ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಯಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರ ಬಗ್ಗೆ ಕೀಳಾಗಿ ಟೀಕೆ ಮಾಡಿರುವ ಸಂಸದ ಡಿ.ಕೆ.ಸುರೇಶ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತ್ಯತೀತ ಜನತಾದಳ ಪಕ್ಷದ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಅವರು.
ಡಾ.ಮಂಜುನಾಥ್ ಅವರ ಸಾಧನೆಯನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಆದರೆ, ಈ ವ್ಯಕ್ತಿ ನಾಲಿಗೆ ಜಾರಿಬಿಟ್ಟಿದ್ದಾರೆ. ಈ ವ್ಯಕ್ತಿ ಮಂಜುನಾಥ್ ಅವರ ಉಂಗುಷ್ಟಕ್ಕೂ ಸಮನಲ್ಲ ಎಂದು ಕಿಡಿಕಾರಿದರು.
ಅವರು ಚುನಾವಣೆಗಳಲ್ಲಿ ಗೆದ್ದಿರಬಹುದು. ಆದರೆ, ಮಂಜುನಾಥ್ ಅವರ ಸಾಧನೆ ಏನು? ಅದನ್ನು ಮೊದಲು ಅರಿತುಕೊಳ್ಳಲಿ. ಇಂದು ಬೆಳಗ್ಗೆ ಆ ವ್ಯಕ್ತಿ ಮಂಜುನಾಥ್ ಅವರ ಬಗ್ಗೆ ಕೊಟ್ಟಿರುವ ಹೇಳಿಕೆ ನನಗೆ ಬಹಳ ನೋವುಂಟು ಮಾಡಿದೆ. ಬೇಕಾದರೆ ನಮ್ಮ ಬಗ್ಗೆ ಮಾತನಾಡಲಿ, ರಾಜಕೀಯವಾಗಿ ಎದುರಿಸುತ್ತೇವೆ. ಉತ್ತರ ಕೊಡುತ್ತೇವೆ. ಮಂಜುನಾಥ್ ಅವರ ಬಗ್ಗೆ ಮಾತನಾಡಿದರೆ ಸಹಿಸುವ ಪ್ರಶ್ನೆ ಇಲ್ಲ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ಅವರ ಬಗ್ಗೆ ಮಾತನಾಡುವ ಯೋಗ್ಯತೆ ನಿಮಗಿಲ್ಲ, ನೀವು ಮಾಡಬಾರದ್ದು ಮಾಡಿದ್ದೀರಿ ಎಂದು ಡಿಕೆ ಸುರೇಶ್ ವಿರುದ್ಧ ಪ್ರಹಾರ ಮಾಡಿದ ಮಾಜಿ ಮುಖ್ಯಮಂತ್ರಿಗಳು; ರಾಮನಗರ ಜಿಲ್ಲೆ ನಾಯಕ ಅಂತಾರೆ. ಅವರ ಹೆಸರು ಹೇಳಲು ನಾನು ಇಷ್ಟಪಡಲ್ಲ ಎಂದು ಕೆಂಡ ಕಾರಿದರು.
ಮಂಜುನಾಥ್ ಅವರನ್ನು ಒಪ್ಪಿಸಿದ್ದು ನಾನೇ
ಮಂಜುನಾಥ್ ಅವರು ಬಿಜೆಪಿ ಚಿಹ್ನೆ ಮೇಲೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಹಾಕಿದ್ದು ನಾನೇ. ಈ ಬಗ್ಗೆ ಅವರನ್ನು ಒಪ್ಪಿಸಿದ್ದು ಕೂಡ ನಾನೇ. ಎರಡು ಗಂಟೆ ಕಾಲ ತಂದೆಯವರ ಮೇಲೆ ಒತ್ತಡ ಹಾಕಿ ಒಪ್ಪಿಸಿದ್ದು ನಾನೇ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚು ಆದ್ಯತೆ:
ಜೆಡಿಎಸ್ ಪಕ್ಷದಲ್ಲಿ ಮಹಿಳೆಯರಿಗೆ ಪಕ್ಷದಲ್ಲಿ ಹೆಚ್ಚು ಶಕ್ತಿ ತುಂಬಲಾಗುವುದು. 33% ಮಹಿಲಾರೆಸಲು ಜಾರಿಯಾದ ಮೇಲೆ ಮಹಿಳೆಯರಿಗೆ ಹೆಚ್ಚೆಚ್ಚು ಅವಕಾಶಗಳು ಸಿಗಲಿವೆ. ಆದ್ದರಿಂದಲೇ ಈಗಿನಿಂದಲೇ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಮಹಿಳಾ ಮುಖಂಡರಿಗೆ ಕುಮಾರಸ್ವಾಮಿ ಅವರು ಸಲಹೆ ಮಾಡಿದರು.
