ಬೆಂಗಳೂರು: ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹನ್ನೊಂದು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತ ಬಂದಿದೆ ಕರ್ನಾಟಕದಾದ್ಯಂತ ಮಹಿಳಾ ಚಳವಳಿ-ಸಾಹಿತ್ಯ-ಶಿಕ್ಷಣ ಕ್ಷೇತ್ರದ ಪರಿಣಿತರು-ರಂಗಭೂಮಿ-ಜನಪದ ಹೋರಾಟಗಳಲ್ಲಿ ಸಕ್ರಿಯವಾಗಿರುವ ಆನೇಕ ವ್ಯಕ್ತಿ- ಸಂಘಟನೆಗಳು ಈ ಒಕ್ಕೂಟದೊಂದಿಗಿದ್ದಾರೆ. ಮಹಿಳಾ ಸಂಘಟನೆಗಳು, ದಲಿತ ದಮನಿತರ ಸಂಘಟನೆಗಳು, ಅಂಗನವಾಡಿ, ಪೌರಕಾರ್ಮಿಕರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು-ಮನೆಕೆಲಸದ ಕಾರ್ಮಿಕರು, ಗಾರ್ಮೆಂಟ್ ಮತ್ತು ಇನ್ನಿತರ ಕಾರ್ಮಿಕರ ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳು, ಲೈಂಗಿಕ ಕಾರ್ಯಕರ್ತರು-ಲಿಂಗತ್ವ ಅಲ್ಪಸಂಖ್ಯಾತರ ಗುಂಪುಗಳು, ಲೇಖಕಿಯರ ಸಂಘ, ರಂಗಕರ್ಮಿಗಳು, ಅಕಾಡೆಮಿಕ್ ವಲಯದ ಸಮಾನ ಮನಸ್ಕರು ಮೊದಲಾಗಿ ನೂರಾರು ಸಂಘ-ಸಂಸ್ಥೆ-ಸಂಘಟನೆಗಳು ಒಕ್ಕೂಟದಲ್ಲಿ ಭಾಗಿಯಾಗಿವೆ. ಜೀವಪರ ಚಿಂತನೆ ಇರುವ, ಸಮಾನತೆಯ ಆಶಯ ಹೊಂದಿದ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ, ಸರ್ವಧರ್ಮ ಸಮಭಾವ ಇರುವ ಯಾರು ಬೇಕಾದರೂ ಒಕ್ಕೂಟದಲ್ಲಿ ಭಾಗಿಯಾಗಬಹುದು ಎಂದು ಒಕ್ಕೂಟದ ಪರವಾಗಿ ಡಾ ಆರ್ ಸುನಂದಮ್ಮ ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಕಾರ್ಯಾಗಾರ ನಡೆಸಿ ಮಾತನಾಡಿದ ಅವರು.2012ರಲ್ಲಿ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ಬಳಿಕ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತು. ಆ ವೇಳೆಯಲ್ಲಿ ‘ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ’ ಮಂಗಳೂರಿನಲ್ಲಿ ರಚನೆಯಾಯಿತು. ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಿಂಸೆ, ಲಿಂಗತಾರತಮ್ಯ, ಅಸಮಾನತೆಗಳನ್ನು ವಿರೋಧಿಸುತ್ತ, ಮಹಿಳಾ ಘನತೆಯನ್ನು ಎತ್ತಿ ಹಿಡಿಯುತ್ತ ‘ಇನ್ನು ಸಾಕು’ ಎಂಬ ಘೋಷವಾಕ್ಯವನ್ನಿಟ್ಟುಕೊಂಡು ಮಂಗಳೂರಿನಲ್ಲಿ 2013ರಲ್ಲಿ ಒಕ್ಕೂಟವು ಮೊದಲ ಸಮಾವೇಶ ನಡೆಸಿತು. ಸಮಾವೇಶದ ಬಳಿಕ ರಾಜ್ಯದಾದ್ಯಂತ ಇರುವ ಮಹಿಳಾಪರ ಸಂಘಟನೆಗಳು ಒಗ್ಗೂಡಿ “ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ” ನಿರ್ಮಾಣವಾಯಿತು. ಅಲ್ಲಿಂದ ಪ್ರತಿವರ್ಷ ಒಂದೊಂದು ಜಿಲ್ಲೆಯಲ್ಲಿ ಲಿಂಗಸೂಕ್ಷ್ಮತೆಯ ಕಾರ್ಯಾಗಾರ ನಡೆಸುತ್ತಾ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವಾಗಿ ಆಚರಿಸುತ್ತಾ, ಮಹಿಳಾ ಜಾಗೃತಿ ಸಮಾವೇಶವನ್ನು ನಡೆಸಿಕೊಂಡು ಬಂದಿದ್ದೇವೆ. ಇದುವರೆಗೆ ಮಂಗಳೂರು, ಮೈಸೂರು, ಬೆಂಗಳೂರು, ವಿಜಯಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಕಲಬುರಗಿ, ತುಮಕೂರುಗಳಲ್ಲಿ ಹನ್ನೊಂದು ಸಮಾವೇಶಗಳನ್ನು ನಡೆಸಿ 2024ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮಗಳನ್ನು ಸಮಸಮಾಜದ ನಿರ್ಮಾಣಕ್ಕಾಗಿ ಅರಿವಿನ ಆಂದೋಲನಗಳು ನಡೆದ ಉಡುಪಿ ನಾಡಿನಲ್ಲಿ ಹಮ್ಮಿಕೊಂಡಿದ್ದೇವೆ.
ಅದಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಎಂಟು ತಿಂಗಳಿನಿಂದ ಉಡುಪಿಯಲ್ಲಿ ಸಿದ್ಧತಾ ಸಭೆ, ತರಬೇತಿ ಕಾರ್ಯಾಗಾರ ನಡೆಸಿದ್ದೇವೆ. ತಂಡಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯಾದ್ಯಂತ ‘ಅರಿವಿನ ಪಯಣ’ ಎಂಬ ಲಿಂಗಸೂಕ್ಷ್ಮತಾ ಅಭಿಯಾನದ ಸಪ್ತಾಹವನ್ನು ಹಮ್ಮಿಕೊಂಡಿದ್ದೇವೆ. ಈಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ‘ಮಹಿಳಾ ಚೈತನ್ಯ ದಿನ’ವಾಗಿ ಆಚರಿಸಲು ಮುಂದಾಗಿದ್ದೇವೆ ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಗಳ ವಿವರ
ಚೆನ್ನೈನ ನ್ಯಾಯವಾದಿ ಹೋರಾಟಗಾರ್ತಿ ಅರುಳ್ ಮೌಳಿ ಮಹಿಳಾ ದಿನದ ಸಂದೇಶ ನೀಡಲಿದ್ದಾರೆ. ಕೆ. ಎಸ್. ಲಕ್ಷ್ಮಿ, ಬೆಂಗಳೂರು; ಶಾಹೀನ್ ಮೊರಿ, ಹುಬ್ಬಳ್ಳಿ, ಮೈತ್ರಿ ಬೆಂಗಳೂರು; ಯು. ಟಿ. ಫರ್ಜಾನಾ, ಮಂಗಳೂರು: ಡಾ. ಸಬಿತಾ ಕೊರಗ, ಮಂಗಳೂರು ವಿಚಾರ ಮಂಡನೆ: ಚರ್ಚೆ ನಡೆಸಿಕೊಡಲಿದ್ದಾರೆ. ಬಳಿಕ ಸಂಜೆ 5.30ರಿಂದ ಉಡುಪಿಯ ಜೋಡುಕಟ್ಟೆಯಲ್ಲಿ ಬೆಳಕಿನೊಂದಿಗೆ ‘ಕಪ್ಪು ಉಡುಗೆಯಲ್ಲಿ ಮಹಿಳೆಯರು’ ಮೌನ ಜಾಗೃತಿ ಕಾರ್ಯಕ್ರಮ ‘ನಮ್ಮ ಉಡುಪು ನಮ್ಮ ಹಕ್ಕು ‘ ಘೋಷವಾಕ್ಯದೊಂದಿಗೆ ನಡೆಯಲಿದೆ.
ಮಾರ್ಚ್ 9, 2024ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಉಡುಪಿಯ ‘ಹುತಾತ್ಮ ಚೌಕ’ದಲ್ಲಿ ಹಕ್ಕೊತ್ತಾಯ ಜಾಥಾ, ಮೆರವಣಿಗೆ ಉದ್ಘಾಟನೆ ನಡೆಯಲಿದೆ. ತೆಲಂಗಾಣದ ಜನಪರ ಹೋರಾಟಗಾರ್ತಿ, ಡಾ. ಜಿ. ವಿ. ವೆನ್ನೆಲ ಗದ್ದರ್ ಅವರು ಮೆರವಣಿಗೆ ಉದ್ಘಾಟಿಸಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬಳಿಕ ಬಾಸೆಲ್ಸಿಷನ್ ಚರ್ಚ್ ಹಾಲಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಬಂದ ಸಂಗಾತಿಗಳು ಮಾತನಾಡಲಿದ್ದಾರೆ.
ಎಂದಿನಂತೆ ಮಾಧ್ಯಮ ಬಂಧುಗಳು ಈ ಕಾರ್ಯಕ್ರಮ ಸಫಲವಾಗಲು ಕಾಳಜಿ, ಪ್ರಚಾರ, ಸಹಕಾರ ನೀಡುವಿರೆಂದು ನಿರೀಕ್ಷಿಸುತ್ತೇವೆ.