ಬೆಂಗಳೂರು: ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಜಲ ಮಂಡಳಿ ಪ್ರಾರಂಭಿಸಿರುವ ಗ್ರೀನ್ ಸ್ಟಾರ್ ಚಾಲೆಂಜ್ ಗೆ ಸ್ವೀಕರಿಸುವ ಮೂಲಕ, ನೀರಿನ ಉಳಿತಾಯದ ಪಂಚಸೂತ್ರಗಳನ್ನ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ನಗರದಲ್ಲಿ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನೀರು ಉಳಿತಾಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀರು ಉಳಿತಾಯ ಮತ್ತು ನೀರಿನ ಸಮರ್ಪಕ ಬಳಕೆಯ ಬಗ್ಗೆ ಪದಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ನಲ್ಲಿ 30 ಕ್ಲಸ್ಟರ್ ಗಳಿದ್ದು ಸುಮಾರು 15 ಲಕ್ಷಕ್ಕೂ ಹೆಚ್ಚು ಜನ ಸದಸ್ಯರು ಇದ್ದಾರೆ. ಈ ಅಪಾರ್ಟ್ಮೆಂಟ್ ಗಳು ಕಾವೇರಿ ನೀರು, ಕೊಳವೆಬಾವಿಗಳು ಹಾಗೂ ಟ್ಯಾಂಕರ್ ಗಳ ಮೇಲೆ ಅವಲಂಬಿತವಾಗಿವೆ. ಈ ಅಪಾರ್ಟ್ಮೆಂಟ್ ಗಳಲ್ಲಿ ನೀರಿನ ಸಮರ್ಪಕ ನಿರ್ವಹಣೆ ಹಾಗೂ ಮಿತವಾದ ನೀರಿನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಲಮಂಡಳಿ ಗ್ರೀನ್ ಸ್ಟಾರ್ ರೇಟಿಂಗ್ ಚಾಲೆಂಜ್ ಪ್ರಾರಂಭಿಸಿದೆ. ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಯ ಬಳಕೆಯಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳುವುದು, ಮಳೆ ನೀರು ಇಂಗು ಗುಂಡಿಗಳನ್ನ ಅಳವಡಿಸಿಕೊಳ್ಳುವುದು ಹಾಗೂ ತಮ್ಮ ಸದಸ್ಯರ ಜೊತೆ ಈ ಎಲ್ಲಾ ಕ್ರಮಗಳ ಬಗ್ಗೆ ಮಾಹಿತಿಗಳನ್ನ ಹಂಚಿಕೊಳ್ಳುವ ಪಂಚ ಸೂತ್ರಗಳನ್ನ ಅಳವಡಿಸಿಕೊಳ್ಳುವುದರ ಮೂಲಕ ಶೇಕಡಾ 30 ರಷ್ಟು ನೀರಿನ ಬಳಕೆಯನ್ನು ಕಡಿಮೆ ಬಹುದಾಗಿದೆ.
ಇದರಿಂದ ಅನಗತ್ಯವಾಗಿ ಪೋಲಾಗುತ್ತಿರುವ ನೀರನ್ನು ತಪ್ಪಿಸಬಹುದಾಗಿದೆ. ಜನರು ನೀರಿನ ಬಳಕೆಯನ್ನು ಕಡಿಮೆ ಮಾಡುವ ಜೊತೆಯಲ್ಲೇ, ಅನಗತ್ಯವಾಗಿ ಪೋಲಾಗುತ್ತಿದ್ದ ನೀರನ್ನು ತಪ್ಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಒಬ್ಬ ಮನುಷ್ಯನ ದಿನನಿತ್ಯದ ಬಳಕೆಗೆ ಸುಮಾರು 120 ರಿಂದ 150 ಲೀಟರ್ ಗಳಷ್ಟು ನೀರು ಸಾಕಾಗುತ್ತದೆ. ಇದರಲ್ಲಿ ಶೇಕಡಾ 