ಬೆಳಗಾವಿ: ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರೈತರ ವಿಚಾರವಾಗಿ ನಾಲಿಗೆ ಹರಿಬಿಟ್ಟ ಸಂಬಂಧ ಕರ್ನಾಟಕ ರಾಜ್ಯ ರೈತ ಸಂಘದಿಂದ ಬೆಳಗಾವಿಯಲ್ಲಿ ಉಗ್ರ ಪ್ರತಿಭಟನೆ ನಡೆಸಿದರು.
ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ನಿವಾಸದಲ್ಲಿನ ಕಛೇರಿ ಮುಂದೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಚಿವರು ಎಲುಬಿಲ್ಲದ ನಾಲಿಗೆ ಹರಿಬಿಟ್ಟು ದೇಶದ ಬೆನ್ನೆಲುಬಾದ ರೈತರನ್ನು ಅಪಹಾಸ್ಯ ಮಾಡಿದ್ದು ಅಲ್ಲದೆ ಅವಮಾನ ಮಾಡಿ, ಅವರನ್ನು ಪದೇ ಪದೆ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ರೈತರ ತಾಳ್ಮೆಯ ಕಟ್ಟೆ ಒಡೆದು ಬೀದಿಗಿಳಿದು ಮಾನಗೇಡಿ ಸಕ್ಕರೆ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ರೈತರ ಮೇಲೆ ಕೊಂಚವಾದರೂ ಕಾಳಜಿ, ಗೌರವವಿದ್ದರೆ ಕೂಡಲೇ ಕಾಂಗ್ರೆಸ್ ಸರ್ಕಾರ ರಾಜೀನಾಮೆ ಪಡೆಯಲೇ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಶಿವಾನಂದ ಪಾಟೀಲ್ ಅವರ ಹೇಳಿಕೆಯನ್ನು ಖಂಡಿಸದೆ ಇರುವುದು ಕೂಡ ರೈತರಿಗೆ ಮಾಡುತ್ತಿರುವ ಅಪಮಾನ. ರೈತರು ಸಚಿವರುಗಳ ಮನೆಗೆ ನುಗ್ಗುವುದಕ್ಕೂ ಮುನ್ನ ಎಚ್ಚೆತ್ತು ರಾಜೀನಾಮೆ ಪಡೆದು ರೈತರಿಗೆ ಗೌರವ ನೀಡಲಿ ಎಂದರು.
ಪ್ರತಿಭಟನೆಯ ಕಿತ್ತು ಜೋರಾಗುತ್ತಿದ್ದಂತೆ ಪೊಲೀಸರು ಎಚ್ಚತ್ತು ಪ್ರತಿಭಟನೆ ನಿರತ ರೈತ ಸಂಘದ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು. ಈ ವೇಳೆ ಪೊಲೀಸರು ಮತ್ತು ಧರಣಿ ನಿರತರ ನಡುವೆ ಕೆಲಕಾಲ ತಳ್ಳಾಟ ನೂಕಾಟದ ಘಟನೆಯೂ ಉಂಟಾಗಿತ್ತು.