ಬೆಂಗಳೂರು: ದೇಶದಲ್ಲಿ ವಿಮಾನಯಾನ ಕ್ಷೇತ್ರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮೂಲೆ ಮೂಲೆಗೆ ಸಂಪರ್ಕ ವ್ಯವಸ್ಥೆ ನಿರ್ಮಾಣವಾಗುತ್ತಿದೆ. ಕರ್ನಾಟಕವು ಮುಂದಿನ ದಿನಗಳಲ್ಲಿ ಅತಿ ದೊಡ್ಡ ಏವಿಯೇಷನ್ ಹಬ್ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಅವರು ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ ಲೋಕಾರ್ಪಣೆಗೊಳಿಸಿ ಮತ್ತು ಹೆಣ್ಣು ಮಕ್ಕಳಿಗೆ ವಿಮಾನಯಾನ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡುವ ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಂಗಳೂರಿನ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ನ ಉದ್ಘಾಟನೆ ಹಾಗೂ ಬೋಯಿಂಗ್ ಸುಕನ್ಯಾ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇದು ದೇಶದ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರಕ್ಕೆ ಭಾರತೀಯ ಹೆಣ್ಣು ಮಕ್ಕಳ ಪ್ರವೇಶವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮ ಭಾರತದಾದ್ಯಂತ ಹುಡುಗಿಯರು ಮತ್ತು ಮಹಿಳೆಯರಿಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ನಿರ್ಣಾಯಕವಾದ ಕೌಶಲ್ಯಗಳನ್ನು ಹೊಂದಲು ಮತ್ತು ವಾಯುಯಾನ ವಲಯದಲ್ಲಿ ಉದ್ಯೋಗಿಗಳಿಗೆ ತರಬೇತಿ ನೀಡಲು ಅವಕಾಶಗಳನ್ನು ಒದಗಿಸುತ್ತದೆ. ಯುವತಿಯರಿಗಾಗಿ, 150 ಯೋಜಿತ ಸ್ಥಳಗಳಲ್ಲಿ ಸ್ಟೆಮ್ ಲ್ಯಾಬ್ಗಳನ್ನು ನಿರ್ಮಿಸುತ್ತದೆ. ಇವು, ಸೈಮ್ ವೃತ್ತಿಯ ಬಗ್ಗೆ ಆಸಕ್ತಿಯನ್ನು ಹುಟ್ಟು ಹಾಕಲು ಸಹಾಯ ಮಾಡುತ್ತವೆ ಎಂದರು.
ಬೋಯಿಂಗ್ ಸುಕನ್ಯಾ ಕಾರ್ಯಕ್ರಮದಡಿ ಪೈಲಟ್ ಆಗಲು ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತದೆ. ವಿಮಾನ ತರಬೇತಿ ಪಠ್ಯಕ್ರಮ, ಪ್ರಮಾಣೀಕರಣಗಳನ್ನು ಪಡೆಯುವುದು, ಸಿಮ್ಯುಲೇಟರ್ ತರಬೇತಿಗಳಿಗೆ ಧನಸಹಾಯ ಮತ್ತು ವೃತ್ತಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವಾಗಲು ಹೂಡಿಕೆಗಳನ್ನು ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (ಬಿಐಇಟಿಸಿ) ಕ್ಯಾಂಪಸ್ಗೆ 1,600 ಕೋಟಿ ರೂ.ಗಳನ್ನು ಹೂಡಲಾಗಿದೆ. 43 ಎಕರೆಯಲ್ಲಿ ನಿರ್ಮಿಸಲ್ಪಟ್ಟ ಈ ಕ್ಯಾಂಪಸ್ ಯುಎಸ್ ಹೊರಗೆ ಬೋಯಿಂಗ್ ಮಾಡಿರುವ ಅತಿದೊಡ್ಡ ಹೂಡಿಕೆಯಾಗಿದೆ. ಮತ್ತು ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳು ಮುಂದಿನ ಪೀಳಿಗೆಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಭಾರತದೊಂದಿಗೆ ಪಾಲುದಾರಿಕೆ ಹೊಂದಲು ಅಡಿಪಾಯವಾಗಲಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಏಶ್ಯದಲ್ಲಿ ಅತಿ ದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಯಿತು. ಈಗ ಜಗತ್ತಿನ ಅತಿ ಶ್ರೇಷ್ಠ ವೈಮಾನಿನ ತಂತ್ರಜ್ಞಾನ ಕರ್ನಾಟಕದಲ್ಲಿ ನೆಲೆಗೊಂಡಿದೆ. ಈ ಮೂಲಕ ಕರ್ನಾಟಕ ಅತಿ ದೊಡ್ಡ ವಿಮಾನಯಾನ ಹಬ್ ಆಗುವ ಸಾಧ್ಯತೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಎರಡನೇ ಅತಿ ದೊಡ್ಡ ಕ್ಯಾಂಪಸ್ನ್ನು ಸ್ಥಾಪಿಸಿದ್ದಕ್ಕಾಗಿ ಅವರು ಬೋಯಿಂಗ್ ಸಂಸ್ಥೆಗೆ ಕೃತಜ್ಞತೆ ಹೇಳಿದರು.
