ಬೆಂಗಳೂರು: ನಿರುದ್ಯೋಗಿ ಪದವಿಧರರಿಗೆ ಯುವನಿಧಿ ಯೋಜನೆ ಮೂಲಕ ಮಾಸಿಕ ಭತ್ಯೆ ಕೊಡುವುದಾಗಿ ಹೇಳಿರುವ ರಾಜ್ಯ ಸರ್ಕಾರ ಯೋಜನೆ ಜಾರಿಗೆ ಮುನ್ನವೇ ಪದವಿ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಹೆಚ್ಚಿಸಿರುವ ಕ್ರಮವನ್ನು ಆಮ್ ಆದ್ಮಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಜಿ. ಹನುಮಾಪುರ ಟೀಕಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಯೋಜನೆಗಳನ್ನು ಸರಿಯಾಗಿ ನಕಲು ಮಾಡುವಲ್ಲಿ ಕೂಡ ಕಾಂಗ್ರೆಸ್ ವಿಫಲವಾಗಿದೆ. ಪದವಿ ಪ್ರವೇಶ ಶುಲ್ಕ ಹೆಚ್ಚಿಸುವ ಮೂಲಕ ಅದೇ ಹಣದಲ್ಲಿ ಯುವನಿಧಿ ಯೋಜನೆ ಜಾರಿಗೆ ತರಲು ಮುಂದಾಗಿದೆ. ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ, ನಿರುದ್ಯೋಗಿ ಪದವೀಧರರಿಗೆ ನೀಡುವುದು ಒಂದು ಸಾಧನೆಯೇ ಎಂದು ಪ್ರಶ್ನಿಸಿದ್ದಾರೆ.
ಪದವಿ ಕೋರ್ಸ್ ಶುಲ್ಕವನ್ನು ಶೇಕಡಾ 10ರಷ್ಟು ಏರಿಕೆ ಮಾಡಲು ತೀರ್ಮಾನಿಸಿದ್ದು, ಶೀಘ್ರದಲ್ಲೇ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸುವ ಸಾಧ್ಯತೆಯಿದೆ. ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಯುವ ಜನತೆ, ಬಡ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಪದವಿ ಪ್ರವೇಶ ಶುಲ್ಕ ಹೆಚ್ಚಳ ಮಾಡುವ ಯೋಜನೆಯನ್ನು ಕೈಬಿಡಲಿ. ಸರ್ಕಾರದ ಈ ನಿರ್ಧಾರದಿಂದ ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹೊರೆಯಾಗಲಿದೆ. ಕಾಂಗ್ರೆಸ್ ಸರ್ಕಾರ ಚುನಾವಣಾ ರಾಜಕೀಯಕ್ಕೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಬಾರದು. ಒಂದು ವೇಳೆ ಸರ್ಕಾರ ಶುಲ್ಕ ಹೆಚ್ಚಳ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಲೋಹಿತ್ ಜಿ. ಎಚ್ಚರಿಕೆ ನೀಡಿದ್ದಾರೆ.