ಬೆಂಗಳೂರು: ಸಾರ್ವತ್ರಿಕಾ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಿಂದ ಕಾಲಕಾಲಕ್ಕೆ ಬರುವ ಮಾಹಿತಿಯನ್ನು ರಾಜಕೀಯ ಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿರಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಕೀಯ ಪ್ರತಿನಿಧಿಗಳೊಂದಿಗೆ ಇಂದು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಲೋಕಸಭಾ ಚುನಾವಣಾ ಅಭ್ಯರ್ಥಿಯು 95.00 ಲಕ್ಷ ರೂ.ಗಳನ್ನು ವ್ಯಯಿಸಬಹುದು ಎಂದು ಮಾಹಿತಿ ನೀಡಿದರು.
ಪ್ರತಿ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಕನಿಷ್ಠ ಒಂದು ದಿನದ ಮುಂಚೆ ಚುನಾವಣಾ ವೆಚ್ಚಕ್ಕಾಗಿಯೇ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ನಿರ್ವಹಿಸಬೇಕು. ಜೊತೆಗೆ ಆ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ಕಡ್ಡಾಯವಾಗಿ ನೀಡಬೇಕೆಂದು ತಿಳಿಸಿದರು.
ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಮುಂಚೆ ಭರಿಸಲಾಗುವ ವೆಚ್ಚವು ಪಕ್ಷಗಳ ವೆಚ್ಚವೆಂದು ಪರಿಗಣಿಸಲಾಗುತ್ತದೆ. ನಾಮಪತ್ರ ಸಲ್ಲಿಸುವ ಸಮಯದಿಂದ ಮತ ಎಣಿಕೆ ದಿನಾಂಕದವರೆಗೂ ಭರಿಸಲಾಗುವ ವೆಚ್ಚವನ್ನು ಅಭ್ಯರ್ಥಿಯ ವೆಚ್ಚವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಅಭ್ಯರ್ಥಿಗಳಿಗೆ ಚುನಾವಣಾ ಕಛೇರಿಗಳಿಂದ ಡೈಲಿ ರಿಜಿಸ್ಟರ್(Daily Register), ಕ್ಯಾಶ್ ರಿಜಿಸ್ಟರ್(Cash Register) ಮತ್ತು ಬ್ಯಾಂಕ್ ರಿಜಿಸ್ಟರ್(Bank Register) ಸೇರಿದಂತೆ ಮೂರು ಮಾದರಿಯಲ್ಲಿ ವಿವರಗಳನ್ನು ನೀಡಲು ತಿಳಿಸಿದ್ದು, ಈ ವಹಿಗಳಲ್ಲಿಯೇ ಚುನಾವಣಾ ವೆಚ್ಚಗಳ ಲೆಕ್ಕವನ್ನು ನಮೂದಿಸಬೇಕು. ಜೊತೆಗೆ ಪ್ರತಿ ವೆಚ್ಚಕ್ಕೆ ಸಂಬಂಧಪಟ್ಟಂತೆ ವೋಚರ್, ಬಿಲ್ಲು, ಇತರೆ ದಾಖಲೆಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.
ತಾರ ಪ್ರಚಾರಕರು(Star Campaigners) ರೊಂದಿಗಿನ ನಡೆಸಲಾಗುವ ಪ್ರಚಾರ ಸಭೆಗಳು, Rally ಗಳು, ಸಮಾರಂಭಗಳಲ್ಲಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದಲ್ಲಿ ಮತ್ತು ಅಭ್ಯರ್ಥಿಯು ಭಾಗವಹಿಸಿದ್ದಲ್ಲಿ, ವೇದಿಕೆ ಹಂಚಿಕೊಂಡಿದ್ದಲ್ಲಿ ಪೂರ್ಣ ವೆಚ್ಚವನ್ನು ಅಭ್ಯರ್ಥಿಯ ವೆಚ್ಚವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಎಂಸಿಸಿ ನೋಡಲ್ ಅಧಿಕಾರಿಯಾದ ಮುನೀಶ್ ಮೌದ್ಗಿಲ್, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್, ಡಾ. ಕೆ. ದಯಾನಂದ್, ಸ್ನೇಹಲ್, ವಿನೋತ್ ಪ್ರಿಯಾ, ಎಂಸಿಎಂಸಿ ನೋಡಲ್ ಅಧಿಕಾರಿಯಾದ ಪ್ರೀತಿ ಗೆಹ್ಲೋಟ್, ಚುನಾವಣಾ ವಿಭಾಗದ ಅಧಿಕಾರಿಗಳು, ರಾಜಕೀಯ ಪ್ರತಿನಿಧಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.