ಬೆಂಗಳೂರು: ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಪುನಶ್ಚೇತನಕ್ಕೆ ಅತ್ಯಗತ್ಯವಾಗಿರುವ ನೀಲಗಿರಿ ಬೆಳೆಯ ಮೇಲೆ ಹೇರಿರುವ ನಿಷೇಧವನ್ನು ರದ್ದು ಮಾಡಬೇಕೋ ಅಥವಾ ಇದಕ್ಕೆ ಬೇರೆ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕೋ ಎನ್ನುವ ಕುರಿತು ತೀರ್ಮಾನಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಎಂಪಿಎಂ ಪುನಶ್ಚೇತನ ಕುರಿತು ವಿಧಾನಸೌಧದಲ್ಲಿ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಭದ್ರಾವತಿ ಶಾಸಕ ಸಂಗಮೇಶ್ ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಜಿಲ್ಲಾಧಿಕಾರಿ ವರ್ಚುಯಲ್ ಆಗಿ ಭಾಗವಹಿಸಿದ್ದರು.
ಅರಣ್ಯ ಇಲಾಖೆ ವತಿಯಿಂದ ನಾಳೆಯೇ ತಜ್ಞರ ಸಮಿತಿ ರಚಿಸಲಾಗುವುದು. ಒಂದು ತಿಂಗಳಲ್ಲಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಸಭೆಗೆ ತಿಳಿಸಿದರು.
ಭದ್ರಾವತಿ ಕಾಗದ ಕಾರ್ಖಾನೆಗೆ 20,005 ಹೆಕ್ಟೇರ್ ಅರಣ್ಯ ಭೂಮಿಯನ್ನು ನೀಲಗಿರಿ ಬೆಳೆಯಲು 2020ರಲ್ಲಿ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಅರಣ್ಯ ಭೂಮಿಯನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ನೀಡುವಂತಿಲ್ಲ. ಇನ್ನೊಂದೆಡೆ, ಕಚ್ಚಾ ಸಾಮಗ್ರಿ ಸಿಗದೆ ಕಾರ್ಖಾನೆ ನಡೆಯದು. ಈ ಸಂದಿಗ್ಧವನ್ನು ಈಗ ಬಗೆಹರಿಸಬೇಕಾಗಿದೆ. ಹೀಗಾಗಿ ಸಮಿತಿ ರಚಿಸುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಸಚಿವರು ಬಂದರು.
ಎಂಪಿಎಂ ಕಾರ್ಯಾಚರಣೆಗೆ ಪ್ರತಿ ವರ್ಷ 10 ಲಕ್ಷ ಟನ್ ಕಚ್ಚಾ ಸಾಮಗ್ರಿ ಬೇಕು. ಸದ್ಯಕ್ಕೆ ಕಾರ್ಖಾನೆಗೆ ಕೊಟ್ಟಿರುವ ಭೂಮಿಯಿಂದ ಕೇವಲ 2 ಲಕ್ಷ ಟನ್ ಮಾತ್ರ ಸಿಗುತ್ತದೆ. ರಾಜ್ಯದಲ್ಲಿ ನೀಲಗಿರಿ ಬೆಳೆಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಕಾರ್ಖಾನೆಯ ಪುನಶ್ಚೇತನಕ್ಕೆ ಹೊಸ ದಾರಿ ಕಂಡುಕೊಳ್ಳಬೇಕಾಗಿದೆ ಎಂದು ಅವರು ವಿವರಿಸಿದರು.
ನೀಲಗಿರಿ ಬೆಳೆಯಲು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅವಕಾಶ ಕೊಡಬೇಕೇ, ಬೇಡವೇ ಎನ್ನುವ ಸಾಧ್ಯತೆಯ ಬಗ್ಗೆ ಚಿಂತಿಸಲಾಗುತ್ತಿದೆ. ಈ ಬಗ್ಗೆ ಉನ್ನತ ಸಮಿತಿ ತೀರ್ಮಾನಿಸಲಿದೆ ಎಂದು ಸಚಿವರು ಹೇಳಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ದೀಕ್ಷಿತ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.