ಭಾರತ ಜಗತ್ತಿನಲ್ಲಿ 3ನೇ ದೊಡ್ಡ ದೇಶಿ ವೈಮಾನಿಕ ಮಾರುಕಟ್ಟೆ
ಭಾರತವು ಈಗ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ದೇಶೀಯ ವೈಮಾನಿಕ ಮಾರುಕಟ್ಟೆಯನ್ನು ಹೊಂದಿದೆ. ಕಳೆದ 10 ವರ್ಷಗಳಲ್ಲಿ ವಿಮಾನಯಾನ ವಲಯದಲ್ಲಿ ದೊಡ್ಡ ಬದಲಾವಣೆಯಾಗಿದೆ. ವಿಮಾನ ಯಾನದ ಸೌಲಭ್ಯದ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ಉಡಾನ್ ಯೋಜನೆ ಮತ್ತು ಅಗತ್ಯ ಮೂಲಸೌಕರ್ಯಗಳ ರಚನೆಯು ಈ ವಲಯಕ್ಕೆ ಬೃಹತ್ ಪ್ರೋತ್ಸಾಹ ನೀಡಿದೆ ಎಂದರು.
2014ರಲ್ಲಿ ದೇಶದಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಈಗ ಅವುಗಳ ಸಂಖ್ಯೆ 150ಕ್ಕೆ ಏರಿದ್ದು, ಕೇವಲ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸಿದ್ದಲ್ಲ. ಹಿಂದಿನ ವಿಮಾನ ನಿಲ್ದಾಣಗಳ ಸಾಮಥ್ರ್ಯವನ್ನೂ ಹೆಚ್ಚಿಸಲಾಗಿದೆ. ಇದರಿಂದ ಸರಕು ಸಾಗಾಟದಲ್ಲೂ ಹೆಚ್ಚಳವಾಗಿದೆ ಎಂದು ವಿವರಿಸಿದರು.
ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲು ದೊಡ್ಡ ಮಟ್ಟದಲ್ಲಿದೆ
ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಇದನ್ನು ಇನ್ನಷ್ಟು ಹೆಚ್ಚಿಸಲು ಬೋಯಿಂಗ್ ಸುಕನ್ಯಾ ಯೋಜನೆ ಜಾರಿಗೆ ತರಲಾಗಿದೆ. ದೇಶದ ಅಭಿವೃದ್ಧಿ ಮತ್ತು ಮುನ್ನಡೆಯಲ್ಲಿ ಈಗ ಮಹಿಳಾ ಪಾಲುದಾರಿಕೆ ಹೆಚ್ಚುತ್ತಿದೆ. ವಾಯುಯಾನ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ರಕ್ಷಣಾ ವಿಮಾನ, ನಾಗರಿಕ ವಿಮಾನಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ದೊಡ್ಡ ಪ್ರಮಾಣದಲ್ಲಿದೆ. ನಮ್ಮ ದೇಶದಲ್ಲಿ ಶೇಕಡಾ 15ರಷ್ಟು ಮಹಿಳಾ ಪೈಲಟ್ಗಳಿದ್ದಾರೆ. ಜಾಗತಿಕ ಪ್ರಮಾಣಕ್ಕಿಂತ ಇದು ಮೂರು ಪಟ್ಟು ಹೆಚ್ಚು ಎಂದು ಶ್ಲಾಘಿಸಿದರು.
ಕಳೆದ 9 ವರ್ಷಗಳಲ್ಲಿ ವಿಮಾನಯಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುವ ಮೂಲಕ ದೇಶಿಯ ವಿಮಾನಯಾನ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ತಿಳಿಸಿದರು.
ತಂತ್ರಜ್ಞಾನದ ವಲಯದಲ್ಲಿ ಕರ್ನಾಟಕದ ಮುಕುಟಕ್ಕೆ ಹೊಸದೊಂದು ಮಣಿ ಸೇರ್ಪಡೆಯಾದಂತಿದೆ: ಸಿಎಂ
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, ಬೋಯಿಂಗ್ ಸಂಸ್ಥೆಯ 43 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಿರುವ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರ ಹಾಗೂ ವಿಮಾನ ಯಾನ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ಬೋಯಿಂಗ್ ಸುಕನ್ಯಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ.
ಈ ಸಂಸ್ಥೆಯು, ತಂತ್ರಜ್ಞಾನದ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಮುಕುಟಕ್ಕೆ ಹೊಸದೊಂದು ಮಣಿ ಸೇರ್ಪಡೆಯಾದಂತಿದೆ. ಕರ್ನಾಟಕ ವಿಶ್ವದಲ್ಲಿಯೇ 4ನೇ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದೆ. ಭಾರತದ ನಾವಿನ್ಯತಾ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ ಹಾಗೂ ದೇಶದ ಒಟ್ಟಾರೆ ರಫ್ತಿನಲ್ಲಿಯೂ ಮುಂಚೂಣಿಯಲ್ಲಿದೆ ಎಂದರು.
ಫಾರ್ಚೂನ್ 500 ಕಂಪೆನಿಗಳಲ್ಲಿ 400 ಕ್ಕೂ ಹೆಚ್ಚು ಕಂಪೆನಿಗಳ ನೆಲೆಯಾಗಿರುವ ನಮ್ಮ ರಾಜ್ಯವು, ಸಂಶೋಧನೆ ಮತ್ತು ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿರುವುದಲ್ಲದೆ, ಸ್ಟಾರ್ಟಪ್ ರಾಜಧಾನಿ ಎಂಬ ಕೀರ್ತಿಗೂ ಭಾಜನವಾಗಿದೆ. ಪ್ರತಿಭಾನ್ವಿತ ಉದ್ಯೋಗಿಗಳು ಹಾಗೂ ಕೌಶಲಯುಕ್ತ ಮಾನವ ಸಂಪನ್ಮೂಲ ಹೇರಳವಾಗಿರುವ ಕರ್ನಾಟಕವು ಸಹಜವಾಗಿಯೇ ತಂತ್ರಜ್ಞಾನ ಹಾಗೂ ಜ್ಞಾನಾಧಾರಿತ ಉದ್ಯಮಗಳ ಮೊದಲ ಆಯ್ಕೆಯಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಕರ್ನಾಟಕವು ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಲು ನಮ್ಮ ಸರ್ಕಾರ ಹೊಂದಿರುವ ಬದ್ಧತೆಯನ್ನು ಪುನರುಚ್ಛರಿಸಬಯಸುತ್ತೇನೆ. ಈ ನಿಟ್ಟಿನಲ್ಲಿ ವಿವಿಧ ವಲಯಗಳಿಗೆ ನಿರ್ದಿಷ್ಟ ನೀತಿ ಹಾಗೂ ಕೈಗಾರಿಕಾ ಸ್ನೇಹಿ ನೀತಿಗಳನ್ನು ರಾಜ್ಯ ಸರ್ಕಾರವು ಜಾರಿಗೊಳಿಸಿದೆ ಎಂದು ತಿಳಿಸಿದರು.
