ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ ಎಂದು ಆರೋಪ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ಸರ್ಕಾರ ಜನರ ಕಷ್ಟಕ್ಕೆ ಮಿಡಿದು ಪರಿಹಾರ ಕೊಡುವ ಬದಲಿಗೆ ಪ್ರಚಾರದಲ್ಲಿ ಮುಳುಗಿದೆ ಎಂದಿದ್ದಾರೆ.
ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಗ್ಯಾರಂಟಿ ಹೆಸರಿನಲ್ಲಿ ಸಮಾವೇಶ ಶುರು ಮಾಡಿಕೊಂಡಿದ್ದಾರೆ ಜನರ ದುಡ್ಡಿನಲ್ಲಿ ಚುನಾವಣೆಯ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ಬರ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಅದ್ಯಾವುದರ ಬಗ್ಗೆಯೂ ಮುಖ್ಯಮಂತ್ರಿ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರತಿದಿನ ಬೆಳಗ್ಗೆ ಪತ್ರಿಕೆ ತೆಗೆದರೆ ಇವರ ಜಾಹೀರಾತು ಇರಲೇಬೇಕು. ಒಂದು ಕಡೆ ಸಿಎಂ, ಇನ್ನೊಂದು ಕಡೆ ಪೇಪರ್ ಪೆನ್ನು ಕೇಳಿದ್ರಲ್ಲ.. ಅವರ ಫೋಟೋ ಇರುತ್ತದೆ ಎಂದು ಕಿಡಿಕಾರಿದರು ಮಾಜಿ ಮುಖ್ಯಮಂತ್ರಿಗಳು.
ಪಾಪ.. ಪೇಪರ್ ಪೆನ್ನು ಕೇಳಿದವರು ಯಾವ ರೀತಿ ಸದ್ಬಳಕೆ ಮಾಡುತ್ತಿದ್ದಾರೆ ಎನ್ನೋದನ್ನು ಜನ ಗಮನಿಸಿದ್ದಾರೆ. ಜನರು ಪಾಠ ಕಲಿಸುವ ಸಮಯ ಹತ್ತಿರ ಬಂದಿದೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಕುಟುಕಿದ ಕುಮಾರಸ್ವಾಮಿ ಅವರು; ನುಡಿದಂತೆ ನಡೆದಿದ್ದೇವೆ ಅಂತಾರೆ. ಪತ್ರಿಕೆ, ಟಿವಿಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಇದೇ ಸ್ಲೋಗನ್ ಇರುತ್ತದೆ ಎಂದು ಹೇಳಿದರು.
ಈ ಸರ್ಕಾರದ ಗ್ಯಾರಂಟಿಗಳಿಂದ ನಮ್ಮ ನಾಡಿನ ಜನರು ನೆಮ್ಮದಿಯಿಂದ ಇದ್ದಾರಾ ಎನ್ನುವುದು ನನ್ನ ಪ್ರಶ್ನೆ. ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಸರಕಾರಕ್ಕೆ ಚುನಾವಣೆ ಚಿಂತೆ ಹೊತ್ತಿಕೊಂಡಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.
ದೇಶದಲ್ಲಿ ನಾನೊಬ್ಬನೇ ಆರ್ಥಿತ ತಜ್ಞ ಎಂದು ಅವರು ವೈಭವೀಕರಿಸಿಕೊಳ್ತಾರೆ. ಕೇಂದ್ರದ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಾರೆ. 52 ಸಾವಿರ ಕೋಟಿ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ, ಇವರು ಒಂದೇ ವರ್ಷದಲ್ಲಿ 1.5 ಲಕ್ಷ ಕೋಟಿ ಸಾಲ ಮಾಡಿದಾರೆ. ಯಾರಪ್ಪನ ಮನೆ ದುಡ್ಡು ಇದು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಅವರು ಗುಡುಗಿದರು.
