ನವದೆಹಲಿ:ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾರವರು ‘ನಾಳೆಯಾಚೆಗಿನ ಭದ್ರತೆ: ಭಾರತದ ಭದ್ರ ಭವಿಷ್ಯವನ್ನು ರೂಪಿಸುವುದು’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ‘ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ನಾಯಕತ್ವವು, 70 ವರ್ಷಗಳ ನ್ಯೂನತೆಗಳನ್ನು ನಿವಾರಿಸುವ ಕೆಲಸ ಮಾಡಿದೆ’ ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಶಾ ಅವರು ‘ಒಆರ್ಎಫ್ ವಿದೇಶಾಂಗ ನೀತಿ ಸಮೀಕ್ಷೆ’ಗೆ ಚಾಲನೆ ನೀಡಿದರು.
ಹಲವು ವರ್ಷಗಳಿಂದ ಸೌಲಭ್ಯಗಳಿಂದ ವಂಚಿತರಾಗಿದ್ದ ಲಕ್ಷಾಂತರ ಜನಸಾಮಾನ್ಯರು ಕಳೆದ 10 ವರ್ಷಗಳಲ್ಲಿ ಸ್ವಾತಂತ್ರ್ಯದ ನಿಜಾನುಭೂತಿಯನ್ನು ಪಡೆದಿರುವುದು ಮೋದಿಯವರ ದೂರದೃಷ್ಟಿ ಮತ್ತು ಅಮಿತ್ ಶಾ ಅವರ ‘ಅಂತ್ಯೋದಯ’ ರಾಜಕಾರಣದ ಫಲಿತಾಂಶವಾಗಿದೆ. ಇಂದು ಕೋಟ್ಯಂತರ ಬಡವರಿಗೆ ವಸತಿ, ಪ್ರತಿ ಮನೆಗೆ ವಿದ್ಯುತ್, ನಲ್ಲಿ ನೀರು, ಶೌಚಾಲಯ, ಉಚಿತ ಗ್ಯಾಸ್ ಸಂಪರ್ಕ ಹಾಗೂ ₹5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ನೀಡುವ ಕೆಲಸ ನಡೆಯುತ್ತಿದೆ.
ಸ್ವಾತಂತ್ರ್ಯಾನಂತರ ದಶಕಗಳ ಕಾಲ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣಗಳು ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದ್ದವು. ಪ್ರಸ್ತುತ ಕಾಲಘಟ್ಟದಲ್ಲಿ ಮೋದಿಯವರ ನಾಯಕತ್ವದಲ್ಲಿ ಮತ್ತು ಅಮಿತ್ ಶಾ ಅವರ ನುರಿತ ಮಾರ್ಗದರ್ಶನದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ತುಷ್ಟೀಕರಣದಂತಹ ಅನಿಷ್ಟಗಳನ್ನು ಬೇರು ಸಮೇತ ಕಿತ್ತು ಹಾಕಿರುವುದು ಮಾತ್ರವಲ್ಲದೆ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ 10 ವರ್ಷಗಳಲ್ಲಿ, ರಾಜಕೀಯದಲ್ಲಿ ಸ್ಥಿರತೆ ಮತ್ತು ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಸ್ಥಾಪಿಸಲಾಗಿದೆ. ಹೊಸ ಭಾರತವು ವಿಶ್ವಾದ್ಯಂತ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಮೂಲಕ ಹೊಸ ಗುರುತನ್ನು ಪಡೆಯುತ್ತಿದೆ.
