ಬೆಂಗಳೂರು: ರಾಜ್ಯ ಸರಕಾರವು ವಾಹನ ಮತ್ತು ವಾಹನ ಬಿಡಿಭಾಗಗಳ ತಯಾರಿಕೆ, ಎಂಜಿನಿಯರಿಂಗ್ ಮತ್ತು ಮಶೀನ್ ಟೂಲ್ಸ್, ರಾಸಾಯನಿಕಗಳು, ನಾವೀನ್ಯತೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ವಲಯಗಳಲ್ಲಿ ಜಪಾನ್ ಜತೆ ಬಾಂಧವ್ಯ ಬಲವರ್ಧನೆಗೆ ಆಸಕ್ತಿ ಹೊಂದಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಜಪಾನಿನ ದೊರೆ ನರುಹಿಟೋ ಅವರ ಜನ್ಮದಿನದ ನಿಮಿತ್ತ ಇಲ್ಲಿನ ಜಪಾನ್ ದೂತಾವಾಸ ಶುಕ್ರವಾರ ಏರ್ಪಡಿಸಿದ್ದ ‘ಜಪಾನ್ ರಾಷ್ಟ್ರೀಯ ದಿವಸ’ದಲ್ಲಿ ಅವರು ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ಜಪಾನಿನ 525 ಕಂಪನಿಗಳಿದ್ದು, 70 ಕಂಪನಿಗಳು ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿವೆ. ಇಲ್ಲಿ ಟೊಯೋಟಾ, ಹಿಟಾಚಿ, ಮಕಿಟಾ, ಮಕಿನೊ, ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್, ಹೋಂಡಾ ಮುಂತಾದ ದೈತ್ಯ ಜಪಾನೀ ಕಂಪನಿಗಳಿವೆ ಎಂದು ಅವರು ನುಡಿದರು.
ಇದಲ್ಲದೆ ತುಮಕೂರಿನಲ್ಲಿ ಜಪಾನ್ ಕೈಗಾರಿಕಾ ಟೌನ್ಶಿಪ್ ಇದೆ. ಜತೆಗೆ ಜಪಾನ್-ಭಾರತ ಸ್ಟಾರ್ಟಪ್ ಹಬ್ ತರಹದ ಆನ್ಲೈನ್ ಉಪಕ್ರಮವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಪಾನ್ ಕಾನ್ಸುಲ್ ಜನರಲ್ ನಕಾನೆ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮುಂತಾದವರು ಉಪಸ್ಥಿತರಿದ್ದರು.