ಬೆಂಗಳೂರು:ಬಿಜೆಪಿ ಕಳಂಕಿತರನ್ನು ಪಕ್ಷಕ್ಕೆ ಸೇರಿಸಿಕೊಂಡು ಶುದ್ಧೀಕರಣ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಇದು ಪ್ರಜಾಪ್ರಭುತ್ವದ ಅಣಕ. ಸ್ವಯಂ ಘೋಷಿತ ವಿಶ್ವನಾಯಕ ನರೇಂದ್ರ ಮೋದಿ ಅವರು ʼನಾ ಖಾವೂಂಗಾ, ನಾ ಖಾನೇದೂಂಗಾʼ ಎಂದು ಹೇಳುತ್ತಾ ಬಂದಿದ್ದರು. ಈಗ ಅದಕ್ಕೆ ಹೊಸ ವ್ಯಾಖ್ಯಾನ ನೀಡುವ ಕಾಲ ಬಂದಿದೆ. ʼಮೋದಿ ಅವರು ತಿನ್ನಕ್ಕೆ ಬಿಡಲ್ಲ, ನುಂಗುವವರನ್ನು ಮುಟ್ಟೊದಿಲ್ಲʼ.
2014 ರಿಂದ ಇಲ್ಲಿಯ ತನಕ ಇ.ಡಿ, ಐ.ಟಿ, ಸಿಬಿಐ ಸೇರಿದಂತೆ ಈ ರೀತಿಯ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದೆ. ಶೇ 99 ರಷ್ಟು ಪ್ರಕರಣಗಳನ್ನು ವಿರೋಧ ಪಕ್ಷ ಮತ್ತು ಅದರ ನಾಯಕರ ಮೇಲೆ ಹೂಡಲಾಗಿದೆ. ಬಿಜೆಪಿಯವರ ಮೇಲೂ ಒಂದಷ್ಟು ಪ್ರಕರಣಗಳಿವೆ ಆದರೆ ಈ ಪ್ರಕರಣಗಳು ಮುಂದಕ್ಕೂ ಹೋಗುತ್ತಿಲ್ಲ, ಹಿಂದಕ್ಕೂ ಹೋಗುತ್ತಿಲ್ಲ. ನಿಂತಲ್ಲೇ ನಿಂತಿವೆ.
ಪ್ರಸ್ತುತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಸುಮಾರು ರೂ 48 ಕೋಟಿ ರೂಪಾಯಿಗಳನ್ನು ಅಕ್ರಮ ಹಣ ವರ್ಗಾವಣೆ ಮಾಡಿರುವ ಪ್ರಕರಣ ಎದುರಿಸುತ್ತಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ಶ್ರೀರಕ್ಷೆ ನೀಡುತ್ತಿದೆ.
ಡಿಸಿಎಂ ಆದಂತಹ ಡಿ.ಕೆ.ಶಿವಕುಮಾರ್ ಅವರು ಗುಜರಾತ್ ಚುನಾವಣೆ ವೇಳೆ ಪಕ್ಷ ಉಳಿಸುವ ಕೆಲಸ ಮಾಡಿದ್ದಕ್ಕೆ ರೂ 7 ಕೋಟಿ ಮೊತ್ತದ ಯಾವುದೋ ಪ್ರಕರಣವನ್ನು ಅವರ ಮೇಲೆ ಹಾಕಲಾಯಿತು. ಬಂಧನ ಸೇರಿದಂತೆ ಮಾನಸಿಕ ಕಿರುಕುಳ ನೀಡಲಾಗಿತ್ತು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಮೇಲೆ ಸುಳ್ಳು ಪ್ರಕರಣ ಹೂಡಿ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ. ದೆಹಲಿ ಸಿಎಂ ಅವರು ಹಣ ವರ್ಗಾವಣೆಯಲ್ಲಿ ಎಲ್ಲೂ ಭಾಗಿಯಾಗಿಲ್ಲ. ಆದರೂ ಸಾಂಧರ್ಬಿಕ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಬಂಧಿಸಿರುವುದು ಖಂಡನೀಯ.
ಕೆಐಡಿಬಿಯ 360 ಎಕರೆಯ ಡಿನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿದಂತೆ 2014 ರಲ್ಲಿ ಕರ್ನಾಟಕದಲ್ಲಿ ಇ.ಡಿ ದಾಖಲಿಸಿದ ಅತಿದೊಡ್ಡ ಪ್ರಕರಣ ಇದಾಗಿದ್ದು. ಖಾಸಗಿ ಕಂಪೆನಿ ಮುಖಾಂತರ ಶೋಭಾ ಕರಂದ್ಲಾಜೆ ಅವರ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಸುಮಾರು 70 ಲಕ್ಷವನ್ನು ಶೋಭಾ ಕರಂದ್ಲಾಜೆ ಅವರ ಖಾತೆಯಿಂದ ಇ.ಡಿಯವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಈ ಪ್ರಕರಣ ಜನಪ್ರತಿನಿಧಿಗಳ ನ್ಯಾಯಲಯದಲ್ಲಿ ಇನ್ನೂ ಬಾಕಿ ಇದ್ದು ಶೋಭಾ ಅವರು 24 ನೇ ಆರೋಪಿಯ ಸ್ಥಾನದಲ್ಲಿ ಇದ್ದಾರೆ. ಅಕ್ಟೋಬರ್ 2014 ರಲ್ಲಿ ಇ.ಡಿ ವಿರುದ್ದ ಶೋಭಾ ಅವರು ಮರು ಪ್ರಕರಣ ದಾಖಲಿಸಿದ್ದು ಇದರಲ್ಲಿ ಇ.ಡಿಯು ನಾಲ್ಕನೇ ಪ್ರತಿವಾದಿಯಾಗಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಕೈ ಕೆಳಗೆ ಬರುವ ಇಲಾಖೆಯ ವಿರುದ್ದವೇ ಶೋಭಾ ಕರಂದ್ಲಾಜೆ ಅವರು ಪ್ರಕರಣ ದಾಖಲು ಮಾಡಿದ್ದಾರೆ. ಇದುವರೆಗು ಈ ಪ್ರಕರಣದಲ್ಲಿ ಏನೂ ಪ್ರಗತಿ ಆಗಿಯೇ ಇಲ್ಲ. ಈ ಪ್ರಕರಣಕ್ಕೆ ಯಾವುದೇ ತಡೆಯಾಜ್ಞೆ ದೊರೆತಿಲ್ಲ. ಶೋಭಾ ಕರಂದ್ಲಾಜೆ ಅವರ ಬಂಧನ ಆಗಿಲ್ಲ. ಅದರ ಬದಲಾಗಿ ಅವರನ್ನು ಸಚಿವ ಸ್ಥಾನದಲ್ಲಿ ಕೂರಿಸಲಾಗಿದೆ.
ವಿಶ್ವನಾಯಕ ಮೋದಿ ಅವರೇ ಶೋಭಾ ಕರಂದ್ಲಾಜೆ ಅವರಿಗೆ ನೀಡಿರುವಂತಹ ವಿನಾಯಿತಿಯನ್ನು ಬೇರೆಯವರಿಗೂ ನೀಡಿದ್ದೀರಾ? ಯಾವ ಕಾರಣಕ್ಕೆ ಇವರನ್ನು ಮಂತ್ರಿ ಮಾಡಿದ್ದೀರಿ? ಉಡುಪಿ- ಚಿಕ್ಕಮಗಳೂರಿನಿಂದ ಬೆಂಗಳೂರು ಉತ್ತರಕ್ಕೆ ಏಕೆ ತಂದು ಇವರನ್ನು ಹಾಕಿದ್ದೀರಾ ಎನ್ನುವುದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಬೇಕು. ಕಳೆದ ವಾರ ಶೋಭಾ ಕರಂದ್ಲಾಜೆ ಅವರ ಮೇಲೆ 3 ಸಾವಿರ ಪುಟಗಳಷ್ಟು ದೊಡ್ಡದಾದ ಚಾರ್ಜ್ ಶೀಟ್ಅನ್ನು ಹಾಕಲಾಗಿದೆ.
ಅರವಿಂದ ಕೇಜ್ರಿವಾಲ್ ಅವರ ಸರ್ಕಾರ ತೆಗೆಯಿರಿ ಎಂದು ದೂರು ನೀಡಲಾಗುತ್ತದೆ. ಅದೇ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಶೋಭಾ ಕರಂದ್ಲಾಜೆ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ. ಶೋಭಾ ಅವರ ಮೇಲೆ ನಾವು ಆರೋಪ ಮಾಡುತ್ತಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ಸಂಸ್ಥೆಯೇ ಅವರ ಮೇಲೆ ಪ್ರಕರಣ ದಾಖಲಿಸಿದೆ.
ಬಿಜೆಪಿ ಕಚೇರಿ ಆವರಣದಲ್ಲೇ ಇ.ಡಿ, ಸಿಬಿಐಗಳಿಗೆ ಜಾಗ ನೀಡಿ
ಕೇಂದ್ರಿಯ ತನಿಖಾ ಸಂಸ್ಥೆಗಳ ಕಟ್ಟಡಗಳಿಗೆ ಬಾಡಿಗೆ ಕಟ್ಟುವ ಬದಲು ಬಿಜೆಪಿ ಕಚೇರಿಯಲ್ಲೇ ಅವರಿಗೆ ಜಾಗ ಕೊಡಿ. ಕಳಂಕಿತರನ್ನು ರಕ್ಷಿಸಲು ನಿಮಗೆ ಅನುಕೂಲವಾಗುತ್ತದೆ. ಇಂತಹ ಎಲ್ಲಾ ಪ್ರಕರಣಗಳನ್ನು ಇಥ್ಯರ್ತ ಮಾಡಲು ನಿಮಗೂ ಅನುಕೂಲವಾಗುತ್ತದೆ. ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವ ಬಿಜೆಪಿ ಅವರೇ ನಿಮಗೆ ನೈತಿಕತೆ ಇದೆಯೇ?
2005 ರಿಂದ ಇಲ್ಲಿಯತನಕ 5 ಸಾವಿರ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಚಾರ್ಜ್ ಶೀಟ್ ಹಾಕಿರುವುದು 1,116 ಪ್ರಕರಣಗಳ ಮೇಲೆ ಮಾತ್ರ. ತನಿಖೆ ಮುಗಿಸಿರುವ ಪ್ರಕರಣಗಳು ಕೇವಲ 26. ಯಾವ ಕಾರಣಕ್ಕೆ ಈ ತಾರತಮ್ಯ ಮಾಡುತ್ತಿದ್ದೀರಿ ಮೋದಿ ಅವರೇ? ನೀವು ಮತ್ತು ನಿಮ್ಮ ಸರ್ಕಾರ ಯಾರನ್ನು ಕಾಪಾಡುತ್ತಿದೆ ಹೇಳುವಿರಾ?
ಈ ದೇಶದಲ್ಲಿ ಸುಪ್ರೀಂ ಕೋರ್ಟ್ ಇರಲಿಲ್ಲ ಎಂದಿದ್ದರೇ ಈ ದೇಶದ ಅತಿದೊಡ್ಡ ಚುನಾವಣ ಬಾಂಡ್ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಮಾನ್ಯ ಪ್ರಧಾನಿ ಅವರೇ ಇದಕ್ಕೆ ಉತ್ತರ ಕೊಡುವಷ್ಟು ವ್ಯವದಾನ ನಿಮ್ಮಲ್ಲಿ ಇದೆಯೇ? ಯಾವ ಕಾರಣಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಯಾವ ಆಧಾರದ ಮೇಲೆ ಅಭ್ಯರ್ಥಿಗಳನ್ನಾಗಿ ಮಾಡಿದ್ದೀರಿ ಎಂದು ಬಿಜೆಪಿ ನಾಯಕರು ಉತ್ತರಿಸಬೇಕಾಗಿದೆ.
ಕೇಂದ್ರ ಸಚಿವರನ್ನಾಗಿರುವ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಸಾರ್ವಜನಿಕರೊಬ್ಬರು 27.03.24 ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದರ ಮೇಲೆ ,ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವುದು ಬಿಜೆಪಿಗೆ ಅಂಟಿರುವ ಕಳಂಕ.
ಈ ವಿಚಾರವಾಗಿ ಪ್ರಧಾನಿಗಳು ಸಾರ್ವಜನಿಕವಾಗಿ ಉತ್ತರವನ್ನು ಕೊಡಬೇಕು. ಇಲ್ಲದಿದ್ದರೇ ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ. ಮತ್ತು ಸಂಪುಟದಿಂದ ತೆಗದುಹಾಕಬೇಕು.