ಸ್ವಾತಂತ್ರ್ಯದ ನಂತರ, ದೇಶವು ಆಂತರಿಕ ಭದ್ರತೆಯ ವಿಷಯಗಳಲ್ಲಿ ಭಯೋತ್ಪಾದನೆ ಮತ್ತು ಎಡಪಂಥೀಯ ಉಗ್ರವಾದದಿಂದ ವರ್ಷಗಟ್ಟಲೆ ಸಮಸ್ಯೆಗೆ ಒಳಗಾಗಿವೆ. ಸ್ಪಷ್ಟವಾಗಿ ಹೇಳಬೇಕೆಂದರೆ ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರವಾದದಿಂದ ಪ್ರಭಾವಿತವಾಗಿರುವ ಪ್ರದೇಶಗಳು ಮತ್ತು ಈಶಾನ್ಯದ ರಾಜ್ಯಗಳು ಈ ಸಮಸ್ಯೆಯಿಂದ ಬಳಲಿದವು. 2014ರ ನಂತರ, ಭಯೋತ್ಪಾದನೆಯೆಡೆಗೆ ಮೋದಿಯವರ ಶೂನ್ಯ ಸಹಿಷ್ಣುತೆಯ ನೀತಿ ಮತ್ತು ‘ಭಯೋತ್ಪಾದನೆಯನ್ನು ಮಾನವೀಯತೆಯ ದೊಡ್ಡ ಶತ್ರು’ ಎಂದು ಪರಿಗಣಿಸುವ ಶಾ ಅವರ ದೃಢ ನಿರ್ಧಾರಗಳಿಂದಾಗಿ, ಉಗ್ರವಾದದ ಮೂರು ಪ್ರಮುಖ ಹಾಟ್ಸ್ಪಾಟ್ಗಳಾದ- ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರವಾದದಿಂದ ಪೀಡಿತ ಪ್ರದೇಶಗಳು ಮತ್ತು ಈಶಾನ್ಯ ಪ್ರದೇಶಗಳು ಈಗ ಅಭಿವೃದ್ಧಿಯ ಹಾದಿಯಲ್ಲಿವೆ. ಈಶಾನ್ಯದ ಎಲ್ಲಾ ನಿರ್ಲಕ್ಷಿತ ರಾಜ್ಯಗಳಲ್ಲಿ ರೈಲು ಮತ್ತು ವಾಯು ಸಂಪರ್ಕದ ತ್ವರಿತ ಕೆಲಸ ನಡೆಯುತ್ತಿದೆ.
ಆಧುನಿಕ ರಾಜಕಾರಣದ ‘ಚಾಣಕ್ಯ’ ಎಂದೇ ಖ್ಯಾತರಾಗಿರುವ ಶಾ, ಗಡಿ ಭದ್ರತೆಯೇ ದೇಶದ ಭದ್ರತೆಯಾಗಿರುವುದರಿಂದ, ದೇಶದ ಗಡಿಗಳು ಸುರಕ್ಷಿತವಾಗಿರದಿದ್ದರೆ ದೇಶ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ನಂಬುತ್ತಾರೆ. ಬಡತನ ನಿರ್ಮೂಲನೆಯಿಂದ ಹಿಡಿದು ಆರೋಗ್ಯ, ಬಾಹ್ಯಾಕಾಶ, ಹೂಡಿಕೆ ಮತ್ತು ಆಂತರಿಕ ಮತ್ತು ಬಾಹ್ಯ ಭದ್ರತೆಯವರೆಗಿನ ಮೋದಿಯವರ ದೂರದೃಷ್ಟಿ ಮತ್ತು ಶಾ ಅವರ ನೀತಿಗಳಿಂದಾಗಿ ಭಾರತವು ಮೊದಲಿಗಿಂತ ಈಗ ಪ್ರತಿ ಕ್ಷೇತ್ರದಲ್ಲೂ ಅತ್ಯಂತ ಬಲಿಷ್ಠವಾಗಿದೆ.
ಭಾರತದ ರಾಜಕೀಯಕ್ಕೆ ಹೊಸ ಗುರುತನ್ನು ನೀಡುತ್ತಿರುವ ಜನಪ್ರಿಯ ನಾಯಕ ಶಾ, ಮೋದಿಯವರ ಮುಂಬರುವ ಮೂರನೇ ಅವಧಿಯಲ್ಲಿ, ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯ ಗುರಿಯನ್ನು ಸಾಧಿಸಲಿದೆ ಎಂದರು. ಕಳೆದ 10 ವರ್ಷಗಳಲ್ಲಿ, ಭಾರತವು ವಿಶ್ವದ 11 ನೇ ಅತಿದೊಡ್ಡ ಆರ್ಥಿಕತೆಯಿಂದ, 5 ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಅಭೂತಪೂರ್ವ ಯಶಸ್ಸನ್ನು ಇಡೀ ಜಗತ್ತು ನೋಡಿದೆ. ಕಳೆದ 10 ವರ್ಷಗಳ ಸಾಧನೆಗಳ ಆಧಾರದಲ್ಲಿ ದೇಶದ ಜನತೆ 2024ರಲ್ಲಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡುತ್ತಾರೆ ಎಂದು ಹೇಳುವುದರದಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ.