ಬೆಂಗಳೂರು:ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳ ಹಕ್ಕೊತ್ತಾಯಗಳಿಗಾಗಿ ಅನೇಕ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಎಲ್ಲಾ ದೇವದಾಸಿಯರಿಗೆ ನೀಡುವ ಮಾಸಿಕ ಧನಸಹಾಯವನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಮತ್ತು ಅವರ ಹೆಣ್ಣು ಮಕ್ಕಳಿಗೂ ಅದನ್ನು ವಿಸ್ತರಿಸಬೇಕು ಎನ್ನುವುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇಂದಿನಿಂದ ಡಿಸೆಂಬರ್ 30ರ ವರೆಗೆ ನಗರದ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹಗಳನ್ನು ಆಯೋಜಿಸಲಾಗಿದೆ.
ಬೃಹತ್ ಪ್ರತಿಭಟನಾ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪ್ರತಿಭಟನಾನಿರತರಿಗೆ ತಮ್ಮ ಪಕ್ಷದ ಬೆಂಬಲವಿರುವುದಾಗಿ ಘೋಷಿಸಿದರು. ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ದೇವದಾಸಿ ಮಹಿಳೆಯರು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಜಂಟಿಯಾಗಿ ಡಿಸೆಂಬರ್ 28, 29 ಮತ್ತು 30ರಂದು ಬೃಹತ್ ಪ್ರತಿಭಟನಾ ಧರಣಿ- ಸತ್ಯಾಗ್ರಹವನ್ನು ಹಮ್ಮಿಕೊಂಡಿವೆ.