ಶಿವಮೊಗ್ಗ : ಸ್ವಾಮಿ ವಿವೇಕಾನಂದರ ಜಯಂತಿ-ರಾಷ್ಟ್ರೀಯ ಯುವ ದಿನವಾದ ಜ.12 ರಂದು ರಾಜ್ಯ ಸರ್ಕಾರದ 5 ನೇ ಗ್ಯಾರಂಟಿಯಾದ ‘ಯುವನಿಧಿ’ ಯೋಜನೆಗೆ ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಚಾಲನೆ ನೀಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು, ಯುವಜನತೆ, ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಕರೆ ನೀಡಿದರು.
ಯುವನಿಧಿ ಯೋಜನೆ ಉದ್ಘಾಟನಾ ಸಮಾರಂಭದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪದವಿ/ಡಿಪ್ಲೊಮಾ ಉತ್ತೀರ್ಣರಾದ ನಂತರ ಆರು ತಿಂಗಳಲ್ಲಿ ಉದ್ಯೋಗ ದೊರೆಯದಿದ್ದವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ. ಪದವಿ ಮುಗಿದ ನಂತರ ಮುಂದೇನು ಮಾಡುವುದು ಎಂಬ ಯೋಚನೆ ಜೊತೆಗೆ ಆರ್ಥಿಕ ಒತ್ತಡವೂ ಇರುತ್ತದೆ. ಉದ್ಯೋಗ ಹುಡುಕಲು, ಅರ್ಜಿಗಳನ್ನು ಹಾಕಲು ಯುವನಿಧಿ ನಿರುದ್ಯೋಗ ಭತ್ಯೆ ಸಹಾಯ ಮಾಡುವುದರೊಂದಿಗೆ ಒಂದು ವಿಶ್ವಾಸ ಮತ್ತು ಭರವಸೆಯನ್ನು ಯುವಜನತೆಯಲ್ಲಿ ತುಂಬಲಿದೆ. ಯುವನಿಧಿ ಯೋಜನೆ ಅನುಷ್ಟಾನದ ಕುರಿತಾದ ವ್ಯವಸ್ಥೆಗಳು ಉತ್ತಮವಾಗಿ ನಡೆಯುತ್ತಿದೆ. ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಕಾರವಾರ, ಚಿತ್ರದುರ್ಗದಿಂದ ಸಹ ಯುಜನತೆ ಆಗಮಿಸಲಿದ್ದು 1.5 ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಸಾಗಿವೆ. ಗೃಹಜ್ಯೋತಿ ಸುಮಾರು ಶೇ.90 ರಷ್ಟು, ಗೃಹಲಕ್ಷ್ಮಿ ಶೇ.93 ರಷ್ಟು, ಅನ್ನಭಾಗ್ಯ ಶೇ.96 ರಷ್ಟು ಬಳಕೆಯಾಗುತ್ತಿದ್ದು, ಶಕ್ತಿ ಯೋಜನೆ ಮುಖಾಂತರ 200 ಕೋಟಿ ಮಹಿಳೆಯರು ಕಳೆದ 5 ತಿಂಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಒಂದು ಗ್ರಾಮ ಪಂಚಾಯಿತಿಗೆ ಈ ಯೋಜನೆಗಳಿಂದ ಒಂದು ತಿಂಗಳಿಗೆ ಸುಮಾರು 75 ಲಕ್ಷದವರೆಗೆ ಅನುದಾನ ಲಭ್ಯವಾಗುತ್ತಿದೆ. ಹಾಗೂ ವರ್ಷಕ್ಕೆ ರೂ.8 ಕೋಟಿ ಕುಟುಂಬಗಳಿಗೆ ಸರಾಸರಿ 5 ಸಾವಿರ ರೂಪಾಯಿ ಭತ್ಯೆ ದೊರೆಯುತ್ತಿದ್ದು ಸಾಮಾನ್ಯ ಜನರಿಗೆ ಅನುಕೂಲವಾಗುತ್ತಿದೆ. ಕಷ್ಟದಲ್ಲಿರುವವರಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗೂ ಇತರೆ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳುತ್ತಲಿದೆ ಎಂದರು.
ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, 2023 ರಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯಡಿ 2 ವರ್ಷಗಳವರೆಗೆ ನಿರುದ್ಯೊಗ ಭತ್ಯೆ ನೀಡಲಾಗುವುದು. ಹಾಗೂ ಸ್ಕಿಲ್ ಕನೆಕ್ಟ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು ತರಬೇತಿಯನ್ನು ನೀಡಲಾಗುವುದು. ನಿರುದ್ಯೋಗ ಬಹಳ ದೊಡ್ಡ ಸಮಸ್ಯೆಯಾಗಿದ್ದು ಉದ್ಯೋಗವನ್ನು ಒದಗಿಸಲು ಸಹಕರಿಸುವುದು ಮತ್ತು ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಪ್ರಸ್ತುತ 61,700 ಪದವಿ/ಡಿಪ್ಲೊಮಾ ಹೊಂದಿದ ಅಭ್ಯರ್ಥಿಗಳು ಈ ಯೋಜನೆಯಡಿ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 2022-23 ರಲ್ಲಿ ಒಟ್ಟು 5.29 ಲಕ್ಷ ವಿದ್ಯಾರ್ಥಿಗಳು ಪದವಿ/ಡಿಪ್ಲೊಮಾ ಮುಗಿಸಿದ್ದಾರೆ. ವಿದ್ಯಾಭ್ಯಾಸ ಮುಗಿದು ಆರು ತಿಂಗಳಾದರೂ ಉದ್ಯೋಗ ಸಿಗದವರು ಫಲಾನುಭವಿಗಳಾಗಲು ಅರ್ಹರಿದ್ದಾರೆ. ನೋಂದಣಿ ಪ್ರಕ್ರಿಯೆ ಆನ್ಲೈನ್ನಲ್ಲಿ ಉಚಿತ ಮತ್ತು ಸರಳವಾಗಿದೆ ಎಂದರು.
ಕಲಿಕೆ ಜೊತೆಗೆ ಕೌಶಲ್ಯಾಭಿವೃದ್ದಿ ಇಲಾಖೆ ಮೂಲಕ ಕೌಶಲ್ಯವನ್ನು ಕಲಿಸಲಾಗುತ್ತಿದ್ದು ಸರ್ಕಾರ ಯುವಜನತೆಗೆ ನಿರುದ್ಯೋಗ ಸಮಸ್ಯೆ ಎದುರಿಸಲು ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಇದರ ಸದುಪಯೋಗ ಪಡೆಯಬೇಕೆಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥನ್ಕುಮಾರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಇತರೆ ಮುಖಂಡರು ಹಾಜರಿದ್ದರು.