ದಾಸನಪುರ: ಕ್ರೀಡೆ ಯುವ ಜನಾಂಗದ ಬದುಕಿನ ಭಾಗವಾಗಬೇಕು. ಕ್ರೀಡೆ ಮನುಷ್ಯನಲ್ಲಿ ಮಹತ್ವದ ಪರಿವರ್ತನೆ ತರುತ್ತದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ದಾಸನಪುರದಲ್ಲಿಂದು ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿ “ಡಿಕೆ ಕಪ್ ಕ್ರಿಕೆಟ್ ಲೀಗ್ – 2024” ಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆ ಬದುಕಿನಲ್ಲಿ ಸೋಲು – ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವ ಶಕ್ತಿ ನೀಡುತ್ತದೆ. ಕ್ರೀಡೆಯಿಂದ ಮಾನಸಿಕವಾಗಿಯೂ ಮನುಷ್ಯ ಗಟ್ಟಿಯಾಗುತ್ತಾನೆ. ಹೆಚ್ಚಿನ ಪ್ರಮಾಣದಲ್ಲಿ ಕ್ರೀಡಾಪಟುಗಳು ಜೀವನದಲ್ಲಿಯೂ ಕ್ರೀಡಾ ಸ್ಪೂರ್ತಿಯಿಂದ ಬದುಕುತ್ತಾರೆ. ವಿಶ್ವಾಸದಿಂದ ಮುನ್ನಡೆಯುತ್ತಾರೆ ಎಂದರು.
ಕ್ರೀಡೆಯಿಂದ ಶೈಕ್ಷಣಿಕವಾಗಿಯೂ ಮುನ್ನಡೆ ಸಾಧಿಸಬಹುದು. ಶೈಕ್ಷಣಿಕ ಮತ್ತು ಪರೀಕ್ಷಾ ಒತ್ತಡದಿಂದ ಪಾರಾಗಲು ಕ್ರೀಡೆ ಅತ್ಯಂತ ಅಗತ್ಯವಾಗಿದೆ ಎಂದು ರಕ್ಷಾ ರಾಮಯ್ಯ ಹೇಳಿದರು.