ಹಾಸನ : ಶಶಿಚಂದ್ರಿಕಾರವರ “ರಸೋ ವೈ ಸಃ” ಒಂದು ಲೇಖನ, ಪದ್ಯ, ಕಥೆ, ನಾಟಕಗಳನ್ನೊಳಗೊಂಡ ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್ ಭಾಷೆಯನ್ನೊಳಗೊಂಡ ಕನ್ನಡ ಸಾಹಿತ್ಯದ ವೈವಿದ್ಯಮಯ ಸತ್ವಯುತ ಸಾಹಿತ್ಯ ಕೃತಿಯಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಹಾಸನ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಗೀತ ವಿದ್ವಾನ್ ಬಿ.ಎನ್.ಎಸ್.ಮುರುಳಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ 3೦ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ವಿದುಷಿ ಶಶಿಚಂದ್ರಿಕಾರವರ ದ್ವಿತೀಯ ಕೃತಿ “ರಸೋ ವೈ ಸಃ” ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ ಶಶಿಚಂದ್ರಿಕಾರವರು ನಮ್ಮ ನಡುವಿನ ಸಾಹಿತ್ಯ, ಸಂಗೀತ ಎರಡೂ ಮೇಳೈಸಿದ ಅಂತರ್ಮುಖಿ ಪ್ರತಿಭೆ. ಸದರಿ ಕೃತಿಯು ಸಪ್ತಸ್ವರ ಕಲಾ ಕೇಂದ್ರ ನಡೆದು ಬಂದ ಇಪ್ಪತ್ತೈದು ವರ್ಷಗಳ ಸುವರ್ಣ ಹೆಜ್ಜೆಗಳ ಜೊತೆಜೊತೆಗೆ ಇವರ ಬಹುಭಾಷಾ ಪಾಂಡಿತ್ಯ, ಸಂಗೀತ ಸಾಧನೆ, ದೇಶಪ್ರೇಮ, ಸಾಹಿತ್ಯ ಉತ್ಕಟತೆ, ಸುಖೀ ಸಮಾಜದ ಕನಸು ಇವರ ಕೃತಿಯುದ್ದಕ್ಕೂ ಓದುಗನೆದರು ಮುಖಾಮುಖಿಯಾಗುತ್ತದೆ. ಶಶಿ ಚಂದ್ರಿಕಾರವರ ಕವಿತೆಗಳು ದಾಸರ ಪದಗಳನ್ನು, ಸಂತರ ಪದಗಳನ್ನು ನೆನಪಿಸುತ್ತವೆ. ಗದ್ಯದ ಸದೃಢತೆ, ಕಾವ್ಯದ ಗಟ್ಟಿತನ, ಪದ ಜಿಪುಣತನಗಳು ಕವಯಿತ್ರಿಗೆ ಸಿದ್ಧಿಸಿವೆ. ಬಹುಶಃ ಹಾಸನ ಜಿಲ್ಲೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಸಂದಿದ ವಿಶಿಷ್ಟ ಮೌಲ್ಯಯುತ ಕೃತಿಗಳಲ್ಲಿ ಇದೂಸಹ ಒಂದಾಗಿದೆ ಎಂದರು.
ಹಾಸನ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷೆ ಕೆ.ಸಿ.ಗೀತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತ ಆರಾಧಕಿಯಾದ ನನಗೆ ಶಶಿಚಂದ್ರಿಕಾರವರ “ರಸೋ ವೈ ಸಃ” ಕೃತಿ ಅತ್ಯಾನಂದ ನೀಡಿದೆ. ಸಂಪೂರ್ಣ ವರ್ಣಮಯವಾದ ಈ ಕೃತಿಯು ಕೈಸೇರುತ್ತಲೇ ಓದುಗನ ಮನವನ್ನು ಮುದಗೊಳಿಸುತ್ತದೆ. ಇಲ್ಲಿನ ರಚನೆಗಳು ಸಾಮಾನ್ಯರಿಗೆ ಅರ್ಥವಾಗುವುದು ಕಷ್ಠ. ಇವರ ಭಾಷಾ ಪ್ರೌಢಿಮೆ ಇಲ್ಲಿ ಎದ್ದು ಕಾಣುತ್ತದೆ. ನಾನು ಓದಿದ ಶ್ರೇಷ್ಠ ಕೃತಿಗಳಲ್ಲಿ ಇದೂ ಒಂದು ಎಂದರು.
ಹಿರಿಯ ಸಂಸ್ಕೃತ ವಿದ್ವಾಂಸರಾದ ಪಿ.ವಿ.ಪರಮೇಶ್ವರ ಭಟ್ರವರು ಕೃತಿ ಕುರಿತು ಮಾತನಾಡಿ, ಶಶಿಚಂದ್ರಿಕಾರವರ “ರಸೋ ವೈ ಸಃ” ಒಂದು ವಿದ್ವತ್ಪೂರ್ಣ ಕೃತಿಯಾಗಿದೆ. ಬಹುಭಾಷಿತ, ಬಹುಪ್ರಕಾರದ ಸಮ್ಮಿಳಿತದ ಕೃತಿ. ಇದರಲ್ಲಿನ ರಚನೆಗಳು ಕೇವಲ ಹಾಡುಗಳಲ್ಲ. ಸಾಮಾಜಿಕ ವ್ಯವಸ್ಥೆಯ ದರ್ಪಣಗಳಾಗಿವೆ. ಮಾನವೀಯ ಬದುಕಿಗೆ ಬೇಕಾಗಿರುವ ಮೌಲ್ಯಗಳಾಗಿವೆ ಎಂದರು.
ಹಿರಿಯ ಸಾಹಿತಿ ಚಂದ್ರಕಾಂತ ಪಡೆಸೂರ ಅವರಿ ಕೃತಿ ಕುರಿತು ಮಾತನಾಡಿ, ಕ್ಷುಲ್ಲಕ ಆಸಕ್ತಿಗಳಿಗೆ ಅಕಲ್ಪನೀಯ ಮಾನವ ಸಾಮಾರ್ಥ್ಯ ಪೋಲಾಗುತ್ತಿರುವ ಬಗ್ಗೆ ಕವಯಿತ್ರಿ ಶಶಿಚಂದ್ರಿಕಾರವರ ಆತಂಕ “ರಸೋ ವೈ ಸಃ” ಕೃತಿಯಲ್ಲಿ ಪಲ್ಲವಿಸಿದೆ. ಯಾಗ, ಯೋಗ, ಭೋಗ, ತ್ಯಾಗದ ದಟ್ಟವಾದ ಛಾಯೆ ಇಲ್ಲಿ ಓದುಗನನ್ನು ಸುತ್ತುವರಿಯುತ್ತದೆ. ರಾಜಾಶ್ರಯದ ಕಾಲದ ಕವಿಗಳ ಬದುಕು, ಜನಾಶ್ರಯದ ಕವಿಗಳ ಬದುಕು, ನಿತ್ಯ ನಿರಂತರವಾಗಿ ಕಾಡುವ ಪ್ರತಿಭಾ ಮತ್ಸರಗಳ ಬಗ್ಗೆ ಕವಯಿತ್ರಿ ನೇರ ಹಾಗೂ ನಿಷ್ಠುರವಾಗಿ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಜೀವಭಾವದಲ್ಲಿರುವ ತಪಸ್ವಿಗೆ ಲೋಕಜೀವನದ ಅಗ್ನಿ ಪರೀಕ್ಷೆಯೂ ಏನೂ ಮಾಡಲಾರದು ಎಂಬುದನ್ನು ಮನೋಜ್ಞವಾಗಿ ತಿಳಿಸಿದ್ದಾರೆ ಎಂದರು.
ಕವಯಿತ್ರಿ ರೇಖಾಪ್ರಕಾಶ್ ಕೃತಿ ಬಗ್ಗೆ ಮಾತನಾಡಿ, ಬೆಳೆಯುವ ಸಸಿಗೆ, ನೀರು, ಗೊಬ್ಬರ, ರಕ್ಷಣೆ ಕೊಟ್ಟರೆ ಆ ಸಸಿ ಸಮೃದ್ಧಿಯಾಗಿ ಬೆಳೆಯುತ್ತದೆ, ಹಾಗೆಯೇ ಬೆಳೆಯುವ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕೊಟ್ಟರೆ ಆ ಮಗು ಒಳ್ಳೆಯ ಸತ್ಪ್ರಜೆ ಯಾಗಿ ಬೆಳೆಯುತ್ತದೆ, ಉತ್ತಮ ಹವ್ಯಾಸಗಳನ್ನು ಮಕ್ಕಳಿಗೆ ರೂಢಿಸಿಕೊಳ್ಳಲು ನೆರವಾಗಬೇಕು, ಉತ್ತಮ ಹವ್ಯಾಸಗಳೆಂದರೆ, ಒಳ್ಳೆಯ ಪುಸ್ತಕ ಓದುವುದು, ಬರೆಯುವ ಹವ್ಯಾಸ, ಹಾಗೂ ಸಂಗೀತ ಕಲಿಕೆ ಇತ್ಯಾದಿ ಇತ್ಯಾದಿ, ಸಂಗೀತ ಎಂಬುದು ಎಂತ ಅರಸಿಕನನ್ನು ರಸಿಕನನ್ನಗಿಸುತ್ತೆ, ಶಶಿ ಚಂದ್ರಿಕ ಮೇಡಂ ರವರ ಪುಸ್ತಕದಲ್ಲಿ ಸಂಗೀತದ ರಸಧಾರೆಯೇ ಹರಿದಿದೆ ಎಂದರು.
ಕವಿ ಧರ್ಮ ಕೆರಲೂರು ಮಾತನಾಡಿ, ಕವಯತ್ರಿ ಮತ್ತು ಸಂಗೀತ ವಿದೂಷಕಿಯಾದ ಶಶಿಚಂದ್ರಿಕಾ ರವರ ಕೃತಿ ‘ರಸೋ ವೈ ಸಃ’ ಸಂಸ್ಕೃತ, ಹಿಂದಿ,ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಸಮೃದ್ಧ ಬಳಕೆ ಮತ್ತು ಸಾರಾಮೃತ ಉಣಬಡಿಸುವ ಉತ್ಕೃಷ್ಟ ಕವಿತೆ, ಕಿರುನಾಟಕಗಳ ಒಳಗೊಂಡಿರುವ ಪ್ರಬುದ್ಧ ಗ್ರಂಥವಾಗಿದೆ. ಓದುಗನಿಗೆ ದೇಶಭಕ್ತಿ ಮೊದಲುಗೊಂಡು ಸಂಗೀತ, ಆಧ್ಯಾತ್ಮ, ಇತಿಹಾಸ, ಸಂಸ್ಕೃತಿಗಳಲ್ಲಿ ನಲಿದಾಡಿಸಿ ನಂತರ ಅನಂತತೆಯ ಕಡೆಗೆ…ನಂತರ ಇನ್ನೂ ಮುಂದೆ ಸಾಗಿ ಪರಮಾತ್ಮನಲ್ಲಿ ತಲ್ಲೀನತೆ ಮತ್ತು ಅಂತರ್ಗತವಾಗಿಸುವಿಕೆಗೆ ನಮ್ಮನ್ನು ಕೊಂಡೊಯ್ಯುತ್ತದೆ. ಇಂತಹ ಪುಸ್ತಕಗಳ ಓದುವಿಕೆ ಸಂಸ್ಕಾರವನ್ನು ಮತ್ತಷ್ಟು ಒಳಪುಮಾಡುತ್ತದೆ ಎಂದರು.
ಕವಯಿತ್ರಿ ಗಿರಿಜಾ ನಿರ್ವಾಣಿ ಮಾತನಾಡಿ, ವಿದುಷಿ ಶಶಿ ಚಂದ್ರಿಕಾ ರವರ “ರಸೋ ವೈ ಸ: ” ಕೃತಿಯಲ್ಲಿ ಸಂಗೀತದ ಕಲೆ ನಡೆದು ಬಂದ ಹಾದಿಯನ್ನು ವರ್ಣಿಸಲಾಗಿದೆ, ವಾದ್ಯಗಳಿಂದಲೂ ಸಹ ಸಂಗೀತವನ್ನು ಆಲಿಸಬಹುದು. ಕೊಳಲನಾದಕೆ ತುರುಗಳು ಬಂದು ಗಾನವನ್ನು ಆಲಿಸುವುದು, ಮೃಗ ಖಗ ಸಸ್ಯಗಳೆಲ್ಲ ತಲೆದೂಗುವುದು… ವಿದ್ಯಾರಣ್ಯ ಸ್ವಾಮಿಗಳು “ಸಂಗೀತ ಸಮಯ ಸಾರ “ಎಂಬ ಹೆಸರನ್ನು ಪಡೆದವರು . ವಚನ ಸಾಹಿತ್ಯಕ್ಕೆ ಬಂದಾಗ ಹಲವು ವಚನ ಸಾಹಿತ್ಯ ಕಾರರು ಸಂಗೀತಕ್ಕೆ ತಮ್ಮ ಅಪಾರ ಕೊಡಗೆಗಳನ್ನು ನೀಡಿದ್ದಾರೆ. ಕವಿ ಶ್ರೇಷ್ಠನಾದ ಕಾಳಿದಾಸ ಕವಿಯು ಸಹ ತಮ್ಮ ಕಾವ್ಯಗಳಲ್ಲಿ ಸಂಗೀತಕ್ಕೆ ಪ್ರಾಧ್ಯಾನತೆಯನ್ನು ನೀಡಿದ್ದಾರೆ ಎಂದರು.
ಕವಿ ವಿನಯಚಂದ್ರ ಅವರು ಕೃತಿ ಕುರಿತು ಮಾತನಾಡಿ, ವಿದುಷಿ ಶಶಿಚಂದ್ರಿಕಾ ಅವರ ಕೃತಿ ರಸೋ ವೈ ಸಃ ಬಹಳ ಅಪರೂಪದ ಕೃತಿಯಾಗಿದೆ. ಇದರಲ್ಲಿ ಸಾಹಿತ್ಯ ಸಂಗೀತ ಅಧ್ಯಾತ್ಮ ಮೂರೂ ಸಹ ಮೇಳೈಸಿವೆ. ಕಾವ್ಯ, ಲೇಖನ, ನೃತ್ಯ ರೂಪಕದಂತಹ ಸಾಹಿತ್ಯದ ನಾಲ್ಕೈದು ಪ್ರಕಾರಗಳು ಇಲ್ಲಿ ಒಟ್ಟಾಗಿ ಸೇರಿದ್ದರೂ ಸಹ ಇವೆಲ್ಲವುಗಳ ಅಂತಃಸ್ಥಾಯಿಯಾಗಿ ಇಲ್ಲಿ ಸಂಗೀತವಿದೆ. ಅತಿಯಾದ ಸ್ವಕೇಂದ್ರಿತ ಚಿಂತನೆಗಳನ್ನು ತ್ಯಜಿಸಬೇಕು, ಮಾನಾಪಮಾನಗಳನ್ನು ಭಗವಂತನಿಗೆ ಅರ್ಪಣೆ ಮಾಡಿ ಮುನ್ನಡೆಯಬೇಕು ಎನ್ನುವಂತಹ ಅನೇಕ ಮಾತುಗಳಲ್ಲಿ ಮನೋವೈಜ್ಞಾನಿಕ ಮತ್ತು ಅಧ್ಯಾತ್ಮ ಒಟ್ಟೊಟ್ಟಾಗಿ ಸಾಗಿಬರುವುದನ್ನು ಗಮನಿಸಬಹುದು. ಸಾಹಿತ್ಯ ಮತ್ತು ಸಂಗೀತ ಎರಡರಲ್ಲೂ ಶಶಿಚಂದ್ರಿಕಾರವರು ಪರಿಣತಿಯನ್ನು ಸಾಧಿಸಿರುವುದರಿಂದ ನಾಡಿನ ಖ್ಯಾತ ವಾಗ್ಗೇಯಕಾರರ ಹಾದಿಯಲ್ಲಿ ಮುನ್ನಡೆದು ಶಾಸ್ತ್ರೀಯ ಸಂಗೀತಕ್ಕೆ ಬೇಕಾದ ಸಾಹಿತ್ಯ ರಚನೆಯನ್ನು ಮಾಡುವುದರ ಮೂಲಕ ಖ್ಯಾತಿಯನ್ನು ಗಳಿಸಲಿ ಎಂದರು.
