ಬೆಂಗಳೂರು: ನಗರದ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ 6 ಮಳಿಗೆಗಳಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಬೀಗ ಹಾಕಿ ಸೀಲ್ ಮಾಡಲಾಗಿದೆ.
ರಾಜರಾಜೇಶ್ವರಿ ನಗರದ ಜೆ.ಪಿ ಪಾರ್ಕ್ ವಾರ್ಡ್ ನ ಮೋಹನ್ ಕುಮಾರ್ ಮುಖ್ಯ ರಸ್ತೆಯಲ್ಲಿ ಬರುವ ಮಳಿಗೆಗಳು ಹಾಗೂ ರಾಜರಾಜೇಶ್ವರಿ ನಗರ ವಾರ್ಡ್ ನ ಐಡಿಯಲ್ ಹೋಮ್ಸ್ ನಲ್ಲಿನ ಜವಹಾರ್ ಲಾಲ್ ನೆಹರು ರಸ್ತೆಯಲ್ಲಿರುವ ಮಳಿಗೆಗಳಿಗೆ ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಈಗಗಾಲೇ ಸೂನಚೆ ನೀಡಲಾಗಿತ್ತು. ಆದರೂ ಇಂದು ಪರಿಶೀಲನೆ ನಡೆಸಿದ ವೇಳೆ ಏಕ ಬಳಕೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿರುವುದನ್ನು ಗಮನಿಸಿ ಜೆಪಿ ಪಾರ್ಕ್ ವಾರ್ಡ್ ನಲ್ಲಿ ಆರ್.ಎಸ್ ವೆಜಿಟೆಬಲ್ ಮಳಿಗೆ, ಗ್ರೀನ್ ವಾಲಿ ಫಾರಂ, ಜಾಫರ್ ಫೋಟ್ ಶಾಪ್ ಹಾಗೂ ಆರ್.ಆರ್ ನಗರ ವಾರ್ಡ್ ನಲ್ಲಿ ಮಾತಾಜಿ ಡಿಪಾರ್ಟ್ಮೆಂಟಲ್ ಸ್ಟೋರ್ಸ್, ಸತೀಶ್ ಸ್ಟೋರ್ಸ್, ಕನಕಶ್ರೀ ಕ್ರೀಯೇಷನ್ಸ್ ಸೇರಿ 6 ಮಳಿಗೆಗಳಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ.
ರಾಜರಾಜೇಶ್ವರಿನಗರ ವಲಯದ ಮಾನ್ಯ ವಲಯ ಆಯುಕ್ತರು, ಮಾನ್ಯ ವಲಯ ಜಂಟಿ ಆಯುಕ್ತರ ಸೂಚನೆಯಂತೆ ಬೀಗ ಹಾಕಿ ಸೀಲ್ ಮಾಡಿರುವ ಮಳಿಗೆಗಳ ಮುಂಭಾಗದಲ್ಲಿ “ಈ ಅಂಗಡಿ ಮಳಿಗಯಲ್ಲಿ ಏಕ ಬಳಕೆ ನಿಷೇದಿತ ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಈ ಹಿಂದೆ ಹಲವಾರು ಬಾರಿ ಸೂಚನೆ ನೀಡಿಯೂ ಸಹ ಏಕ ಬಳಕೆ ನಿಷೇದಿತ ಪ್ಲಾಸ್ಟಿಕ್ ಬಳಸುತ್ತಿರುವುದು ದೃಢಪಟ್ಟಿರುವುದರಿಂದ ಪ್ಲಾಸ್ಟಿಕ್ ಬ್ಯಾನ್ ನೋಟಿಫಿಕೇಶನ್ ನಿಯಮ 4(ಸಿ), 4(ಡಿ) ಹಾಗೂ 14(1) ರ ಅನ್ವಯ ಹಾಗೂ ಮಾನ್ಯ ಹಸಿರು ನ್ಯಾಯಾಧೀಕರಣ ಮಂಡಳಿ ರಾಜ್ಯಮಟ್ಟದ ಸಮಿತಿ ರವರ ನಿರ್ದೇಶನಗಳಂತೆ ಈ ಅಂಗಡಿ ಮಳಿಗೆಯನ್ನು ಮುಂದಿನ ಆದೇಶದವರೆವಿಗೂ ಪಾಲಿಕೆಯ ವತಿಯಿಂದ ಮುಚ್ಚಲಾಗಿದೆ.” ಎಂಬ ಬಿತ್ತಿಪತ್ರವನ್ನು ಅಂಟಿಸಲಾಗಿದೆ.
44,400 ರೂ. ದಂಡ ವಸೂಲಿ:
ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳು ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ ಮಳಿಗೆಗೆಗಳಿಂದ ಒಟ್ಟಾರೆ ರೂ. 44,400/- ಗಳ ದಂಡ ವಸೂಲಿ ಮಾಡಲಾಗಿರುತ್ತದೆ.
ಧ್ವನಿವರ್ಧಕಗಳ ಮೂಲಕ ಜಾಗೃತಿ:
ಸಾರ್ವಜನಿಕರಿಗೆ ಮಾರ್ಷಲ್ ವಾಹನದ ಧ್ವನಿವರ್ಧಕದ ಮೂಲಕ ಹಾಗೂ ಪ್ರತಿದಿನ ಮನೆಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡುವ ಆಟೋಟಿಪ್ಪರ್ಗಳ ಧ್ವನಿವರ್ದಕದ ಮೂಲಕ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಕೈಚೀಲವನ್ನು ಬಳಸದಂತೆ ಜಾಗೃತಿ ಮೂಡಿಸಲಾಗುತ್ತದೆ.
ಪರಿಶೀಲನೆಯ ವೇಳೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಭಿಯಂತರರು ಮತ್ತು ಸಿಬ್ಬಂದಿಗಳು, ಕಾಮಗಾರಿ ವಿಭಾಗದ ಅಭಿಯಂತರರು, ಆರೋಗ್ಯ ವಿಭಾಗದ ಅಧಿಕಾರಿಗಳು, ಮಾರ್ಷಲ್ ಗಳು ಹಾಗೂ ಸ್ಥಳೀಯ ಪೋಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.