ಮಣ್ಣಿನ ಮಕ್ಕಳು ಜನರಿಗಾಗಿ ಏನು ಮಾಡಿದರು ಅಂತಾರೆ. ಆದರೆ ನೀವು ನಮಗೆ ಅವಕಾಶವನ್ನು ಕೊಟ್ಟಾಗ ಸಾಲಾ ಮನ್ನಾ ಮಾಡಿದೆ. ಕೇಂದ್ರ ಸರ್ಕಾರ ಹಣ ಕೊಡ್ತಿಲ್ಲ ಎಂದು ನಾನು ದೆಹಲಿಗೆ ಹೋಗಿ ಧರಣಿ ಮಾಡಲಿಲ್ಲ. ನಿಮ್ಮ ತೆರಿಗೆ ಹಣವನ್ನೆ ಪೈಸೆ ಪೈಸೆ ಸದ್ವಿನಿಯೋಗ ಮಾಡಿಕೊಂಡು 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಹೆಚ್ಡಿಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಶಿವಲಿಂಗೇಗೌಡ ವಿರುದ್ದ ಕಿಡಿ
2004ರಲ್ಲಿ ಅರಸೀಕೆರೆಯಲ್ಲಿ ನಮ್ಮ ಅಭ್ಯರ್ಥಿ ಸೋತಿದ್ದರು.ಪಾಪ.. ರೇವಣ್ಣ ಆ ವ್ಯಕ್ತಿಯನ್ನು ನಂಬಿ ಪಕ್ಷಕ್ಕೆ, ಜನರಿಗೆ ಒಳ್ಳೆಯದಾಗುತ್ತದೆ ಎಂದು ಬೆಳೆಸಿದರು. ನಮ್ಮ ಸರಕಾರ ಬಂದಾಗ ಆ ವ್ಯಕ್ತಿಗೆ ಎಲ್ಲಾ ರೀತಿ ಬಲಕೊಟ್ಟು ಶಕ್ತಿ ತುಂಬಿದರು. ಆದರೆ ಒಂದು ಬಾರಿಯೂ ಅವರು ನಾನು ರೇವಣ್ಣ ಅವರಿಂದ ಬೆಳೆದೆ ಎನ್ನಲಿಲ್ಲ. ಅವರಿಗೆ ಇವತ್ತು ಅಹಂಕಾರ ಬಂದೋಗಿದೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ದ ಕಿಡಿಕಾರಿದರು ಕುಮಾರಸ್ವಾಮಿ ಅವರು.
ದೇವೇಗೌಡರು ಪ್ರದಾನಿ ಆಗಿದ್ದಾಗ ಹಾಸನಕ್ಕೆ ರೇವಣ್ಣ ದುಡಿಮೆ ಏನೆಂದು ಜಿಲ್ಲೆಯ ಪ್ರತಿಯೊಬ್ಬ ಪ್ರಜೆಗೂ ಗೊತ್ತಿದೆ. ಸರ್ಕಾರ ಇರಲಿ, ಇಲ್ಲದಿರಲಿ ಕೈ ಕಾಲು ಕಟ್ಟಿಕೊಂಡು ಕೆಲಸ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಬಂದು ಸಾವಿರಾರು ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ಕೊಟ್ಟಿದಾರೆ. ಹಾಸನದ ಬೇಲೂರು ಮೈಸೂರು ರಸ್ತೆಗೆ 680 ಕೋಟಿ ಚತುಷ್ಪಥ ರಸ್ತೆಗೂ ಚಾಲನೆ ನೀಡಲಾಗಿದೆ. ಹಾಸನದಿಂದ ಬೆಂಗಳೂರು ರಸ್ತೆ ಹೇಗಿದೆ ನೋಡಿ. ನಾನೇ ಸಿಎಂ ಇದ್ದಾಗ ದೆಹಲಿಗೆ ಹೋಗಿ ಮನವಿ ಮಾಡಿಕೊಂಡೆವು. ಶರವೇಗದಲ್ಲಿ ಈ ರಸ್ತೆ ಆಯಿತು. ಹಾಸನ ಜಿಲ್ಲೆಗೆ ದೇವೇಗೌಡರು ಮತ್ತು ರೇವಣ್ಣ ಅವರು ನೀಡಿದ ಕೊಡುಗೆಗಳನ್ನು ಮರೆಮಾಚಲು ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ
ನಾನು ಕೈ ಜೋಡಿಸಿ ಮನವಿ ಮಾಡಲು ಬಂದಿದ್ದೇನೆ. ನಿಮ್ಮ ಎದುರು ಹುಟ್ಟಿದ ಮಕ್ಕಳು ನಾವು. ನಾವು ದಾರಿ ತಪ್ಪಿದ್ದರೆ ತಿದ್ದಿಕೊಳ್ಳಲು ಅವಕಾಶ ಕೊಡಲು ಸಾದ್ಯವಿಲ್ಲವೇ ಎಂದು ಕೇಳಲು ಬಂದಿದ್ದೇನೆ. ನಮ್ಮಿಂದ ಕೆಲವು ಲೋಪಗಳು ಆಗಿರಬಹುದು. ನಿಮ್ಮ ಮನಸ್ಸಿನಲ್ಲಿ ಆಗಿರುವ ನೊವನ್ನು ನೀವು ನಮ್ಮೆದುರು ಹೇಳಲ್ಲ. ಹೇಳಿದರೆ ನಮಗೆ ನೋವಾಗುತ್ತದೆ ಎಂದು ಸುಮ್ಮನಾಗಿದ್ದೀರಿ. ಆದರೆ, ನೀವು ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡರೆ ಮುಂದೆ ಏನಾಗುತ್ತೆ ಎನ್ನೋದು ಗೊತ್ತಿದೆ. ಕೈ ಮುಗಿದು ಮನವಿ ಮಾಡ್ತೇನೆ, ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ನೀಡಿ ಎಂದು ಗದ್ಗದಿತರಾದರು ಮಾಜಿ ಮುಖ್ಯಮಂತ್ರಿಗಳು.
ನಮ್ಮ ಅಣ್ಣ ಅಂತ ನಾನು ವಹಿಸಿಕೊಂಡು ಮಾತನಾಡುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರೇವಣ್ಣ ನಂಬರ್ ಒನ್ ಎಂದು ಹೇಳಲು ಹೆಮ್ಮೆ ಆಗುತ್ತದೆ. ಐದು ವರ್ಷ ಸಿಎಂ, 15 ಬಜೆಟ್ ಮಂಡನೆ, ಹತ್ತು ವರ್ಷ ಡಿಸಿಎಂ ಆಗಿದ್ದವರು. ಅಂತಹವರ ಕ್ಷೇತ್ರದ ಒಂದು ಊರಿಗೆ ಅವರ ಮಗ ಹೋದಾಗ ಅವರಿಗೆ ಗೇರಾವ್ ಹಾಕಿದರು ಜನರು. ಹಾಸನ ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಆದಾಗ್ಯೂ ಕೆಲವು ತಪ್ಪು ಆಗಿವೆ, ನಾನು ಹೊಗಳಿಕೊಂಡು ಹೋಗಲು ಬಂದಿಲ್ಲ. ಆದರೆ, ಈ ಕ್ಷೇತ್ರವನ್ನು ಕುತಂತ್ರದಿಂದ ಪಡೆಯಲು ಯತ್ನ ನಡೆಯುತ್ತಿದೆ. ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಸೋತಿದಾರೆ, ಗೆದ್ದಿದಾರೆ. ಅದರೂ ಅವರು ಮನೆಯಲ್ಲಿ ಕೂತಿಲ್ಲ. 1989ರಲ್ಲಿ ದೇವೇಗೌಡರು ಸೋಲಬೇಕಾಯಿತು. ಆ ಸೋಲಿಗೆ ಕಾರಣ ಏನು? ಕೆಲವರು ಅಪಪ್ರಚಾರ ಮಾಡಿದ್ದರಿಂದ ಅವರಿಗೆ ಸೋಲಾಯಿತು. ಆಮೇಲೆ ನಂತರದ ಚುನಾವಣೆಯಲ್ಲಿ ಏನಾಯಿತು, ಅವರು ಮುಖ್ಯಮಂತ್ರಿ, ಪ್ರಧಾನಿಯೂ ಆದರು ಎಂದು ಜಿಲ್ಲೆಯ ರಾಜಕೀಯವನ್ನು ಎಳೆಎಳೆಯಾಗಿ ಬಿಡಿಸಿಟ್ಟರು ಮಾಜಿ ಮುಖ್ಯಮಂತ್ರಿಗಳು.
ಡಿಕೆಶಿ ಮೇಲೆ ವಾಗ್ದಾಳಿ
ಪಾಪ.. ಇನ್ನೊಬ್ಬ ಮಹಾನುಭಾವ ಹೇಳಿದ್ದಾನೆ. ದೇವೇಗೌಡರು ತಮ್ಮ ಕುಟುಂಬಕ್ಕಾಗಿ ಮಾತ್ರ ಕಣ್ಣೀರು ಹಾಕ್ತಾರೆ ಎಂದು ಮಂಡ್ಯದಲ್ಲಿ ಹೇಳಿದ್ದಾರೆ. ಅಂದು ದೇವೇಗೌಡರ ಎದುರು ಗೆದ್ದವರನ್ನು ನೀರಾವರಿ ಸಚಿವರನ್ನಾಗಿ ಮಾಡಿದ್ದರು. ಅದರಿಂದ ಏನು ಅನಾಹುತ ಆಯ್ತು ಎಂದು ಗೊತ್ತಿದೆ. ಅದರ ಪ್ರತಿಫಲವಾಗಿ ಕಾವೇರಿ ಟ್ರಿಬ್ಯುನಲ್ ರಚನೆ ಆಯಿತು. ಈಗ ಒಂದೊಂದು ಹನಿ ನೀರಿಗೂ ಬೇಡುವ ಸ್ಥಿತಿ ಬಂದಿದೆ. ಇಂತಹ ಸ್ಥಿತಿ ಮತ್ತೆ ಬರಬಾರದು ಎಂದು ಕೇಳಲು ಬಂದಿದ್ದೇನೆ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ದೇವೇಗೌಡರನ್ನು ಚುನಾವಣೆಯಲ್ಲಿ ಸೋಲಿಸಿದ್ದೀರಿ. ಆದರೆ ಅವರೆಂದೂ ಹಾಸನ ಜಿಲ್ಲೆಯನ್ನು ಮರೆಯಲಿಲ್ಲ. ಅವರ ಮಗನಾಗಿ ರೇವಣ್ಣ ಅವರು ದೇವೇಗೌಡರು ಮಾಡಲಾಗದ ಹಲವಾರು ಕೆಲಸವನ್ನು ಶ್ರಮ ಹಾಕಿ ಮಾಡಿದ್ದಾರೆ. ದೇವಸ್ಥಾನ, ರಸ್ತೆಗಳು, ಕಾಲೇಜುಗಳು, ಶಾಲೆಗಳು, ಕಟ್ಟಡಗಳು, ಸಂಕೀರ್ಣಗಳು ಎಲ್ಲವೂ ರೇವಣ್ಣನ ಕೆಲಸವನ್ನು ಹೇಳುತ್ತಿವೆ. ಇಷ್ಟೆಲ್ಲ ಮಾಡಿ ಉಪಯೋಗ ಏನು? ನಾವು ಎಂದೂ ಸ್ವಾರ್ಥಕ್ಕೆ ಬದುಕಿಲ್ಲ. ಅಧಿಕಾರ ಸಿಕ್ಕಾಗ ಜನರ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
2018ರಲ್ಲಿ ನಾನೇ ಸಿಎಂ ಆಗಿದ್ದೆ. ಕಾಂಗ್ರೆಸ್ ಜತೆ ಹೊಂದಾಣಿಕೆ ಆಯಿತು. ನಾವು ಬೇಡ ಎಂದರೂ ಹೊಂದಾಣಿಕೆ ಮಾಡಿಕೊಂಡರು. ಆಗ ಏನಾಯಿತು ಮಂಡ್ಯದಲ್ಲಿ? ಆ ಚುನಾವಣೆ ಬಗ್ಗೆ ಮುಖ್ಯಮಂತ್ರಿಗಳು ಸತ್ಯ ಹೇಳಿದಾರೆ. ಅಲ್ಲಿನ ಪಕ್ಷೇತರ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಕಾರಣ ಎಂದು ಸತ್ಯ ಹೇಳಿದಾರೆ. ನಾನು ನನ್ನ ಮಗನಿಗೆ ಟಿಕೆಟ್ ಬೇಡ ಎಂದು ಹೇಳಿದ್ದೆ. ಅಲ್ಲಿ ನಮ್ಮ ಪಕ್ಷದ ಮೂವರು ಸಚಿವರು, ಶಾಸಕರು ಇದ್ದರೂ ಗೆಲ್ಲಲು ಆಗಲಿಲ್ಲ. ಈ ರೀತಿಯ ದೋಖಾ ಮಾಡಿದರೆ ನಾವು ಗೆಲ್ಲಲು ಸಾಧ್ಯವೇ? ಎಂದು ಕೇಳಿದರು.
ಅಂದು ಮಂಡ್ಯದಲ್ಲಿ ನನ್ನ ಮಗನ ಸೋಲಿಗೆ ಇದೇ ಕಾಂಗ್ರೆಸ್ ಪಕ್ಷದ ಕುತಂತ್ರವೇ ಕಾರಣ. ಇದೇ ಸ್ಥಿತಿ ನನ್ನ ಸಹೋದರನ ಮಗನಿಗೂ ಆಗಬಾರದು. ಪ್ರಜ್ವಲ್ ನನ್ನು ಉಳಿಸಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಪ್ರಜ್ವಲ್ ರಲ್ಲಿ ನನ್ನನ್ನು ಕಾಣಿ; ಕುಮಾರಸ್ವಾಮಿಯೇ ಅಭ್ಯರ್ಥಿ ಎಂದು ಭಾವಿಸಿ
ಈ ಜಿಲ್ಲೆಯಲ್ಲಿ ಸಣ್ಣಪುಟ್ಟ ಸಮಸ್ಯೆಯಿಂದ ಯಾವುದೇ ವ್ಯತ್ಯಾಸ ಆಗಬಾರದು. ಕೈ ಜೋಡಿಸಿ ಮನವಿ ಮಾಡುತ್ತೇನೆ. ಪ್ರಜ್ವಲ್ ಈ ಕ್ಷೇತ್ರದ ಅಭ್ಯರ್ಥಿ ಅಲ್ಲ ಕುಮಾರಸ್ವಾಮಿ ಎಂದು ಭಾವಿಸಿ ತೀರ್ಮಾನ ಮಾಡಿ. ಈ ಜಿಲ್ಲಗೆ ಕಿಂಚಿತ್ತಾದಾರೂ ಕುಮಾರಸ್ವಾಮಿ ಏನಾದರೂ ಒಳ್ಳೆಯದು ಮಾಡಿದ್ದಾನೆ ಎಂದು ನಿಮ್ಮ ಮನಸ್ಸಿನಲ್ಲಿ ಇದ್ದರೆ ನನ್ನಲ್ಲಿ ಪ್ರಜ್ವಲ್ ರನ್ನು ಕಾಣಿ. ಯಾವುದೆ ಅಪಪ್ರಚಾರಕ್ಕೆ ಬಲಿಯಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.
