ಬೆಂಗಳೂರು:ಆರೋಗ್ಯವೇ ಭಾಗ್ಯ, ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು, ಪೋಲಿಯೊ ಒಂದು ಭಯಾನಕ ರೋಗ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟುಮಾಡುತ್ತದೆ. ಈ ರೋಗ 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಭಾರತದಲ್ಲಿ 2011 ರಿಂದ ಯಾವುದೇ ಪೋಲಿಯೊ ಪ್ರಕರಣಗಳು ವರದಿಯಾಗಿರುವುದಿಲ್ಲ. ಭಾರತ ದೇಶವು ಪೋಲಿಯೊ ಮುಕ್ತ ರಾಷ್ಟ್ರ ಎಂದು 2014 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಆದರೂ ಕೂಡ ಪಕ್ಕದ ನೆರೆಯ ದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳಲ್ಲಿ 2024 ರಲ್ಲಿ 12 ಪ್ರಕರಣಗಳು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪಾಲಿಕೆಯ ಆರೋಗ್ಯ ಇಲಾಖೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ಗುಣಾತ್ಮಕವಾಗಿ ನಡೆಸಲು ದಿನಾಂಕ: 03-03-2024 ರಿಂದ 06-03-2024 ರವರೆಗೆ ಹಮ್ಮಿಕೊಳ್ಳಲಾಗಿದೆ.
ಪಾಲಿಕೆಯ ಆರೋಗ್ಯ ಇಲಾಖೆಯು ರಾಷ್ಟ್ರೀಯ ಪಲ್ಸ್ ಪೋಲಿಯೊ-2024 ಕಾರ್ಯಕ್ರಮವನ್ನು ನಡೆಸಲು ಸಿದ್ಧತೆಯನ್ನು ಮಾಡಿಕೊಂಡಿದ್ದು, ಸಾರ್ವಜನಿಕ ಆರೋಗ್ಯ ವಿಭಾಗದ ಅಡಿಯಲ್ಲಿ ಬರುವ 145 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 228 ನಮ್ಮ ಕ್ಲಿನಿಕ್ಗಳಲ್ಲಿ, ಔಷಧಾಲಯಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳಲ್ಲಿ ಹಾಗೂ ಸ್ಥಿರ ಮತ್ತು ಸಂಚಾರಿ ತಂಡಗಳನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಮಾಲ್ಗಳು, ಖಾಸಗಿ ನರ್ಸಿಂಗ್ ಹೋಮ್ ಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾನವನಗಳು, ಮೆಟ್ರೋ ನಿಲ್ದಾಣ ಇನ್ನು ಮುಂತಾದ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.
ರಾಷ್ಟ್ರೀಯ ಪಲ್ಸ್ ಪೋಲಿಯೊ-2024 ರ ಕಾರ್ಯಕ್ರಮವನ್ನು ಈ ಕೆಳಕಂಡ ಕ್ರಿಯಾ ಯೋಜನೆಯಂತೆ ರೂಪಿಸಲಾಗಿದೆ.
* 0-5 ವರ್ಷದ ಮಕ್ಕಳ ಸಂಖ್ಯೆ : 11,12,998
* ಬೂತ್ಗಳ ಸಂಖ್ಯೆ: 3403
* ಸ್ಥಿರ ತಂಡಗಳು: 545
* ಸಂಚಾರಿ ತಂಡಗಳು: 380
* ಒಟ್ಟು ಲಸಿಕಾ ಕಾರ್ಯಕರ್ತರು: 15,354
* ಒಟ್ಟು ಮೇಲ್ವಿಚಾರಕರು: 758
ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪಾಲಿಕೆಯು ದೂರದರ್ಶನ, ರೇಡಿಯೊ ಮತ್ತು ಪತ್ರಿಕೆಗಳಲ್ಲಿ, ಬಿತ್ತಿಪತ್ರಗಳು, ಧ್ವನಿವರ್ಧಕದ ಮೂಲಕ ಪ್ರಚಾರ, ಮನೆ ಮನೆಗೆ ಭೇಟಿ, ಪ್ರಚಾರ ವ್ಯವಸ್ಥೆಯನ್ನು ಮಾಡಲಾಗಿದೆ.
ಸಾರ್ವಜನಿಕರು ಈ ಹಿಂದೆ ಎಷ್ಟೇ ಬಾರಿ ಸಹ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿದ್ದರೂ ಕೂಡ ದಿನಾಂಕ: 03-03-2024 ರಂದು 5 ವರ್ಷದೊಳಗಿನ ಮಕ್ಕಳನ್ನು ಬೂತ್ಗೆ ಕರೆತಂದು ಎರಡು ಹನಿ ಪೋಲಿಯೊ ಹಾಕಿಸಿ ಪೋಲಿಯೊ ಮುಕ್ತ ವಿಶ್ವವನ್ನಾಗಿ ಮಾಡೋಣ ಎಂದು ಪಾಲಿಕೆಯ ಆರೋಗ್ಯ ವಿಭಾಗದಿಂದ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.