ಬೆಂಗಳೂರು: ಕಟ್ಟಡಗಳ ನಿರ್ಮಾಣದಲ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಅಪಾರ್ಟ್ ಮೆಂಟ್ ಫೆಡೆರೇಷನ್ ಮತ್ತು ಕ್ರೇಡೈ ಜೊತೆಗೆ ಸಹಭಾಗಿತ್ವಕ್ಕೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದ್ದು, ಏಪ್ರಿಲ್ 2 ರಿಂದ ಸಂಸ್ಕರಿಸಿದ ನೀರಿನ ಸರಬರಾಜು ಪ್ರಾರಂಭಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಬೆಂಗಳೂರು ಅಪಾರ್ಟ್ ಮೆಂಟ್ ಫೆಡೆರೇಷನ್ ಹಾಗೂ ಕ್ರೇಡೈ ಜೊತೆಗೆ ಈಗಾಗಲೇ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಅಪಾರ್ಟ್ ಮೆಂಟ್ ಗಳ ಎಸ್ ಟಿ ಪಿ ಗಳಿಂದ ಶುದ್ಧೀಕರಣ ಗೊಳಿಸಲಾಗಿರುವ ಶೇಕಡಾ 50 ರಷ್ಟು ನೀರನ್ನು ಮಾರಾಟ ಮಾಡಲು ಮಾರ್ಚ್ 11 ರಂದು ಅನುಮತಿ ನೀಡಲಾಗಿದೆ. ಹಾಗೆಯೇ, ಜಲಮಂಡಳಿ ತ್ಯಾಜ್ಯ ನೀರು ಶುದ್ಧಿಕರಣ ಘಟಕದಲ್ಲೂ ಸಂಸ್ಕರಿಸಿದ ನೀರು ಲಭ್ಯವಿದೆ. ಈ ನೀರನ್ನು ಬಳಕೆದಾರರಿಗೆ ಸಮರ್ಪಕವಾಗಿ ಪೂರೈಸುವ ಉದ್ದೇಶದಿಂದ ಈ ಸಹಭಾಗಿತ್ವಕ್ಕೆ ಮುಂದಾಗಿದ್ದೇವೆ ಇನ್ಸು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
500 ಮೀಟರ್ ವರೆಗೆ ಪ್ರತ್ಯೇಕ ಪೈಪ್ ಲೈನ್
ಖಾಸಗಿ (ಅಪಾರ್ಟ್ ಮೆಂಟ್) ಹಾಗೂ ಜಲಮಂಡಳಿ ತ್ಯಾಜ್ಯ ನೀರು ಶುದ್ಧಿಕರಣ ಘಟಕದಿಂದ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ದೊಡ್ಡ ಕಟ್ಟಡಗಳ ಬಳಕೆಗೆ ಪ್ರತ್ಯೇಕವಾದ ಪೈಪ್ ಲೈನ್ ಅಳವಡಿಸುವ ಮೂಲಕ ನೀರು ಸರಬರಾಜು ಮಾಡಲಾಗುವುದು. ಇದರಿಂದಾಗಿ ಅವರ ಅಗತ್ಯತೆಗೆ ಅನುಗುಣವಾಗಿನಿರಂತರವಾಗಿ ನೀರು ಪೂರೈಕೆ ಸಾಧ್ಯವಾಗಲಿದೆ.
ಕೊಳವೆ ಬಾವಿಯ ಮೇಲಿನ ಒತ್ತಡ ಕಡಿಮೆ:
ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಬಹುತೇಕ ಕೊಳವೆಬಾವಿ ಗಳು ಮತ್ತು ಟ್ಯಾಂಕರ್ ಗಳನ್ನು ಅವಲಂಬಿಸಲಾಗುತ್ತದೆ. ಇದರಿಂದ ಅಂತರ್ಜಲದ ಮೇಲೆ ಬಹಳಷ್ಟು ಒತ್ತಡ ಹೆಚ್ಚಾಗಿದೆ. ಸಂಸ್ಕರಿಸಿದ ನೀರನ್ನು ಬಳಸಲು ಉತ್ತೇಜನ ನೀಡುವುದರಿಂದ ಇದನ್ನು ಗಣನೀಯವಾಗಿ ಕಡಿಮೆ ಮಾಡಬಹುದಾಗಿದೆ.
