಳನ್ನು ತಲುಪಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ವ್ಯವಸ್ಥೆ ಮಾಡಲಾಗಿದೆ ಎಂದರು.
ಮಧ್ಯರಾತ್ರಿವರೆಗೂ ಖುದ್ದು ಕಾರ್ಯಾಚರಣೆ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ
ಮೃತರ ಕುಟುಂಬಗಳಿಗೆ ಕೈಗಾರಿಕೆಯ ಮಾಲೀಕರ ವತಿಯಿಂದ ತಲಾ 5 ಲಕ್ಷ ರೂ. ಮತ್ತು ಸರಕಾರದ ಕಡೆಯಿಂದ ತಲಾ 2 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಈ ದುರಂತ ಸಂಭವಿಸಿರುವುದು ನಿಜಕ್ಕೂ ನೋವಿನ ವಿಷಯವಾಗಿದೆ. ಜೊತೆಗೆ, ರಾಜ್ಯದಲ್ಲಿನ ಕೈಗಾರಿಕೆಗಳಲ್ಲಿ ಯಾವುದೇ ಅನಾಹುತಕ್ಕೆ ಆಸ್ಪದ ಇರದಂತೆ ನೋಡಿಕೊಳ್ಳಲು ಹೆಚ್ಚಿನ ಸುರಕ್ಷಾ ಕ್ರಮಗಳಿಗೆ ಆದ್ಯತೆ ಕೊಡಲಾಗುವುದು. ಜತೆಗೆ, ಈ ಘಟನೆಗೆ ಕಾರಣರಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದೆ ಎಂದು ಅವರು ವಿವರಿಸಿದರು.
ಮೃತರೆಲ್ಲರೂ ಬಡ ಕುಟುಂಬಗಳಿಗೆ ಸೇರಿದವರು. ವಿಪತ್ತು ಪರಿಹಾರ ಕಾರ್ಯಾಚರಣೆ ತಂಡಗಳು ಮೃತ ದೇಹಗಳನ್ನು ಹೊರತೆಗೆದಿದ್ದು, ಹೆಚ್ಚಿನ ಶೋಧ ಮುಂದುವರಿದಿದೆ. ಈ ದುರಂತ ಸಂಭವಿಸಬಾರದಿತ್ತು ಎಂದು ಅವರು ಕಂಬನಿ ಮಿಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಪಾಲನ್, ಜಿಲ್ಲಾ ಪೊಲೀಸ್ ವರಿಷ್ಠ ಹೃಷಿಕೇಶ ಸೋನಾವಣೆ, ಜಿಪಂ ಸಿಇಒ ರಾಹುಲ್ ಶಿಂದೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಡಿವೈಎಸ್ಸಿ ಬಸವರಾಜ ಯಲಿಗಾರ ಮುಂತಾದವರು ಇದ್ದರು.