ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯ ಹಲಸೂರು ಕೆರೆ ಬಳಿಯ ಕೆನ್ಸಿಂಗ್ಟನ್ ಜಂಕ್ಷನ್ ಸಮೀಪ ವೈಟ್ ಟಾಪಿಂಗ್ ರಸ್ತೆ ಕುಸಿದು ಸೃಷ್ಟಿಯಾಗಿದ್ದ ದೊಡ್ಡ ಗುಂಡಿಗೆ ಮಹಾಪೂಜೆ ಮಾಡುವ ಮೂಲಕ ಕಳಪೆ ಕಾಮಗಾರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಆಮ್ ಆದ್ಮಿ ಪಕ್ಷದ ನಾಯಕರು, ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಬಗ್ಗೆ ಸಮರ್ಪಕ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ಬೆಂಗಳೂರು ಜಿಲ್ಲಾಧ್ಯಕ್ಷ ಡಾ. ಸತೀಶ್ ಕುಮಾರ್ ನೇತೃತ್ವದಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಮುಖ್ಯ ಲೋಕಾಯುಕ್ತರಿಗೆ ದೂರು ನೀಡಿ ಬಳಿಕ ಮಾತನಾಡಿದ ಡಾ. ಸತೀಶ್ ಕುಮಾರ್, ವೈಟ್ ಟಾಪಿಂಗ್ ರಸ್ತೆಗೆ ಖರ್ಚಾಗುವ ಹಣಕ್ಕಿಂತ ಹತ್ತು ಪಟ್ಟು ಹೆಚ್ಚು ನೀಡಲಾಗಿದೆ ಎಂದು ಹೇಳಲಾಗಿದೆ. ಸುಮಾರು 1200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ ರಸ್ತೆಗಾಗಿ ಬಿಡುಗಡೆ ಮಾಡಲಾಗಿದೆ, ಆದರೆ ಅಂತಹ ರಸ್ತೆಗಳು ಬಿರುಕು ಬಿಟ್ಟಿದ್ದು ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿದರು.
ಈಗಾಗಲೇ ಬೆಂಗಳೂರಿನಲ್ಲಿ 30 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳಿದೆ ಎಂದು ಬಿಬಿಎಂಪಿ ಹೇಳಿತ್ತು, ಅದರಲ್ಲಿ ಇನ್ನು 2000 ಗುಂಡಿಗಳನ್ನು ಮುಚ್ಚುವುದು ಬಾಕಿ ಇದೆ ಎಂದು ಹೇಳಿದೆ. ಸರ್ಕಾರ ಮತ್ತು ಬಿಬಿಎಂಪಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರೂ, ಗುಣಮಟ್ಟದ ಕೆಲಸ ಆಗುತ್ತಿಲ್ಲ ಎಂದರು.
ಎಲ್ಲಾ ವಿಚಾರಗಳನ್ನು ಇಂದು ಲೋಕಾಯುಕ್ತರ ಗಮನಕ್ಕೆ ತರಲಾಗಿದೆ. ಬಿಬಿಎಂಪಿ ಕಮಿಷನರ್, ಮುಖ್ಯ ಅಭಿಯಂತರರು ಹಾಗೂ ಗುಂಡಿ ಬಿದ್ದ ರಸ್ತೆಯ ವಲಯ ಅಭಿಯಂತರರನ್ನು ಒಳಗೊಂಡಂತೆ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಅವ್ಯವಹಾರ ನಡೆದಾಗ ಅದನ್ನು ಗಮನಕ್ಕೆ ತಂದಿದ್ದಕ್ಕೆ ಲೋಕಾಯುಕ್ತರು ಕೂಡ ನಮ್ಮನ್ನು ಶ್ಲಾಘಿಸಿದ್ದಾರೆ. ಭ್ರಷ್ಟಾಚಾರ ಮಾಡುವ ಅಧಿಕಾರಿಗಳು ಲೋಕಾಯುಕ್ತರ ತನಿಖೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗುಣಮಟ್ಟ ಪರೀಕ್ಷೆ ನಡೆಸಲು ಮನವಿ
ಕಳೆದ 5-10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವೈಟ್ ಟಾಪಿಂಗ್, ಸ್ಮಾರ್ಟ್ ಸಿಟಿಯಡಿ ಮಾಡಿರುವ ರಸ್ತೆಗಳ ಆಡಿಟ್ ಆಗಬೇಕು. ಗುಂಡಿ ಬಿದ್ದ ರಸ್ತೆ ನಿರ್ಮಿಸಿದ ಗುತ್ತಿಗೆದಾರರನ್ನು ತನಿಖೆಗೆ ಒಳಪಡಿಸಬೇಕು. ಭ್ರಷ್ಟಾಚಾರದ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಅಪಾಯಗಳು ಆಗದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಷರತ್ತು ವಿಧಿಸಬೇಕು. ಬೇರೆ ವೈಟ್ ಟಾಪಿಂಗ್ ಕಾಮಗಾರಿಗೆ ಅನುಮತಿ ನೀಡುವ ಮೊದಲು ಈಗಾಗಲೇ ಪೂರ್ಣಗೊಂಡಿರುವ ವೈಟ್ ಟಾಪಿಂಗ್ ರಸ್ತೆಗಳ ಗುಣಮಟ್ಟ ಪರೀಕ್ಷೆ ಮಾಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದ್ದಕ್ಕಿದ್ದಂತೆ ಮೆಟ್ರೋ ಪಿಲ್ಲರ್ ಕುಸಿದಿದ್ದರಿಂದ, ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ಈಗಾಗಲೇ ಸಾಕಷ್ಟು ಸಾವುನೋವುಗಳು ಸಂಭವಿಸಿವೆ. ಬ್ರಾಂಡ್ ಬೆಂಗಳೂರು ಎನ್ನುವುದಕ್ಕಿಂತ ನಮಗೆ ‘ಸುರಕ್ಷಿತ ಬೆಂಗಳೂರು’ ಬೇಕಿದೆ ಎಂದು ಪತ್ರದ ಮೂಲಕ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ್ ಚಂದ್ರ ,ವಿಶ್ವನಾಥ್ , ಜಗದೀಶ್ ಬಾಬು ಹಾಗೂ ದಿಲೀಪ್ ಕುಮಾರ್ ಸೇರಿದಂತೆ ಇನ್ನಿತರ ನಾಯಕರುಗಳು ಭಾಗವಹಿಸಿದ್ದರು.