ಬೆಂಗಳೂರು: ಕೆಎಲ್ ಇ ಸೊಸೈಟಿ ಅಧ್ಯಕ್ಷರಾದ ಪ್ರಭಾಕರ ಕೋರೆ ಅವರ ೫೦ನೇ ವಿವಾಹ ವಾರ್ಷಿಕೋತ್ಸವ ಮತ್ತು ವಿಜಯಪುರದಲ್ಲಿ ತಮ್ಮ ನೇತೃತ್ವದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಕಾರ್ಯಕ್ರಮಗಳು ಪೂರ್ವ ನಿಗದಿತವಾಗಿದ್ದವು. ಹೀಗಾಗಿ, ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಖುದ್ದಾಗಿ ಭಾಗವಹಿಸಲು ಆಗಲಿಲ್ಲ. ಆದರೆ, ಅಧಿವೇಶನಕ್ಕೆ ಸಂದೇಶ ಕಳಿಸಿಕೊಟ್ಟಿದ್ದೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಮೇಲಿನ ಎರಡೂ ಕಾರ್ಯಕ್ರಮಗಳು ಬಹಳ ದಿನಗಳ ಮೊದಲೇ ನಿಗದಿ ಆಗಿದ್ದವು. ಇಲ್ಲದಿದ್ದರೆ ನಾನೂ ಅಧಿವೇಶನಕ್ಕೆ ಹೋಗುತ್ತಿದ್ದೆ. ಅಧಿವೇಶನಕ್ಕೆ ನನ್ನನ್ನು ಉದ್ಘಾಟಕನನ್ನಾಗಿ ಆಹ್ವಾನಿಸಲಾಗಿತ್ತು. ಇದರಲ್ಲಿ ಅಸಮಾಧಾನದ ಪ್ರಶ್ನೆಯೇನೂ ಇಲ್ಲ’ ಎಂದರು.
ಅಧಿವೇಶನದಲ್ಲಿ ಜಾತಿ ಗಣತಿ ಕುರಿತು ನಿರ್ಣಯ ಅಂಗೀಕರಿಸಲಾಗಿದೆ. ಲಿಂಗಾಯತರಲ್ಲಿ ಇರುವ ೬೦-೭೦ ಒಳಪಂಗಡಗಳೆಲ್ಲವೂ ಒಂದೇ ಸೂರಿನಡಿ ಬರಬೇಕು. ಹೀಗಾದರೆ ಮಾತ್ರ ಲಿಂಗಾಯತ ಸಮುದಾಯಕ್ಕೆ ಮೀಸಲಾತಿಯ ಲಾಭ ಸಿಗುತ್ತದಷ್ಟೆ. ಇದನ್ನು ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.