ಬೆಂಗಳೂರು: ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವಂತಹ ಸರಕಾರಿ ಕಚೇರಿಗಳು ಹಾಗೂ ನಗರದ ಪ್ರಮುಖ ಸಂಸ್ಥೆಗಳಲ್ಲಿನ ನಲ್ಲಿಗಳಿಗೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಏರಿಯೇಟರ್ ಅಳವಡಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ಮಾಲ್ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಅಪಾರ್ಟ್ಮೆಂಟ್ಗಳಲ್ಲಿ, ಸರಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೇಲ್ಗಳಲ್ಲಿ, ರೆಸ್ಟೋರೆಂಟ್ಗಳಲ್ಲಿ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಪ್ಲೋ ರಿಸ್ಟ್ರಿಕ್ಟರ್/ಏರಿಯೇಟರ್ ಅಳವಡಿಸುವುದನ್ನ ಕಡ್ಡಾಯಗೊಳಿಸಿ ಜಲಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಈ ನಿಯಮವನ್ನು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾಗಬೇಕು ಎನ್ನುವ ದೃಷ್ಟಿಯಿಂದ ಮೊದಲ ಹಂತದಲ್ಲಿ ಬೆಂಗಳೂರು ಜಲಮಂಡಳಿಯ ಎಲ್ಲಾ ಕಚೇರಿಗಳಲ್ಲಿ ಏರಿಯೇಟರ್ ಅಳವಡಿಸಲಾಗಿತ್ತು. ಈಗ ಎರಡನೇ ಹಂತದಲ್ಲಿ ನಗರದ ಪ್ರಮುಖ ಸರಕಾರಿ ಕಚೇರಿಗಳಾದ ಬಿಡಿಎ, ಬಿಎಸ್ಎನ್ಎಲ್, ಇಂದಿರಾ ಕ್ಯಾಂಟೀನ್, ಇನ್ ಕಮ್ ಟ್ಯಾಕ್ಸ್, ಬಿಬಿಎಂಪಿ ಸರಕಾರಿ ಶಾಲೆಗಳು, ಇಸ್ರೋ, ಬೆಗ್ಗರ್ಸ್ ಕಾಲೋನಿ, ಹೆಚ್ ಎ ಎಲ್, ಬೆಮೆಲ್, ಸಿಲ್ಕ್ ಬೋರ್ಡ್, ಕೇಂದ್ರೀಯ ಸದನ್, ಡಿಫೆನ್ಸ್, ವಿವಿ ಟವರ್, ಐಎಎಸ್ ಅಫಿಸರ್ಸ್ ಅಸೋಸಿಯೇಷನ್, ಆರ್ಟಿಓ, ಡಿಸಿ ಆಫೀಸ್, ಪೊಲೀಸ್ ಸ್ಟೇಷನ್, ಜಯದೇವ ಹಾಸ್ಪಿಟಲ್, ಸೆಂಟ್ರಲ್ ಫಾರ್ಮಸಿ, ಐಟಿಐ ಇನ್ಸಿಟ್ಯೂಟ್, ಸೆಂಟ್ರಲ್ ಫಾರ್ಮಸಿ, ಲೋಕಾಯುಕ್ತ ನಿವಾಸ, ಕೆಪಿಟಿಸಿಲ್, ಬಿಬಿಎಂಪಿ, ಕೆಎಂಎಫ್, ಬೆಸ್ಕಾಂ, ಪಿ&ಟಿ ಕ್ಯಾಟರ್ಸ್ ಮತ್ತು ಗ್ಯಾರಿಸನ್ ಇಂಜಿನೀಯರಿಂಗ್ ಕಟ್ಟಡಗಳಲ್ಲಿ ಜಲಮಂಡಳಿಯ ವತಿಯಿಂದಲೇ 4,000 ಏರಿಯೇಟರ್/ಫ್ಲೋ ರಿಸ್ಟ್ರಿಕ್ಟರ್ ಅಳವಡಿಸಲಾಗಿದೆ.
ಸಾರ್ವಜನಿಕರಿಗೆ ಸರಕಾರಿ ಕಚೇರಿಗಳು ಮಾದರಿಯಾಗಬೇಕು, ಯಾವುದೇ ಹೊಸ ನಿಯಮಗಳನ್ನ ನಾವು ಕಡ್ಡಾಯವಾಗಿ ಪಾಲಿಸಿದಲ್ಲಿ ಜನರ ತಮ್ಮಲ್ಲಿ ಅಳವಡಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ತೋರುತ್ತಾರೆ. ಈ ಹಿನ್ನಲೆಯಲ್ಲಿ ಸುತ್ತೋಲೆ ಹೊರಡಿಸುವ ಮುನ್ನವೇ ನಮ್ಮ ಜಲಮಂಡಳಿ ಕಚೇರಿಗಳಲ್ಲಿ ಈ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ.
ಈಗ ನಮ್ಮ ಸಿಬ್ಬಂದಿಗಳಿಗೆ ಸರಕಾರಿ ಕಚೇರಿಗಳಲ್ಲಿ ಏರಿಯೇಟರ್/ಫ್ಲೋ ರಿಸ್ಟ್ರಿಕ್ಟರ್ ಅಳವಡಿಸುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಇಸ್ರೋ, ಬಿಬಿಎಂಪಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಇದನ್ನು ಅಳವಡಿಸಲಾಗಿದ್ದು, ಎಲ್ಲಾ ಕಚೇರಿಗಳ ನಲ್ಲಿಗಳಿಗೂ ಇದನ್ನ ಅಳವಡಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಪಾರದರ್ಶಕವಾಗಿ ಗ್ರಾಹಕರಿಂದಲೇ ತಗೆದುಕೊಳ್ಳಲಾಗುವುದು ಎಂದು ತಿಳಿಸಿದರು.