ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಸ್ತುತ ಸಾಲಿನಲ್ಲಿ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳಲ್ಲಿ ವರ್ಗೀಕರಿಸಲಾಗಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ 446 ನಗರಗಳ ಪೈಕಿ 125ನೇ ಸ್ಥಾನವನ್ನು ಪಡೆದಿದೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ವತಿಯಿಂದ ವಾರ್ಷಿಕ ಸ್ಚಚ್ಛತಾ ಸಮೀಕ್ಷೆ ನಡೆಸುತ್ತಿದ್ದು ಪ್ರಸ್ತುತ ಸಾಲಿನ ಸ್ವಚ್ಛ ಸರ್ವೇಕ್ಷಣ್-2023ರ ಸಮೀಕ್ಷೆಯಲ್ಲಿ ನಗರಗಳನ್ನು 1 ಲಕ್ಷ ಜನಸಂಖ್ಯೆಯ ಒಳಗೆ ಹಾಗೂ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳು ಎಂಬುದಾಗಿ ವರ್ಗೀಕರಿಸಿ ಅದರಂತೆ ಶ್ರೇಯಾಂಕಗಳನ್ನು ನೀಡಲಾಗಿರುತ್ತದೆ.
ಕಳೆದ ಸಾಲಿನ ಸಮೀಕ್ಷೆಯಲ್ಲಿ ನಗರಗಳನ್ನು 10 ಲಕ್ಷ ಮೇಲ್ಪಟ್ಟ ನಗರ ಅಡಿಯಲ್ಲಿ ವರ್ಗೀಕರಿಸಲಾಗಿದ್ದು, ಸದರಿ ಸಮೀಕ್ಷೆಯಲ್ಲಿ ನಗರವು 45 ನಗರಗಳ ಪೈಕಿ 43ನೇ ನಗರವಾಗಿರುತ್ತದೆ.
1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳ ಮಾನದಂಡವನ್ನು 2017ನೇ ಸಾಲಿನಿಂದ 2020ನೇ ಸಾಲಿನ ವರೆಗೆ ಅನ್ವಯಿಸಲಾಗಿರುತ್ತದೆ. 2017ನೇ ಸಾಲಿನಲ್ಲಿ 210ನೇ ಸ್ಥಾನ, 2018ನೇ ಸಾಲಿನಲ್ಲಿ 216ನೇ ಸ್ಥಾನ, 2019ನೇ ಸಾಲಿನಲ್ಲಿ 194ನೇ ಸ್ಥಾನ ಮತ್ತು 2020ನೇ ಸಾಲಿನಲ್ಲಿ 214ನೇ ಸ್ಥಾನ ಪಡೆದಿದ್ದು, ಈ ಬಾರಿ 125ನೇ ಸ್ಥಾನಗಳಿಸಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದಾಗ ಪಾಲಿಕೆಯು ಮೈಸೂರು, ಹುಬ್ಬಳ್ಳಿ ಧಾರವಾಡ ನಂತರ 3ನೇ ಸ್ಥಾನದಲ್ಲಿದ್ದು ,ರಾಜ್ಯದಲ್ಲಿಯೇ 3ನೇ ಸ್ವಚ್ಛ ನಗರವಾಗಿದೆ.
*ಇದೇ ಪ್ರಥಮ ಬಾರಿಗೆ ಬೆಂಗಳೂರು ನಗರಕ್ಕೆ ನೈರ್ಮಲ್ಯ ಸಮೀಕ್ಷೆಯಲ್ಲಿ ಉನ್ನತ ಶ್ರೇಯಾಂಕವಾದ ವಾಟರ್ + (Water +) ನೀಡಿದೆ*
Service Level Progress, Citizens Voice ಅಡಿಯಲ್ಲಿ ಪಾಲಿಕೆಯು ಉತ್ತಮವಾಗಿ ನಿರ್ವಹಿಸಿದ್ದು, ಸಾರ್ವಜನಿಕರು ಪಾಲಿಕೆಯೊಂದಿಗೆ ಸಮೀಕ್ಷೆಯಲ್ಲಿ ಭಾಗವಹಿಸಿರುವುದು ಸಹ ಉತ್ತಮ ಆಡಳಿತಕ್ಕೆ ಸ್ಫೂರ್ತಿಯಾಗಿದೆ ಎಂದು ಪತ್ರಿಕಾ ಪ್ರಟಣೆಯಲ್ಲಿ ತಿಳಿಸಲಾಗಿದೆ.