ಗಾಯನ
ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಬಿ.ಎನ್.ಎಸ್.ಮುರುಳಿಯವರ ಸಪ್ತಸ್ವರ ಕಲಾಕೇಂದ್ರದ ವಿದ್ಯಾರ್ಥಿಗಳಾದ ಸುಕನ್ಯಾ, ಯಶಸ್ವಿನಿ, ರಿಧಿ ಶರ್ಮಾ, ವಿಸ್ಮಯ ಎಸ್.ಎಲ್, ಎನ್.ದಾಕ್ಷಾಯಣಿ, ದೀಕ್ಷಿತ ಜಿ.ಎಚ್, ದಿವ್ಯಶ್ರೀ ಎಸ್, ಸುರಭಿ ಎಸ್.ರವರುಗಳು ವಿದುಷಿ ಶಶಿಚಂದ್ರಿಕಾರವರ ರಚನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಗೌರವ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಜಯದೇವಪ್ಪ, ಬಿ.ಎನ್.ಎಸ್.ಮುರುಳಿ, ವಾಸು ಸಮುದ್ರವಳ್ಳಿ, ಗಿರೀಶ್ ಬಾಬು ಹೊಸಮನೆ, ಪ್ರಕಾಶ್, ಮಂಜುನಾಥ್, ಬಿ.ಎನ್.ಎಸ್.ಮುರುಳಿ, ಪಂಕಜ, ಕು.ವಿಮರ್ಶಾ ಚಂದ್ರ, ಎ.ಆರ್.ಪ್ರೇಮಲತಾ, ಶ್ರೀರಾಜೇಂದ್ರ, ಮಾಲಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕವಿಗೋಷ್ಠಿ
ನಂತರ ನಡೆದ ಕವಿಗೋಷ್ಠಿಯಲ್ಲಿ ಚಂದ್ರಕಾಂತ ಪಡೆಸೂರ, ಶಶಿಚಂದ್ರಿಕಾ, ನೀಲಾವತಿ ಸಿ.ಎನ್, ಸರೋಜ ಟಿ.ಎಂ, ಎಚ್.ಬಿ.ಚೂಡಾಮಣಿ, ಡಾ.ಎಂ.ಮಂಜುನಾಥ್, ಭಾರತಿ ಎಚ್.ಎನ್, ಕುಮಾರ್ ಹೊನ್ನೇನಹಳ್ಳಿ, ವಿನಯಚಂದ್ರ, ಧರ್ಮ ಕೆರಲೂರು, ರೇಖಾ ಪ್ರಕಾಶ್, ಗಿರಿಜಾ ನಿರ್ವಾಣಿ, ಕೆ.ಸಿ.ಗೀತಾ ಸೇರಿದಂತೆ ಹಲವರು ಕಾವ್ಯ ವಾಚನ ಮಾಡಿದರು.