ಬೆಂಗಳೂರು: ಕೇಂದ್ರ ವ್ಯಾಪ್ತಿಯಲ್ಲಿ ಬರುವ 7 ವಿಧಾನ ಸಭಾ ಕ್ಷೇತ್ರ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಪ್ರಮಾಣವನ್ನು ಇನ್ನೂ ಹೆಚ್ಚು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಬೆಂಗಳೂರು ಕೇಂದ್ರದ ಮತದಾರರ ಪಟ್ಟಿ ವೀಕ್ಷಕರು(Roll Observer) ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಭಾ.ಆ.ಸೇ ರವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಬರುವ ಲಿಂಗ ಪ್ರಮಾಣ, ಚುನಾವಣಾ ಜನಸಂಖ್ಯೆ(EP) ಪ್ರಮಾಣ ಹಾಗೂ ಯುವ ಮತದಾರರ ನೋಂದಣಿ ಪ್ರಮಾಣ ಸಂಬಂಧಿಸಿದಂತೆ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಬರುವ 7 ವಿಧಾನ ಸಭಾ ಕ್ಷೇತ್ರ(ಆರ್ಆರ್ ನಗರ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ರಾಜಾಜಿನಗರ)ಗಳಲ್ಲಿ ಮತದಾರರ ಪಟ್ಟಿಯಲ್ಲಿ ಲಿಂಗ ಪ್ರಮಾಣವು ಹೆಚ್ಚಾಗಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಮುಂದುವರೆದು, ಬೆಂಗಳೂರು ಕೇಂದ್ರ ಚುನಾವಣಾ ವಿಭಾಗದಲ್ಲಿ ಚುನಾವಣಾ ಅಧಿಕಾರಿಗಳು ಸೂಪರ್ ಚೆಕ್ಕಿಂಗ್ ಮಾಡಿರುವ ಬಗ್ಗೆ ವಿಚಾರಿಸಿ ನಮೂನೆ 6, 7, 8 ಹಾಗೂ 8ಎ ಯನ್ನು ಪರಿಶೀಲಿಸಿದರು.
ಸಭೆಯಲ್ಲಿ ಬೆಂಗಳೂರು – ಕೇಂದ್ರ ಚುನಾವಣಾ ಜಿಲ್ಲೆಯ ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ ಹರೀಶ್ ಕುಮಾರ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಅಜಯ್ ಸೇರಿದಂತೆ ಮತದಾರರ ನೊಂದಣಿ ಅಧಿಕಾರಿಗಳು ಹಾಗೂ ಇತರೆ ಚುನಾವಣಾ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.