20 ರಷ್ಟು ಸಂಸ್ಕರಿಸಿದ ನೀರು ಬಳಕೆ ಮಾಡುವುದರಿಂದ ಶೇಕಡಾ 30 ರಷ್ಟು ನೀರು ಉಳಿತಾಯ ಮಾಡಬಹುದಾಗಿದೆ. ಆದರೆ ಕೆಲವೆಡೆ ನೀರಿನ ಲಭ್ಯತೆ ಇರುವುದನ್ನು ಕಂಡು ಜನರು ಅನಗತ್ಯವಾಗಿ ದಿನನಿತ್ಯದ ಕೆಲಸಗಳಿಗೆ ಹೆಚ್ಚಿನ ನೀರನ್ನ ಬಳಸಿಕೊಳ್ಳುತ್ತಿದ್ದಾರೆ. ಈ ಅಪವ್ಯಯದ ಸ್ವಭಾವವನ್ನ ಬದಲಿಸುವುದು ಹಾಗೂ ಉತ್ತಮ ನೀರಿನ ಮಿತ ಬಳಕೆ ಉತ್ತಮ ಹವ್ಯಾಸವನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಈ ರೀತಿ ಉಳಿತಾಯ ಆಗುವ ಹೆಚ್ಚುವರಿ ನೀರನ್ನು ಲಭ್ಯತೆ ಕಡಿಮೆ ಇರುವ ಕಡೆ ಸರಬರಾಜು ಮಾಡಲಾಗುವುದು ಎಂದು ಜಲ ಮಂಡಳಿಯ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಜಲಕ್ಷಾಮದ ವಿರುದ್ಧ ಹೋರಾಡಲು ಜಲಮಂಡಳಿಯೊಂದಿಗೆ ಕೈಜೋಡಿಸಿದ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್
ಬೆಂಗಳೂರು ನಗರದಲ್ಲಿ ಅಂತರ್ಜಲ ಕುಸಿತ ಆಗಿರುವುದರಿಂದ ನೀರಿನ ಲಭ್ಯತೆ ಕಡಿಮೆಯಾಗಿದೆ. ಇದರಿಂದಾಗಿ ನಗರದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಇದನ್ನ ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಈಗಾಗಲೇ ಜಲ ಮಂಡಳಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮಗಳ ಜೊತೆಗೆ ಭವಿಷ್ಯದ ಅವಶ್ಯಕತೆಗಳಿಗೋಸ್ಕರ ಹಲವಾರು ದೂರದೃಷ್ಟಿಯ ಕ್ರಮಗಳನ್ನ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಈ ಎಲ್ಲಾ ಭವಿಷ್ಯದ ಕ್ರಮಗಳಿಗೆ ಕ್ರಮಗಳನ್ನು ಅಳವಡಿಸಿಕೊಳ್ಳುವುದಕ್ಕೆ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಮುಂದಾಗಿದೆ. ಇದರಿಂದ ಹೆಚ್ಚು ನೀರು ಬಳಕೆಯ ಗ್ರಾಹಕರಾಗಿರುವ ಅಪಾರ್ಟ್ಮೆಂಟ್ ಗಳು ನೀರಿನ ಮಿತ ಬಳಕೆ ಹಾಗೂ ಸಂಸ್ಕರಿಸಿದ ನೀರಿನ ಬಳಕೆ ಬಳಕೆಗೆ ಪ್ರೋತ್ಸಾಹ ನೀಡುವುದರಿಂದ ಬಹಳಷ್ಟು ಅನುಕೂಲವಾಗುತ್ತದೆ. ಈ ಎಲ್ಲಾ ಕ್ರಮಗಳಿಗೂ ಕೈಜೋಡಿಸಲು ಮುಂದಾಗಿರುವುದು ಸಂತಸದ ವಿಷಯವಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸಂತಸ ವ್ಯಕ್ತಪಡಿಸಿದರು.
ಅಪಾರ್ಟ್ಮೆಂಟ್ ಗಳ ನೀರಿನ ಬಳಕೆಯ ಸಮಗ್ರ ಮಾಹಿತಿ ಕ್ರೋಢೀಕರಣ:
ಅಪಾರ್ಟ್ಮೆಂಟ್ ಗಳಲ್ಲಿ ಕಾವೇರಿ ನೀರು, ಕೊಳವೆಬಾವಿಗಳ ನೀರು, ಸಂಸ್ಕರಿಸಿದ ನೀರು ಅಥವಾ ಟ್ಯಾಂಕರ್ ಗಳ ಮೂಲಕ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳಲಾಗುತ್ತಿದೆ. ಈ ನೀರಿನ ಬಳಕೆಯ ಪ್ರಮಾಣವನ್ನ ಸಂಗ್ರಹಿಸಲು ಜಲಮಂಡಳಿ ಮುಂದಾಗಿದೆ. ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಮೂಲಕ ಎಲ್ಲಾ ಅಪಾರ್ಟ್ಮೆಂಟ್ ಗಳಲ್ಲೂ, ಬಳಕೆಗೆ ನೀರನ್ನ ಯಾವ ಯಾವ ಮೂಲಗಳಿಂದ ಸಂಗ್ರಹಿಸಲಾಗುತ್ತದೆ ಈ ಎಲ್ಲಾ ಮಾಹಿತಿಯನ್ನು ಕೇಳಲಾಗಿದೆ. ಇವುಗಳ ಬಗ್ಗೆ ಮಾಹಿತಿಯನ್ನ ನೀಡಿದಲ್ಲಿ ಮುಂದಿನ 15 ರಿಂದ 30 ದಿನಗಳಲ್ಲಿ ಅಪಾರ್ಟ್ಮೆಂಟ್ ಗಳಿಗೆ ಕನಿಷ್ಠ ಅವಶ್ಯಕತೆ ಇರುವಷ್ಟು ನೀರನ್ನ ನೀಡುವಂತಹ ಕ್ರಮಕ್ಕೆ ಜಲಮಂಡಳಿ ಮುಂದಾಗಲಿದೆ ಎಂದು ಜಲ ಮಂಡಳಿ ಅಧ್ಯಕ್ಷರು ತಿಳಿಸಿದರು
ಅಪಾರ್ಟ್ಮೆಂಟ್ ಗಳ ಮನೆಗಳಿಗೆ ಪ್ರತ್ಯೇಕ ಮೀಟರ್, ಜಾರಿಯಲ್ಲಿರುವ ಕಾಯ್ದೆಗೆ ತಿದ್ದುಪಡಿಗೆ ಚಿಂತನೆ
ಅಪಾರ್ಟ್ಮೆಂಟ್ ಗಳಲ್ಲಿ ಇರುವಂತಹ ಹಲವಾರು ಮನೆಗಳಿಗೆ ಒಂದೇ ಮೀಟರ್ ಅನ್ನು ಅಳವಡಿಸಲಾಗಿರುತ್ತದೆ. ಇದರಿಂದ ಅಪಾರ್ಟ್ಮೆಂಟ್ ಮನೆಗಳು ಬಳಸುವಂತಹ ನೀರಿನ ಪ್ರಮಾಣವನ್ನ ಪ್ರತ್ಯೇಕವಾಗಿ ಅಳತೆ ಮಾಡುವುದು ಕಷ್ಟವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅಪಾರ್ಟ್ಮೆಂಟ್ ಮನೆಗಳಿಗೆ ಪ್ರತ್ಯೇಕವಾದಂತಹ ಮೀಟರ್ ಗಳನ್ನ ಅಳವಡಿಸಲು ಅವಕಾಶ ಮಾಡಿಕೊಡುವಂತೆ ಬೆಂಗಳೂರು ಫೆಡರೇಶನ್ ಸದಸ್ಯರು ಮನವಿ ಮಾಡಿದರು. ಇದನ್ನ ಜಾರಿಗೊಳಿಸಲು ಚಾಲ್ತಿಯಲ್ಲಿರುವ ಕಾಯ್ದೆಗಳಲ್ಲಿ ತಿದ್ದುಪಡಿ ತರುವಂತಹ ಅಗತ್ಯವಿದೆ. ಕಾಯ್ದೆಗಳಲ್ಲಿ ತಿದ್ದುಪಡಿ ತರುವ ಮೂಲಕ ಅಪಾರ್ಟ್ಮೆಂಟ್ ನಿರ್ಮಾಣವಾಗುತ್ತಿರುವಂತಹ ಸಂದರ್ಭದಲ್ಲೇ ಮನೆಗಳಿಗೆ ಪ್ರತ್ಯೇಕವಾಗಿ ಮೀಟರ್ ಅಳವಡಿಕೆಗೆ ಅವಕಾಶ ಮಾಡಿಕೊಡಬಹುದಾಗಿದೆ. ಈ ಬಗ್ಗೆ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಮನವಿ ನೀಡಿದಲ್ಲಿ, ಸರ್ಕಾರದ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುವುದಾಗಿ ಜಲ ಮಂಡಳಿ ಅಧ್ಯಕ್ಷರು ತಿಳಿಸಿದರು
ಕಾರ್ಯಕ್ರಮ ದಲ್ಲಿ ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.