ಬೆಂಗಳೂರು: ಶ್ರೀರಾಮ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಅನಧಿಕೃತ ಕಟೌಟ್ಗಳನ್ನು ಹಾಕಿದ್ದಲ್ಲದೆ ಕಾರ್ಯಕ್ರಮ ಮುಗಿದು 10 ದಿನಗಳಾದರೂ ಕಟೌಟ್ ತೆರವುಗೊಳಿಸದೆ ಈಗ ಮೂವರ ಪ್ರಾಣಕ್ಕೆ ಕುತ್ತು ತಂದಿರುವ ಸರ್ ಸಿವಿ ರಾಮನ್ ನಗರ ಶಾಸಕ ರಘು ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಆಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಎಚ್ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲಿ ಖಾಸಗಿ ಶಾಲೆಗೆ ಸೇರಿದ ಗೋಡೆಗೆ ಕಟ್ಟಲಾಗಿದ್ದ ಬೃಹತ್ ಕಟೌಟ್ ಬಿದ್ದು, ಮೂವರು ಪಾದಚಾರಿಗಳು ಗಂಭೀರ ಗಾಯಗೊಂಡಿರುವ ಘಟನೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಿದ ಪಕ್ಷದ ಬೆಂಗಳೂರು ಸಂಘಟನಾ ಕಾರ್ಯದರ್ಶಿ ಜಗದೀಶ್ ಬಾಬು ಅವರು, ಶಾಸಕ ರಘು ಹಾಗೂ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಅವಘಡ ಸಂಭವಿಸಿದೆ. ತಕ್ಷಣ ಬಿಬಿಎಂಪಿ ಕಮಿಷನರ್ ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಗದೀಶ್ ಬಾಬು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಗಂಭೀರ ಗಾಯಗೊಂಡಿರುವ ಪಾದಚಾರಿಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯ ಒದಗಿಸಬೇಕು ಹಾಗೂ ಪರಿಹಾರವನ್ನು ನೀಡಬೇಕು. ನಗರದಲ್ಲಿ ಅನಧಿಕೃತ, ಅವಧಿ ಮೀರಿದ ಕಟೌಟ್ಗಳು ತಾಂಡವವಾಡುತ್ತಿವೆ. ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಓಡಾಡುವಾಗ ಪ್ರಾಣ ಕೈಯಲ್ಲಿ ಹಿಡಿದುಕೊಂಡೇ ಓಡಾಡುವ ಪರಿಸ್ಥಿತಿ ಇದೆ. ರಸ್ತೆಯುದ್ದಕ್ಕೂ ಇಂತಹ ಕಟೌಟ್ಗಳು, ಜೋತುಬಿದ್ದ ತಂತಿಗಳು, ಗುಂಡಿಬಿದ್ದ ರಸ್ತೆಗಳೇ ತುಂಬಿವೆ. ಸುರಕ್ಷಿತ ಬೆಂಗಳೂರು ನಿರ್ಮಾಣ ಯಾವಾಗ ಆಗಲಿದೆ? ಎಂದು ಜಗದೀಶ್ ಬಾಬು ಬೇಸರದಿಂದ ಪ್ರಶ್ನಿಸಿದರು.
ಗಾಯಾಳು ಭೇಟಿ, ಶಾಸಕರ ವಿರುದ್ಧ ದೂರು
ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ರವರ ನೇತೃತ್ವದ ತಂಡ ನಿನ್ನೆ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ಹಾಕಿದ್ದ ಸರ್ ಸಿವಿ ರಾಮನ್ ನಗರ ಶಾಸಕ ರಘು ರವರ ಅನಧಿಕೃತವಾಗಿ ಅಳವಡಿಸಿದ್ದ ಕಟೌಟ್ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಸಂತ್ರಸ್ಥರನ್ನು ನಗರದ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ತೆರಳಿ ಭೇಟಿ ನೀಡಿದರು.ನಂತರ ನಗರದ ಜೀವನಭಿಮಾನಗರ್ ಠಾಣೆಗೆ ತೆರಳಿ ಶಾಸಕ ರಘು ವಿರುದ್ಧ ಪ್ರಕರಣವನ್ನು ದಾಖಲಿಸುವ ಕುರಿತು ದೂರನ್ನು ಸಲ್ಲಿಸಲಿದ್ದಾರೆ.