ಅಪಾರ್ಟ್ ಮೆಂಟ್ ನ ಹೆಚ್ಚುವರಿ ಸಂಸ್ಕರಿಸಿದ ನೀರಿನ ಮಾರಾಟಕ್ಕೆ ಉತ್ತಮ ವೇದಿಕೆ
ಅಪಾರ್ಟ್ ಮೆಂಟ್ ಗಳ ಸಂಸ್ಕರಿಸಿದ ನೀರನ್ನು ಮಾರಾಟ ಮಾಡಕು ಈಗಾಗಲೇ ಅನುಮತಿ ನೀಡಲಾಗಿದೆ. ಇದೆ ರೀತಿ ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಮಾತ್ರ ಬಳಕೆ ಮಾಡಬೇಕು ಎಂದು ಆದೇಶಿಸಲಾಗಿದೆ. ಉತ್ಪಾದಕರು ಹಾಗೂ ಗ್ರಾಹಕರನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವುದು ನಮ್ಮ ಉದ್ದೇಶವಾಗಿದೆ. ಅಪಾರ್ಟ್ ಮೆಂಟ್ ಗಳು ತಮ್ಮ ಹೆಚ್ಚುವರಿ ನೀರನ್ನು ಸುಲಭವಾಗಿ ಮಾರಾಟ ಮಾಡಲು ಗ್ರಾಹಕರನ್ನು ಒದಗಿಸುವ ವೇದಿಕೆ ಆಗಿ ಇದು ಕಾರ್ಯವಹಿಸಲಿದೆ.ಇದರಿಂದ ಬಿ ಎ ಎಫ್ ಹಾಗೂ ಕಟ್ಟಡ ಮಾಲೀಕರಿಗೂ ಅನುಕೂಲವಾಗಲಿದೆ ಎಂದರು.
ಜಲಮಂಡಳಿ ಗೆ ಆದಾಯದ ಹೊಸ ಮೂಲ:
ಈಗಾಗಲೇ 62 ಲಕ್ಷ ಲೀಟರ್ ಸಂಸ್ಕರಿಸಿದ ನೀರಿಗೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಂಸ್ಕರಿಸಿದ ನೀರನ್ನು ಮಾರಾಟ ಮಾಡುವ ಮೂಲಕ ಜಲಮಂಡಳಿ ಗೆ ಆದಾಯವೂ ಹೆಚ್ಚಾಗಲಿದೆ. ಮಂಗಳವಾರ ದಿಂದ ಸರಬರಾಜು ಪ್ರಾರಂಭಿಸಲಾಗುವುದು.
ಮೊದಲ ಹಂತದಲ್ಲಿ 5 ಕಿ.ಮಿ ವ್ಯಾಪ್ತಿಯ ಗ್ರಾಹಕರಿಗೆ ಸಂಸ್ಕರಿಸಿದ ನೀರು ಸರಬರಾಜು
ಮೊದಲ ಹಂತದಲ್ಲಿ ಖಾಸಗಿ ಹಾಗೂ ಜಲಮಂಡಳಿ ಎಸ್ ಟಿ ಪಿ ಗಳ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪೈಪ್ ಲೈನ್ ಅಥವಾ ಟ್ಯಾಂಕರ್ ಗಳ ಮೂಲಕ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲು ಚಿಂತಿಸಲಾಗಿದೆ. ಸರಬರಾಜು ಹಾಗೂ ನೀರಿನ ವೆಚ್ಚವನ್ನು ಗ್ರಾಹಕರೇ ಭರಿಸಲಿದ್ದಾರೆ ಎಂದು ಹೇಳಿದರು.
ನೀರಿನ ಗುಣಮಟ್ಟದ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸಹಭಾಗಿತ್ವ – ಥರ್ಡ್ ಪಾರ್ಟಿ ಸರ್ಟಿಫಿಕೇಶನ್
ಸಂಸ್ಕರಿಸಿದ ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಅನುಮಾನ ಬರದೇ ಇರಲಿ ಎನ್ನುವ ಉದ್ದೇಶದಿಂದ, ಸಂಸ್ಕರಿಸಿದ ನೀರಿನ ಗುಣಮಟ್ಟ ಹಾಗೂ ಅದರ ಬಳಕೆಯ ಬಗ್ಗೆ ಇರುವ ಅನುಮಾನ ಪರಿಹರಿಸಲು ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಸಹಭಾಗಿತ್ವ ಮಾಡಿಕೊಂಡಿದ್ದೇವೆ. ಈ ಸಹಭಾಗಿತ್ವ ದಿಂದ ಸಂಸ್ಕರಿಸಿದ ನೀರಿನ ಬಗೆ ಥರ್ಡ್ ಪಾರ್ಟಿ ಸರ್ಟಿಫಿಕೇಶನ್ ಪಡೆದುಕೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಪರಿಸರ ಜಲಸ್ನೇಹಿ ಅಪ್ ಮೂಲಕ ನೋಂದಣಿ ಗೆ ಅವಕಾಶ:
ಸಂಸ್ಕರಿಸಿದ ನೀರಿನ ಬೇಡಿಕೆಗೆ ಈಗಾಗಲೇ ಮಂಡಳಿ ವತಿಯಿಂದ “ಪರಿಸರ ಜಲಸ್ನೇಹಿ” ಅಪ್ ನಿರ್ಮಿಸಲಾಗಿದೆ. ಈ ಅಪ್ ಮೂಲಕ ಗ್ರಾಹಕರು, ಕಟ್ಟಡ ನಿರ್ಮಾಣ ಕ್ಕೆ ಅಗತ್ಯವಿರುವ ಸಂಸ್ಕರಿಸಿದ ನೀರಿಗೆ ಬುಕಿಂಗ್ ಮಾಡಬಹುದಾಗಿದೆ.