ಅಭಿವೃದ್ಧಿ ವಿಚಾರದಲ್ಲಿ ನಾನು ರೇವಣ್ಣಗೆ ಸರಿಸಾಟಿ ಆಗಲ್ಲ. ರೇವಣ್ಣಗೆ ಮುಂಗೋಪ ಜಾಸ್ತಿ , ಸಿಟ್ಟು ಮಾಡಿಕೊಳ್ತಾನೆ. ಅಷ್ಟಕ್ಕೇ ನಿಮಗೆ ಸಿಟ್ಡು ಬೇಡಾ? ಪ್ರಜ್ವಲ್ ಕೂಡ ಅಷ್ಟೇ. ಅವನಿಗಾಗಿ ದೇವೇಗೌಡರು ಮೊಮ್ಮಗನ ಮೇಲೆ ದೊಡ್ಡ ಕನಸು ಕಂಡು ಈ ಸ್ಥಾನ ಬಿಟ್ಟುಕೊಟ್ಟರು. ತಪ್ಪು ಆಗಿರಬಹುದು. ತಿದ್ದಿಕೊಳ್ಳೋ ಗುಣ ಬೇಕು. ತಪ್ಪಾಗಿದ್ದರೆ ತಿದ್ದುಕೊಳ್ಳುತ್ತಾನೆ, ಜನರು ಮನ್ನಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಆರೋಗ್ಯ ಲೆಕ್ಕಿಸದೆ ಜನರ ಕೆಲಸ ಮಾಡುತ್ತಿದ್ದೇನೆ
ಜನರ ಕೆಲಸ ಅಂತ ಬಂದಾಗ ನಾನು ನನ್ನ ಆರೋಗ್ಯವನ್ನೂ ಲೆಕ್ಕಿಸುತ್ತಿಲ್ಲ. ಎಷ್ಟೇ ಆರೋಗ್ಯ ಸಮಸ್ಯೆ ಇದ್ದರೂ ನಾನು ರಾಜ್ಯಕ್ಕಾಗಿ ದುಡಿಯುತ್ತಿದ್ದೇನೆ. ಚಿಕ್ಕ ವಯಸ್ಸಿನಿಂದಲೇ ನನಗೆ ಅರೋಗ್ಯ ಸಮಸ್ಯೆ ಇದೆ. ಈಗಾಗಲೇ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದೆ. ಈಗ ಮತ್ತೆ ಆಪರೇಷನ್ ಗೆ ಹೋಗಬೇಕಾದ ಪರಿಸ್ಥಿತಿಗೆ ಬಂದಿದ್ದೇನೆ. ನನಗೆ ನನ್ನ ಅರೋಗ್ಯಕ್ಕಿಂತ ಜನರ ಹಿತ ಮುಖ್ಯ. ಇನ್ನೊಂದು ವಾರದಲ್ಲಿ ನಾನು ಮತ್ತೆ ಅಸ್ಪತ್ರೆಗೆ ಸೇರಬೇಕು. ಮಾರ್ಚ್ 21ಕ್ಕೆ ಆಪರೇಷನ್ ಆಗುತ್ತೆ. ಆಪರೇಷನ್ ಆದ ಬಳಿಕ ನಾನು ಮೂರೇ ದಿನ ರೆಸ್ಟ್ ಮಾಡೋದು. ನಂತರ ನಮ್ಮ ಹಾಗು ಬಿಜೆಪಿಯ ಅಭ್ಯರ್ಥಿ ಗಳ ಪರ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಂಸದರಾದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವರಾದ ಹೆಚ್.ಕೆ.ಕುಮಾರಸ್ವಾಮಿ, ಶಾಸಕರಾದ ಎ.ಮಂಜು, ಸಿ.ಎನ್.ಬಾಲಕೃಷ್ಣ, ಭೋಜೇಗೌಡರು, ಸೂರಜ್ ರೇವಣ್ಣ, ಸ್ವರೂಪ್ ಪ್ರಕಾಶ್, ಮಾಜಿ ಶಾಸಕರಾದ
ಲಿಂಗೇಶ್, ನಾಯಕರಾದ ಎನ್.ಆರ್.ಸಂತೋಷ, ಅಶೋಕ್ ಬಾಣಾವರ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು