ಬೆಂಗಳೂರು: ಕಾಡುಗೊಲ್ಲ, ಅಡವಿಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳ ಜನರನ್ನು ಪರಿಶಿಷ್ಠ ವರ್ಗದ ಪಟ್ಟಿಗೆ ಸೇರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿಯಾದ ಸಮುದಾಯದ ಮುಖಂಡರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು. ಮಾಜಿ ಪ್ರಧಾನಿಗಳು ಸಮುದಾಯದ ಬಗ್ಗೆ ಪ್ರಧಾನಿಗಳಿಗೆ ಮನವಿ ಸಲ್ಲಿಸುವ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಕೂಡ ಇದ್ದರು.
ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರೊಂದಿಗೆ ಮಾಜಿ ಪ್ರಧಾನಿಗಳು; ಈ ಸಮುದಾಯ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಪುರೋಭಿವೃದ್ಧಿ ಹೊಂದಲು ಎಸ್ಟಿ ವರ್ಗಕ್ಕೆ ಸೇರಿಸಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದ್ದರು. ಇದರಿಂದ ಸಂತಸಗೊಂಡ ಸಮುದಾಯದ ಪ್ರಮುಖರು ಮಾಜಿ ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರ ಜತೆ ಚರ್ಚೆ ನಡೆಸಿದ ಮಾಜಿ ಪ್ರಧಾನಿಗಳು; ನನ್ನ ಮನವಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ನಾನು ಸಲ್ಲಿಸಿದ ಮನವಿ ಪತ್ರವನ್ನು ಬುಡಕಟ್ಟು ಸಮುದಾಯ ವ್ಯವಹಾರಗಳ ಖಾತೆ ಸಚಿವ ಅರ್ಜುನ್ ಮುಂಡಾ ಅವರಿಗೆ ಕಳಿಸಿಕೊಟ್ಟರು.
ತಕ್ಷಣವೇ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು; “ತಮ್ಮ ಮನವಿಯನ್ನು ಪರಿಗಣಿಸಿ ಪರಿಶೀಲನೆ ನಡೆಸಲಾಗುತ್ತಿದೆ” ನನಗೆ ಪತ್ರದ ಮುಖೇನ ತಿಳಿಸಿದ್ದಾರೆ ಎಂದು ಮುಖಂಡರಿಗೆ ತಿಳಿಸಿದರು.
ಅಲ್ಲದೆ, ಈ ಬಗ್ಗೆ ತಾವು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಪತ್ರ ಬರೆದು ಮನವಿ ಮಾಡಿಕೊಂಡಿದ್ದೆ. ಅವರೂ ಕೂಡ ಮನವಿ ಸಕಾರಾತ್ಮಕವಾಗಿ ಸ್ಪಂದಿಸಿ ಉತ್ತರ ಬರೆದಿದ್ದಾರೆ ಎಂದು ಮಾಜಿ ಪ್ರಧಾನಿಗಳು ವಿಚಾರಿಸಿದರು.
ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಅಲಕ್ಷ್ಯಕ್ಕೆ ತುತ್ತಾಗಿರುವ ಅಡವಿಗೊಲ್ಲ ಸಮುದಾಯಕ್ಕೆ ರಾಜಕೀಯವಾಗಿಯೂ ಪ್ರಾತಿನಿದ್ಯ ಸಿಕ್ಕಿಲ್ಲ. ಮಾಜಿ ಪ್ರಧಾನಿಗಳ ಈ ಪ್ರಯತ್ನದಿಂದ ನಮ್ಮ ಸಮುದಾಯಕ್ಕೆ ದೊಡ್ಡ ಆಶಾಕಿರಣ ಮೂಡಿದಂತಾಗಿದೆ. ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗುತ್ತದೆ ಎನ್ನುವ ವಿಶ್ವಾಸ ಹೊಂದಿದ್ದೇವೆ ಎಂದು ಮುಖಂಡರು ಕೃತಜ್ಞತಾಪೂರ್ವಕವಾಗಿ ಹೇಳಿದರು.
ಡಿಸೆಂಬರ್ 21ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದ ಮಾಜಿ ಪ್ರಧಾನಿಗಳು; ಶೋಷಿತ ಕಾಡುಗೊಲ್ಲ ಸಮುದಾಯದ ದುಸ್ಥಿತಿಯ ಬಗ್ಗೆ ಗಮನ ಸೆಳೆದು, ಅವರನ್ನು ಪರಿಶಿಷ್ಠ ವರ್ಗದ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದರು.
ಈ ಮನವಿಯನ್ನು ಪರಿಗಣಿಸಿದ್ದ ಪ್ರಧಾನಿಗಳು, ಅದನ್ನು ಬುಡಕಟ್ಟು ಸಮುದಾಯ ವ್ಯವಹಾರಗಳ ಸಚಿವಾಲಯಕ್ಕೆ ಪರಿಶೀಲನೆಗೆ ಕಳಿಸಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಮೀನಾಕ್ಷಿ ನಂದೀಶ್ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಜರಿದ್ದರು.