ಮಹಿಳಾ ಸಬಲೀಕರಣಕ್ಕೆ ದೇವೇಗೌಡರ ಕೊಡುಗೆ ಸ್ಮರಣೀಯ. ಸರಕಾರಿ ನೌಕರಿಯಲ್ಲಿ 50% ಮಹಿಳಾ ಮೀಸಲು ಅವರ ಕೊಡುಗೆ ಇದೆ. ಮುಂದಿನ ವಿಧಾನಸಭೆಗೆ 80-90 ಜನ ಮಹಿಳೆಯರು ಶಾಸಕರಾಗಿ ಆಯ್ಕೆಯಾಗಿ ಬರುತ್ತಾರೆ. ರಾಜಕೀಯ ಹಿನ್ನೆಲೆಯ ಕುಟುಂಬ, ಶ್ರೀಮಂತ ಕುಟುಂಬಗಳಿಂದ ಬಂದ ಹೆಣ್ಣು ಮಕ್ಕಳಷ್ಟೇ ಶಾಸಕರಾಗಬಹುದು ಎನ್ನುವುದು ಸುಳ್ಳು. ಸಾಮಾನ್ಯ ಮಹಿಳೆಯರು ಕೂಡ ಶಾಸಕರಾಗಬಹುದು ಎನ್ನುವುದಕ್ಕೆ ಶಾರದಾ ಪೂರ್ಯ ನಾಯಕ್, ಕರೆಮ್ಮ ನಾಯಕ್ ಅವರೇ ಉತ್ತಮ ಉದಾಹರಣೆ. ಈ ಇಬ್ಬರು ಮಹಿಳೆಯರು ಅತ್ಯಂತ ಕಠಿಣ ಕ್ಷೇತ್ರಗಳಿಂದ ಆಯ್ಕೆ ಆಗಿದ್ದಾರೆ. ಇವರಿಬ್ಬರ ಯಶೋಗಾಥೆ ನಮ್ಮ ಪಕ್ಷದ ಇತರೆ ಮಹಿಳಾ ಮುಖಂಡರಿಗೆ ಮಾದರಿ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಧೃಡ ಸಂಕಲ್ಪ ಇದ್ದರೆ ಏನು ಸಾಧನೆ ಮಾಡಬಹುದು. ನಿಮ್ಮ ಶಕ್ತಿಯನ್ನು ಅರಿತುಕೊಳ್ಳಿ. ಸಂಘಟನೆಯಲ್ಲಿ ತೊಡಗಿ, ಪಕ್ಷ ನಿಮ್ಮನ್ನು ಗುರುತಿಸುತ್ತದೆ. 33% ಮೀಸಲು ಜಾರಿಯಾದ ಮೇಲೆ ನಿಮ್ಮ ಅವಕಾಶಗಳು ಹೆಚ್ಚಾಗುತ್ತವೆ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಅಧ್ಯಕ್ಷೆ ಲೀಲಾದೇವಿ ಆರ್ ಪ್ರಸಾದ್, ಶಾಸಕರಾದ ಶಾರದಾ ಪೂರ್ಯ ನಾಯಕ್, ಕರೆಮ್ಮ ನಾಯಕ್, ರೂತ್ ಮನೋರಮಾ, ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಕೆ.ಎ.ತಿಪ್ಪೇಸ್ವಾಮಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸೂರಜ್ ನಾಯಕ್ ಸೋನಿ, ಎ.ಪಿ.ರಂಗನಾಥ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.