ಚಿಕ್ಕಬಳ್ಳಾಪುರ: ನಿರುದ್ಯೋಗ ಸಮಸ್ಯೆ ನಿವಾರಣೆಗೆ ನಿರಂತರ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ನಿರುದ್ಯೋಗಿಗಳಿಗೆ ಅನುಕೊಳ್ಳವಾಗಲೆಂದು ಪ್ರತ್ಯೇಕ ಕಾಲ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ ಎಂದು ಯೂತ್ ಫೌಂಡೇಶನ್ ನ ಅಧ್ಯಕ್ಷ ಎಂಎಸ್ ರಕ್ಷಾ ರಾಮಯ್ಯ ಅಭಯ.
ಎಂ.ಎಸ್. ರಾಮಯ್ಯ ಯೂತ್ ಫೌಂಡೇಶನ್ ನಿಂದ ಚಿಕ್ಕಬಳ್ಳಾಪುರದಲ್ಲಿ ನಡೆದ ಬೃಹತ್ ಉದ್ಯೋಗ ಮತ್ತು ಸಾಲ ಮೇಳ ಯಶಸ್ವಿಯಾಗಿದ್ದು, 114 ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಿದ್ದವು.
ನಗರದ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಬೃಹತ್ ಉದ್ಯೋಗ ಮತ್ತು ಸಾಲ ಮೇಳದಲ್ಲಿ ಶೇ 60 ಮಂದಿಗೆ ಉದ್ಯೋಗ ಮತ್ತು ಶೇ 40 ರಷ್ಟು ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ.
ಬೆಳಿಗ್ಗೆ 9 ಗಂಟೆಗೆ ಆರಂಭವಾದ ಉದ್ಯೋಗ ಮೇಳ ಸಂಜೆವರೆಗೆ ನಡೆಯಿತು. ಹೆಚ್ಚಿನ ಪ್ರಮಾಣದಲ್ಲಿ ಯುವ ಜನಾಂಗ ಪಾಲ್ಗೊಂಡಿತ್ತು. ಒಟ್ಟು 7,500 ಮಂದಿ ಮೇಳದಲ್ಲಿ ಭಾಗವಹಿಸಿದ್ದು, ಮೇಳಕ್ಕೆ ಅಭೂತಪೂರ್ವ ಯಶಸ್ಸು ಲಭಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎಸ್. ರಾಮಯ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ, ಸ್ವಾತಂತ್ರ್ಯ ನಂತರದಲ್ಲಿ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ಇದೀಗ ನಿರ್ಮಾಣವಾಗಿದ್ದು, ಉದ್ಯೋಗ ದೊರಕಿಸಿಕೊಡಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿಲ್ಲ. ಆದರೆ ತಾವು ಚಿಕ್ಕಬಳ್ಳಾಪುರದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಒತ್ತು ನೀಡಿದ್ದು, ನಿರಂತರವಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ವಾಟ್ಸ್ ಅಪ್ ಚಾಟ್ ಮತ್ತು ಪ್ರತ್ಯೇಕ ಸಹಾಯವಾಣಿ ತೆರೆಯಲಾಗಿದೆ. ಉದ್ಯೋಗ ಸಿಗದವರು ನಿರಾಶರಾಗಬೇಕಿಲ್ಲ ಎಂದರು.
ಯುವ ಸಮೂಹಕ್ಕೆ ಒಳ್ಳೆಯ ಕೆಲಸ ಮಾಡಲು ಬದ್ಧನಾಗಿದ್ದು, ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಚಿಕ್ಕಬಳ್ಳಾಪುರದ ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಮುಂಬರುವ ದಿನಗಳಲ್ಲಿ ಉದ್ಯೋಗ ಮೇಳಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನಡೆಸಲಾಗುವುದು ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್ ಮಾತನಾಡಿ, ಯುವ ನಿಧಿ ಇಡೀ ರಾಷ್ಟ್ರದಲ್ಲೇ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು, ನಮ್ಮ ಪಕ್ಷ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ನೀಡಿದೆ. ಖಾಸಗಿ ಸಂಸ್ಥೆಗಳು ನೇಮಕಾತಿ ಏಜನ್ಸಿಗಳನ್ನು ಹೊಂದಿದ್ದು, ತಮಗೆ ಬೇಕಾದವರಿಗೆ ಉದ್ಯೋಗ ನೀಡುತ್ತವೆ. ಆದರೆ ಇಲ್ಲಿ ನೇರವಾಗಿ ಉದ್ಯೋಗ ನೀಡುತ್ತಿರುವುದು ಉತ್ತಮ ಬೆಳವಣಿಯಾಗಿದೆ. ಉದ್ಯೋಗದ ಜೊತೆ ಸಾಲ ಮೇಳ ವಿಶೇಷವಾದದ್ದು ಎಂದರು.