ಕಾರಣ ಹಲವಾರು, ದೂರಲು,ಹೀಗಳೆಯಲು, ಭೇದ- ಭಾವ ಹೆಣೆಯಲು. ಎಲ್ಲಕ್ಕಿಂತ ಮಿಗಿಲಾದದ್ದು ಕರುಳ ಸಂಬಂಧ.
ಇತ್ತೀಚೆಗೆ ಹೆಣ್ಣು ಮಕ್ಕಳಿಗೆ ಆಸ್ತಿ ಪಾಸ್ತಿ ಹಕ್ಕು ಬಂದ ಮೇಲಂತೂ ಕರುಳ ಸಂಬಂಧ ಮೀರಿ ಒಬ್ಬರನ್ನೊಬ್ಬರು ಅನುಮಾನಾಸ್ಪದ ದೃಷ್ಟಿಯಿಂದ ನೋಡುವುದೇ ಆಗಿದೆ.ಹೆಣ್ಣು ಮಕ್ಕಳಿಗೆ ತವರು ಸ್ವಲ್ಪ ಹೆಚ್ಗೇ ಮಿಡಿಯದಿದ್ದರೆ ಆದೀತೇ? ಹೆಂಗರುಳು ಹುಟ್ಟಿದ ಮನೆ ಮರೆಯಲು ಸಾಧ್ಯವೇ? ಹೀಗಿರುವಾಗ ಭಾವ- ಭಾಮೈದುನರು ವಿರಸದೆ ಒಟ್ಟು ಸೇರದೆ ಇರುವುದು ನೋಡುಗರಿಗೆ ತಮಾಷೆ ಅನಿಸುವುದು.
ತಮಿಳಿನಲ್ಲಿ ಸೋದರಮಾವನನ್ನು ತಾಯ್ಮಾಮ ಎನ್ನುತ್ತಾರೆ. ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರಿಂದ ಅವನು ಮಾಮ ಎಂಬರ್ಥದಲ್ಲಿ. ಎಲ್ಲರೂ ಜೊತೆಯಲ್ಲಿ ಹುಟ್ಟಲು ಸಾಧ್ಯವಿಲ್ಲ. ಏನೋ ಒಂದು ಕಾಣದ ಬಂಧ ಇಲ್ಲದೇ ಅಕ್ಕ ತಮ್ಮಂದಿರಾಗಿ ಹುಟ್ಟಲು ಸಾಧ್ಯವಿಲ್ಲ.
ಅಕ್ಕನ ಕಷ್ಟಕ್ಕೆ ತಮ್ಮ ಒದಗಬೇಕು. ತಮ್ಮನ ಕಷ್ಟಕ್ಕೆ ಅಕ್ಕ ಮಿಡಿಯಬೇಕು. ಅದೇ ಕಳ್ಳುಬಳ್ಳಿ ಸಂಬಂಧ. ಅಕ್ಕನಿಗೆ ಅಪ್ಪಿತಪ್ಪಿ ಹೊಡೆದಿದ್ದಾರೆ ಭಾವ ಎಂದು ಗೊತ್ತಾದರೆ ಅವರ ಮನೆಗೆ ಹೋಗದೆ ಹೊರಗೇ ಉಳಿದು ಬಿಡುವುದಲ್ಲ. ಕೇಳಲು ಯಾರೂ ಇಲ್ಲ ಎಂಬ ಅನಾಥ ಧೋರಣೆ ಅಕ್ಕನಲ್ಲಿ ಮನೆಮಾಡುವುದು. ತವರಿನವರಾಗಿ ನಾವಿದ್ದೇವೆ ಎನ್ನುವ ಒಂದು ಮನೋಭಾವ ಅದೆಷ್ಟೋ ಹೆಣ್ಣುಮಕ್ಕಳಿಗೆ ಶಕ್ತಿ ತುಂಬುತ್ತದೆ.
ಯಾರಿಗೂ ಯಾರೂ ಕೈಚಾಚಿ ಬದುಕುವುದಿಲ್ಲ. ಆಸ್ತಿ ಎಂಬುದು ಹೆಣ್ಣು ಮಕ್ಕಳ ಹಕ್ಕು ಆಗಿರುವುದರಿಂದ ಅದನ್ನು ಸಮಯೋಚಿತ ದೃಷ್ಟಿಯಲ್ಲಿ ಸ್ವೀಕರಿಸಲು ಕುಟುಂಬದ ಸದಸ್ಯರು ಸಿದ್ಧರಿರಬೇಕು.
ಆಸ್ತಿ ಕೊಡಲ್ಲ ಅಕ್ಕ ತಂಗಿಯರಿಗೆ ಎಂದು ಯೇಮಾರಿಸಲೂ ಆಗದು. ಕಾನೂನು ಕೋಟ್ಯಂತರ ಹೆಣ್ಣು ಮಕ್ಕಳ ಕಣ್ಣೀರಿಗೆ ಮಿಡಿದ ಕಾರಣ ಆಸ್ತಿ ಹಕ್ಕು ಬಹುಶಃ ಹೆಣ್ಣು ಮಕ್ಕಳಿಗೆ ಸಂದಿದೆ. ಹೀಗಿರುವಾಗ ಆಸ್ತಿ ಹೆಣ್ಣು ಮಕ್ಕಳಿಗೆ ಹೋಗುತ್ತದೆ ಎಂಬ ಕಾರಣಕ್ಕೂ ಕರುಳ ಸಂಬಂಧದಲ್ಲಿ ಕಲ್ಲು ಹಾಕಿಕೊಂಡವರೂ ಇಲ್ಲದಿಲ್ಲ.