ಬೋಯಿಂಗ್ ಇಂಡಿಯಾದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರದ ಆವರಣದ ಈ ಉದ್ಘಾಟನಾ ಸಮಾರಂಭವು ಜಾಗತಿಕ ಮಟ್ಟದಲ್ಲಿ ವಿಮಾನಯಾನ ವಲಯದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವ ಆಶಯಕ್ಕೆ ಪುಷ್ಟಿ ನೀಡುವಂತಿದೆ. ಬೋಯಿಂಗ್ ಸಂಸ್ಥೆಯು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಈ ಪ್ರದೇಶವನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತೋಷ ನೀಡಿದೆ. ಈ ಭಾಗವು ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲು ಮುನ್ನುಡಿ ಬರೆದಿದೆ ಎಂದರು.
ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ರಫ್ತಿನ ಶೇ. 65 ರಷ್ಟು ಪಾಲು ಹೊಂದಿದೆ
ಕರ್ನಾಟಕ ರಾಜ್ಯವು ದೇಶದ ಏರೋಸ್ಪೇಸ್ ವಲಯದಲ್ಲಿ ಪ್ರಾಬಲ್ಯವನ್ನು ಸಾಧಿಸಿದ್ದು, ಏರೋಸ್ಪೇಸ್ ಮತ್ತು ಡಿಫೆನ್ಸ್ ರಫ್ತಿನ ಶೇ. 65 ರಷ್ಟು ಪಾಲನ್ನು ಹೊಂದಿದೆ. ಬೋಯಿಂಗ್ನ ಈ ಹೊಸ ಉಪಕ್ರಮದಿಂದಾಗಿ ಸ್ಥಳೀಯ ಪ್ರತಿಭಾವಂತರಿಗೆ ಜಾಗತಿಕ ಮಟ್ಟದ ಯೋಜನೆಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ ದೊರೆಯಲಿದೆ. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಎಲ್ಲರಿಗೂ ತಂತ್ರಜ್ಞಾನದ ಲಾಭ ದೊರಕುವಂತಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಮಹಿಳೆಯರ ಅಭ್ಯುದಯ ಹಾಗೂ ಸಮಾಜಕ್ಕೆ ಅವರ ಅಮೂಲ್ಯ ಕೊಡುಗೆ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಬೆಂಬಲ ನೀಡುತ್ತಾ ಬಂದಿದೆ.
ಈ ಹಿನ್ನೆಲೆಯಲ್ಲಿ ಇಲ್ಲಿ ಬೋಯಿಂಗ್ ಸುಕನ್ಯಾ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು ಸಂತೋಷ ನೀಡಿದೆ. ಇದು ಕೇವಲ ಬೋಯಿಂಗ್ ಸಂಸ್ಥೇಗೆ ಮಾತ್ರವಲ್ಲ, ನಮ್ಮ ನಾಡಿಗೂ ಹೆಮ್ಮೆಯ ವಿಷಯವಾಗಿದೆ. ಕೊನೆಯಲ್ಲಿ ಮತ್ತೊಮ್ಮೆ ಬೋಯಿಂಗ್ ಸಂಸ್ಥೆಗೆ ಅಭಿನಂದನೆಗಳನ್ನು ತಿಳಿಸುತ್ತಾ, ನಿಮ್ಮ ಭವಿಷ್ಯದ ಯೋಜನೆಗಳಿಗೆ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲ ಸಹಕಾರ ನೀಡಲಿದೆ ಎಂದರು.
ಈ ಎಲ್ಲ ಉಪಕ್ರಮಗಳು ಬೋಯಿಂಗ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯಕ್ಕೆ ನಾವೀನ್ಯತೆ, ಅಭಿವೃದ್ಧಿ ಹಾಗೂ ಸಮೃದ್ಧಿಯ ಮೂಲಕ ಉಜ್ವಲ ಭವಿಷ್ಯ ರೂಪಿಸುವಂತಾಗಲಿ ಎಂದು ಹಾರೈಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮುಂತ್ರಿಗಳಾದ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಬೋಯಿಂಗ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೈಫನಿ ಪೆÇೀಪ್ ಮತ್ತು ಇತರ ಹಿರಿಯ ಬೋಯಿಂಗ್ ಅಧಿಕಾರಿಗಳು ಉಪಸ್ಥಿತರಿದ್ದರು