ಎಐಸಿಸಿ ವಕ್ತಾರರು, ಬೆಂಗಳೂರು ಉತ್ತರ ಲೋಕಸಭಾ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜೀವ್ ಗೌಡ ಅವರು ಮಾತನಾಡಿ,ಬಿಜೆಪಿಗೆ ಯಾವುದೇ ರಾಜಕೀಯ ನಿಲುವು ಇಲ್ಲ. ಅವರ ಉದ್ದೇಶ ಯಾರೇ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ವಾಷಿಂಗ್ ಮೆಷಿನ್ ಅಲ್ಲಿ ಪವಿತ್ರವಾದ ನೀರನ್ನು ಹಾಲಿ ಅವರನ್ನು ಬಂಧನ ಮುಕ್ತ, ಕಳಂಕ ಮುಕ್ತರನ್ನಾಗಿ ಮಾಡುವುದೇ ಬಿಜೆಪಿ ಉದ್ದೇಶ.
ಬಿಜೆಪಿ ಭ್ರಷ್ಟಾಚಾರದ ಜೊತೆಗೆ ಸಂಬಂಧ ಕುದುರಿಸಿದೆ. ಇದು ನಮ್ಮ ಪ್ರಜಾಪ್ರಭುತ್ವವನ್ನೇ ಹಾಳು ಮಾಡಲು ಹೊರಟಿದೆ. ಆರೋಪಿ ಸಂಖ್ಯೆ 24 ಹೊಂದಿರುವ ಶೋಭಕ್ಕ ಅವರು ನನ್ನ ಎದುರಾಳಿ. ಇವರಿಗೆ ಚುನಾವಣೆಯನ್ನು ಎದುರಿಸುವ ನೈತಿಕತೆ ಇಲ್ಲ. 2019 ರ ಲೋಕಸಭಾ ಚುನಾವಣೆ ವೇಳೆ ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಅಫಿಡವಿಟ್ ನಲ್ಲಿ ದಾರಿ ತಪ್ಪಿಸುವ ಮತ್ತು ಸುಳ್ಳು ಮಾಹಿತಿಗಳನ್ನೇ ಹೇಳಿಕೊಂಡಿದ್ದಾರೆ.
ಭ್ರಷ್ಟಾಚಾರವೇ ಇಲ್ಲ ಎನ್ನುವ ಮೋದಿ ಅವರೇ ನಿಮ್ಮ ಪಕ್ಕದಲ್ಲೇ ಇರುವ ಶೋಭಾ ಅವರು ದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕ್ರಿಮಿನಲ್ಗಳು ಈ ದೇಶದ ಆಡಳಿತದ ಭಾಗವಾಗುತ್ತಿರುವುದು ವಿಷಾಧದ ಸಂಗತಿ. ಸ್ವಪಕ್ಷೀಯರ ಮೇಲೆ ಯಾವುದೇ ಕ್ರಮವಿಲ್ಲ, ವಿಪಕ್ಷದವರ ಮೇಲೆ ಮಾತ್ರ ನಿಮ್ಮ ಹೋರಾಟವೇ? ಬಿಜೆಪಿಯವರು ನೂರಾರು ದೊಡ್ಡ ಹಗರಣಗಳನ್ನು ಹೊಂದಿದ್ದಾರೆ. ಮೋದಿ ಅವರು ಭ್ರಷ್ಟಚಾರದ ಬಗ್ಗೆ ಮಾತನಾಡಿದರೆ ನಾವೆಲ್ಲಾ ದೊಡ್ಡದಾಗಿ ನಗಬೇಕು ಮತ್ತು ಸಾಕು ನಿಮ್ಮ ಬೂಟಾಟಿಕೆ ಎಂದು ಛೀಮಾರಿ ಹಾಕಬೇಕು. ಇವರು ಹೇಳಿದ್ದನ್ನೇ ಕಳೆದ 10 ವರ್ಷಗಳಿಂದ ಕೇಳಿ, ಕೇಳಿ ಸಾಕಾಲಗಿದೆ.
ನಿಮಗೆ ನೈತಿಕತೆ ಇದ್ದರೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ನಾಯಕರ ಮೇಲೆ ಇರುವ ಪ್ರಕರಣಗಳನ್ನು ಸಹ ತನಿಖೆಗೆ ಒಳಪಡಿಸಿ. ಕಿಂಚಿತ್ತಾದರೂ ನಿಮ್ಮಲ್ಲಿ ನೈತಿಕತೆ ಉಳಿದಿದೆ ಎಂದು ನಾವು ನಂಬುತ್ತೇವೆ.