ಭಾವ ಭಾಮೈದ ಒಟ್ಟು ಸೇರಬೇಕು, ಆಗಾಗ ಸಾರಾಯಿ ಸರಕು ಒಳಗಿಳಿಸಿಕೊಂಡು ಕಷ್ಟ ಸುಖ ಮಾತಾಡಿಕೊಳ್ಳಬೇಕು. ಹೀಗಿರುವಾಗ ದೂರದ ನಂಟರಂತೆ ನಟಿಸುವುದು ಸಲ್ಲ.
ಆಸ್ತಿ ಒಂದೇ ವಿಚಾರಕ್ಕೆ ಅಲ್ಲದಿದ್ದರೂ ಸಣ್ಣ ಪುಟ್ಟ ಮನಸ್ತಾಪಗಳಿಗಾಗಿ, ಹಂಗಂದರು, ಹಿಂಗಂದರು ಇತ್ಯಾದಿ ತೆರೆಮರೆಯ ಇರಿಸು ಮುರಿಸಿನ ಮಾತುಗಳಿಗಾಗಿ ಎದುರುಗಾಣದೆ ಹಿಂದೆ ಸರಿಯುವ ಸಂಬಂಧಗಳು ಸಹ ಎದುರುಬಂದಾಗ ತುಸು ಹೆಚ್ಚೇ ಹೃದಯ ಆಧ್ರಗೊಳ್ಳುತ್ತದೆ. ಕರುಳು ಸಂಬಂಧಗಳ ಗಟ್ಟಿಗಾರಿಕೆ ಅಂಥದ್ದು.
ಹೇಳಿಕೊಂಡು ಸ್ನೇಹಿತರಾಗಬಹುದು ಆದರೆ ಒಂದೇ ಕರುಳಬಳ್ಳಿಯ ಹೂಗಳಾಗಿ ಹುಟ್ಟಲು ಅದೃಷ್ಟ ಇರಬೇಕು. ಆ ಬಂಧ ಉಳಿಸಿಕೊಂಡು ‘ಒಂದೇ ಕುಟುಂಬದವರು ನಾವೆಲ್ಲಾ’ ಎಂದು ಎದೆಯುಬ್ಬಿಸಿಕೊಂಡು ಹೇಳಲು ಸಹ ಸಂಬಂಧ ಗಳನ್ನು ಕಾಪಾಡಿಕೊಂಡು ಹೋಗುವ ಜಾಗ್ರತೆ ಬೇಕು.
ಒಂದು ಹೆಣ್ಣು ಮಗಳ ಅದೆಷ್ಟೋ ಹಂತಗಳಲ್ಲಿ ತವರಿನವರೇ ಬಂದು ತಮ್ಮ ಶಾಸ್ತ್ರ, ಸಂಪ್ರದಾಯ ಮುಗಿಸಿ ತಮ್ಮತನ ಮೆರೆಯಬೇಕಿರುತ್ತದೆ. ಹೆಣ್ಣು ಮಗಳ ಮಕ್ಕಳ ಕಿವಿ ಚುಚ್ಚುವ ಶಾಸ್ತ್ರದಿಂದ ಹಿಡಿದು ಷೋಡಶಿಯಾದಾಗಲೂ ತವರು ಮನೆಯವರ ಆಗಮನಕ್ಕೆ, ಶಾಸ್ತ್ರಕ್ಕೆ ಆದ್ಯತೆ. ಮದುವೆಯಲಂತು ಕೆಲವು ಹಿಂದೂ ಕುಟುಂಬಗಳು ಸೋದರ ಮಾವನಿಂದ ಮೊದಲ ತಾಳಿ ಕಟ್ಟಿಸುವುದಿದೆ.
ಒಂದು ಪಕ್ಷ ಅದೇ ಹೆಣ್ಣು ಮಗಳ ಪತಿ ದುರದೃಷ್ಟವಶಾತ್ ಇಲ್ಲವಾದಾಗಲೂ ತವರಿನವರು ಬಂದು ಆಕೆಗೆ ಕೆಲವು ಉಡುಗೊರೆ ನೀಡಿ ಕರ್ತವ್ಯ ಮಾಡಬೇಕಿರುತ್ತದೆ. ಹೀಗೆ ತವರುಇನ ಮಗಳು ಎಂದೆಂದಿಗೂ ತವರಿನ ಅವಿಭಾಜ್ಯ ಅಂಗವಾಗೇ ಉಳಿದಿರುತ್ತಾಳೆ. ಯಾರು ಬೇಕಾದರೂ ಸಂಪಾದಿಸಬಲ್ಲ. ಸ್ಥಿರ-ಚರ ವಸ್ತುಗಳಿಗಾಗಿ ಕರುಳು ಕಡಿದುಕೊಳ್ಳುವುದು ಸಲ್ಲದ ವಿಚಾರ.
-ನಳಿನಾ, ಚಿಕ್ಕಮಗಳೂರು