ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಇಂದು ಘನತ್ಯಾಜ್ಯ ನಿರ್ವಹಣೆಗೆ ಕುರಿತಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಘನತ್ಯಾಜ್ಯ ನಿರ್ವಹಣೆ ಕುರಿತಂತೆ ದಕ್ಷಿಣ ವಲಯದ ವಿವಿಧ ಸ್ಥಳಗಳಲ್ಲಿ ‘ತ್ಯಾಜ್ಯ ವಿಂಗಡಣೆ, ಪರಿಸರ ಸ್ವಚ್ಛತೆ ಹಾಗೂ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ’ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ದಕ್ಷಿಣ ವಲಯದ ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಜಂಟಿ ಆಯುಕ್ತರಾದ ಶಿವಕುಮಾರ್ ರವರ ಅಧ್ಯಕ್ಷತೆ ಹಾಗೂ ಮುಖ್ಯ ಅಭಿಯಂತರರಾದ ಎಸ್.ವಿ ರಾಜೇಶ್ ರವರ ನೇತೃತ್ವದಲ್ಲಿ ಸ್ಥಳೀಯ ಮಟ್ಟದಲ್ಲಿ ಸಾಮೂಹಿಕವಾಗಿ IEC(Information, Education and Communication) ಚಟುವಟಿಕೆಯನ್ನು ನಡೆಸಲಾಯಿತು.
ದಕ್ಷಿಣ ವಲಯದಲ್ಲಿ ಘನತ್ಯಾಜ್ಯ ವಿಲೇವಾರಿ, ಹಸಿ ಕಸ, ಒಣ ಕಸ ಹಾಗೂ ಸ್ಯಾನಿಟರಿ ಕಸ ವಿಂಗಡಣೆ, ಮೂಲದಲ್ಲಿಯೆ ತ್ಯಾಜ್ಯವನ್ನು ಸಂಸ್ಕರಿಸುವ, ಏಕ ಬಳಕೆ ಪ್ಲಾಸ್ಟಿಕ್ ಬಳಕೆ ನಿಷೇಧ, ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡದಿರುವುದು, ಖಾಲಿ ನಿವೇಶನಗಳಲ್ಲಿ ಕಸ ಹಾಕದಿರುವುದು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ನಾಗರೀಕರಲ್ಲಿ ಜಾಗೃತಿ ಮೂಡಿಸಲಾಯಿತು.
ಪ್ರತಿನಿತ್ಯ ಆಟೋ ಟಿಪ್ಪರ್ ಗಳ ಮೂಲಕ ಮೆನೆ ಮೆನೆಗೆ ತರಳಿ ಹಸಿ ಕಸ ಸಂಗ್ರಹಿಸಲಾಗುತ್ತದೆ. ಇನ್ನು ವಾರಕ್ಕೆ ಎರಡು ದಿನಗಳ ಕಾಲ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಎಲ್ಲಾ ನಾಗರೀಕರು ರಸ್ತೆ, ಬೀದಿ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸವನ್ನು ಬಿಸಾಡದೆ ಆಟೋ ಟಿಪ್ಪರ್ ಗಳಿಗೆ ಕಸವನ್ನು ನೀಡಿ ನಗರವನ್ನು ಸ್ವಚ್ಛ – ಸುಂದರ ನಗರವನ್ನಾಗಿಸುವ ಪಣವನ್ನು ಎಲ್ಲರೂ ತೊಡೋಣ ಎಂದು ಅರಿವು ಮೂಡಿಸಲಾಯಿತು.
ಘನತ್ಯಾಜ್ಯ ಸಮರ್ಪಕ ನಿರ್ವಹಣೆಯ ಕುರಿತು ಭಿತ್ತಿ ಪತ್ರಗಳನ್ನು ಹಂಚುತ್ತಾ, ರಸ್ತೆಯುದ್ದಕ್ಕೂ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಯಿತು.
ಬೀದಿ ನಾಟಕದ ಮೂಲಕ ಅರಿವು:
ಘನತ್ಯಾಜ್ಯ ನಿರ್ವಹಣೆ ಕುರಿತಂತೆ ವಿವಿಧ ಸ್ಥಳಗಳಲ್ಲಿ ಬೀದಿ ನಾಟಕಗಳನ್ನು ಆಯೋಜಿಸಿ ನಾಟಕದ ಮೂಲಕ ಕಸ ವಿಂಗಡಣೆ, ಪ್ಲಾಸ್ಟಿಕ್್ ನಿಷೇಧ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.
ಮಡಿವಾಳ ಹಾಗೂ ಸಾರಕ್ಕಿ ಮಾರುಕಟ್ಟೆಯಲ್ಲಿ ಬಟ್ಟೆ ಬ್ಯಾಗ್ ಹಂಚುವ ಮೂಲಕ ಜಾಗೃತಿ:
ನಗರದ ಮಡಿವಾಳ ಹಾಗೂ ಸಾರಕ್ಕಿ ಮಾರುಕಟ್ಟೆಗೆ ಬಂದಂತಹ ನಾಗರೀಕರಿಗೆ ಒಮ್ಮೆ ಬಳಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಬಟ್ಟೆಯಿಂದ, ನಾರಿನಿಂದ ಹಾಗೂ ಪೇಪರ್ ನಿಂದ ತಯಾರಿಸಿದ ಬ್ಯಾಗ್ ಗಳನ್ನು ಮಾತ್ರ ಬಳಸಲು ಅರಿವು ಮೂಡಿಸಲಾಯಿತು. ಜೊತೆಗೆ ಪಾಲಿಕೆ ವತಿಯಿಂದಲೇ ಬಟ್ಟೆಯಿಂದ ತಯಾರಿಸಿರುವ ಬ್ಯಾಗ್ ಗಳನ್ನು ನಾಗರೀಕರಿಗೆ ವಿತರಿಸಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸದಂತೆ ಅರಿವು ಮೂಡಿಸಲಾಯಿತು.
ಜಾಗೃತಿ ಮೂಡಿಸಿದ ಪ್ರದೇಶಗಳ ವಿವರ:
1. ಪದ್ಮನಾಭನಗರ ವಿಭಾಗದ ಗಣೇಶ ಮಂದಿರ ವಾರ್ಡ್ ಸುತ್ತಮುತ್ತಲಿನ ಪ್ರದೇಶ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶ.
2. ಬಿಟಿಎಂ ಬಡಾವಣೆಯ ಸುತ್ತಮುತ್ತಲಿನ ಪ್ರದೇಶ ಹಾಗೂ ಮಡಿವಾಳ ಮಾರುಕಟ್ಟೆ
3. ಬಸವನಗುಡಿ ಕತ್ರಿಗುಪ್ಪೆ ವ್ಯಾಪ್ತಿಯ ಸ್ಮಾರ್ಟ್ ಬಜಾರ್
4. ವಿಜಯ ನಗರದ ಜಿಟಿ ಮಾಲ್
5. ಜಯನಗರ ಸಾರಕ್ಕಿ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶ
6. ಚಿಕ್ಕಪೇಟೆಯ ಲಾಲ್ ಬಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶ
ಜಾಗೃತಿ ಕಾರ್ಯದಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಕಿರಿಯ ಆರೋಗ್ಯ ಪರಿವೀಕ್ಷಕರು, ಲಿಂಕ್ ವರ್ಕರ್ಸ್ ಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮಾರ್ಷಲ್ ಗಳು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.