ಬೆಂಗಳೂರು: ಕಾರ್ಯಕರ್ತರು ವ್ಯಕ್ತಿ ಪೂಜೆ ಮಾಡುವುದಕ್ಕಿಂತ ಪಕ್ಷದ ಪೂಜೆ ಮಾಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡಬೇಕೆಂದು ಮತದಾರ ಬಾಂಧವರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮನವಿ ಮಾಡಿದರು.
ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಜಯಂತಿ, ಪಕ್ಷದ ನೂತನ ಕಾರ್ಯಾಧ್ಯಕ್ಷರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರ ಪದಗ್ರಹಣ, ಪಕ್ಷ ಸೇರ್ಪಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾವು ಸೇರಿದ್ದೇವೆ.ನಾನು, ವಿನಯ್ ಕುಮಾರ್ ಸೋರಕೆ ಸೇರಿದಂತೆ ಇನ್ನು ಕೆಲವು ನಾಯಕರು ವಿದ್ಯಾರ್ಥಿ ನಾಯಕತ್ವದಿಂದ ಬಂದು, ಯೂತ್ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದೆವು. ಆಗ ದೊಡ್ಡ ಸಮಾವೇಶಕ್ಕಾಗಿ ದೆಹಲಿಗೆ ತೆರಳಿದ್ದೆವು. ಕಾರ್ಯಕ್ರಮದ ಮರುದಿನ ಪ್ರಧಾನಮಂತ್ರಿಗಳ ಜತೆ ಫೋಟೋ ತೆಗೆಸಿಕೊಳ್ಳಲು ಸಮಯ ನಿಗದಿ ಮಾಡಲಾಗಿತ್ತು. ಮರುದಿನ ನಾವು ಪ್ರಧಾನಿ ಅವರ ನಿವಾಸಕ್ಕೆ ಹೋಗಿದ್ದು, ನಾವು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೆವು. ಒಂದೊಂದೆ ರಾಜ್ಯದ ತಂಡಗಳ ಫೋಟೋ ನಡೆಯುತ್ತಿತ್ತು. ಇನ್ನೇನು ನಮ್ಮ ಸರದಿ ಬರುವ ವೇಳೆಗೆ ಕಾರ್ಯಕ್ರಮ ಏಕಾಏಕಿ ನಿಂತುಹೋಯಿತು. ಕಾರಣ, ಆಗ ಹಿರಿಯ ಮುತ್ಸದಿಯೊಬ್ಬರು ಪ್ರಧಾನಿ ಅವರ ಮನೆ ಬಾಗಿಲ ಮುಂದೆ ಕಾರಿನಿಂದ ಇಳಿದರು. ಆಗ ಭದ್ರತಾ ಸಿಬ್ಬಂದಿ ಓಡಿ ಹೋದರು. ಅವರು ಬಂದಿದ್ದಾರೆ ಎಂದು ತಿಳಿದ ರಾಜೀವ್ ಗಾಂಧಿ ತಕ್ಷಣವೇ ಓಡಿ ಬಂದು ಅವರನ್ನು ಮನೆಯೊಳಗೆ ಕರೆದುಕೊಂಡು ಹೋದರು.
ರಾಜೀವ್ ಗಾಂಧಿ ಅವರು ವಾಪಸ್ ಬಂದ ನಂತರ ಆ ಹಿರಿಯ ವ್ಯಕ್ತಿ ಯಾರು ಎಂದು ಕೇಳಿದೆವು. ಆಗ ರಾಜೀವ್ ಗಾಂಧಿ ಅವರು ಈಗ ಬಂದವರು ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್. ಅವರು ನಮ್ಮ ತಾತ ಹಾಗೂ ತಾಯಿಯ ಜೊತೆ ಕೆಲಸ ಮಾಡಿದ್ದವರು. ಕೆಲವು ಭಿನ್ನಾಭಿಪ್ರಾಯದಿಂದ ಅವರು ಪಕ್ಷ ತ್ಯಜಿಸಿದ್ದರು. ಕಾರಣಾಂತರಗಳಿಂದ ಇಂದಿರಾ ಗಾಂಧಿ ಅವರ ಜತೆ ಮನಸ್ತಾಪವಾಗಿ ಪಕ್ಷ ಬಿಟ್ಟಿದ್ದೆ. ನಾನು ಸಾಯುವ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಾಂಗ್ರೆಸ್ಸಿಗನಾಗಿ ಸಾಯಬೇಕು ಎಂಬ ಕಾರಣದಿಂದ ಮತ್ತೆ ಪಕ್ಷ ಸೇರಲು ಬಯಸಿರುವುದಾಗಿ ತಿಳಿಸಿದರು ಎಂದು ನಡೆದ ಘಟನೆಯನ್ನು ರಾಜೀವ್ ಗಾಂಧಿ ಹೇಳಿದರು.
ಈ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪುತ್ರಿ ಮೀರಾ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಲೋಕಸಭೆ ಸ್ಪೀಕರ್ ಆಗಿ ಮಾಡಿದೆ. ಬಿಹಾರ್ ನಲ್ಲಿ ಅವರ ಪುತ್ರನಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಅವರ ಕುಟುಂಬ ನಮ್ಮ ಪಕ್ಷಕ್ಕೆ ಅನೇಕ ತ್ಯಾಗ ಮಾಡಿದೆ. 31 ವರ್ಷಗಳ ಕಾಲ ಅವರು ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನೆಹರೂ ಅವರ ಕಾಲದಿಂದ ಇಂದಿರಾ ಗಾಂಧಿ ಕಾಲದವರೆಗೂ ಕೆಲಸ ಮಾಡಿದ್ದರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅವರು ಪಕ್ಷ ತೊರೆದಿದ್ದರು. ನಂತರ ಅವರು ಮತ್ತೆ ಕಾಂಗ್ರೆಸ್ ಸೇರಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬಾಬು ಜಗಜೀವನ್ ರಾಮ್ ಅವರು ಪಕ್ಷದಲ್ಲಿ ನಿರ್ವಹಿಸದ ಜವಾಬ್ದಾರಿ ಮತ್ತೊಂದಿಲ್ಲ. ಅಂತಹ ನಾಯಕನ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ.
ಕಳೆದ ನಾಲ್ಕು ವರ್ಷಗಳಿಂದ ಪಕ್ಷದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಚಂದ್ರಪ್ಪ ಹಾಗೂ ನಮ್ಮೊಂದಿಗೆ ಇಲ್ಲದ ಧೃವನಾರಾಯಣ ಅವರ ಸಂಘಟನೆಯನ್ನು ನಾವು ಸ್ಮರಿಸಬೇಕು. ಕೋವಿಡ್ ಸಂದರ್ಭದಲ್ಲಿ ಹಾಗೂ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಧೃವನಾರಾಯಣ ಅವರ ತಾಳ್ಮೆ ಹಾಗೂ ಶ್ರಮ ಪ್ರಶಂಸನೀಯ. ಸಲೀಂ ಅಹ್ಮದ್ ಅವರು ಶಿಸ್ತಿನ ಸಿಪಾಯಿಯಂತೆ ಕಾಂಗ್ರೆಸ್ ಪಕ್ಷದ ಸೇವೆ ಮಾಡಿದ್ದಾರೆ. ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಅವರು ಸಮರ್ಥವಾಗಿ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರು ಈಗ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.
ಸಚಿವ ಎಂ.ಬಿ ಪಾಟೀಲ್ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ನಾನು, ಸಿಎಂ ಸೇರಿದಂತೆ ಅನೇಕರು ಪ್ರಚಾರ ಸಮಿತಿಯಲ್ಲಿ ಕೆಲಸ ಮಾಡಿದ್ದೇವೆ. ನಾವೆಲ್ಲರೂ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ರಾಜೀವ್ ಗಾಂಧಿ ಅವರು ನಮ್ಮನ್ನು ಗುರುತಿಸಿ ನಮಗೆ ಪಕ್ಷದ ಟಿಕೆಟ್ ನೀಡಿದ್ದರು. ನಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಎನ್ಎಸ್ ಯುಐ ಟಿಕೆಟ್ ನೀಡದಿದ್ದರೂ ಹೇಗೋ ಚುನಾವಣೆ ಮಾಡಿ ಗೆದ್ದುಕೊಂಡು ಬಂದಿದ್ದೇವೆ. ನಿಮ್ಮೆಲ್ಲರ ಸಹಕಾರದಿಂದ ಈ ಮಟ್ಟದವರೆಗೆ ಬಂದಿದ್ದೇವೆ.
ಯಾರು ಶ್ರಮಪಡುತ್ತಾರೋ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಯಾರು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ನಲ್ಲಿ ಸದಸ್ಯತ್ವ ಪಡೆಯುತ್ತಾರೋ ಅವರು ಅಷ್ಟು ಸುಲಭವಾಗಿ ಪಕ್ಷವನ್ನು ತೊರೆಯುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಹೀಗಾಗಿ ಈ ಸಂಘಟನೆಗಳ ಸದಸ್ಯತ್ವ ಪಡೆಯುವವರಿಗೆ ದೊಡ್ಡ ಅಡಿಪಾಯ ಸಿಗುತ್ತದೆ. 73, 74ನೇ ತಿದ್ದುಪಡಿ ವೇಳೆ ನಾನು ರಾಜೀವ್ ಗಾಂಧಿ ಅವರನ್ನು ಕೇಳಿದಾಗ, ಇದು ಸ್ಥಳೀಯ ಮಟ್ಟದಲ್ಲಿ ಯುವ ನಾಯಕರನ್ನು ಹುಟ್ಟುಹಾಕಲಿದೆ ಎಂದು ಹೇಳಿದ್ದರು. ನಾಯಕರನ್ನು ಹುಟ್ಟುಹಾಕುವವರೇ ನಿಜವಾದ ನಾಯಕ. ನಿಮ್ಮ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ.
ಪಕ್ಷದ ನೂತನ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆ ಹಾಗೂ ಜವಾಬ್ದಾರಿ ಪ್ರದರ್ಶಿಸಬೇಕು. ನಿಮಗೆ ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಚುನಾವಣೆ ನಂತರ ನೀವು ಮಾಜಿಯಾಗುತ್ತೀರಿ ಎಂಬುದು ನಿಮ್ಮ ತಲೆಯಲ್ಲಿ ಇರಲಿ. ನೀವು ಶ್ರಮ ಪಟ್ಟರೆ ಮಾತ್ರ ನಿಮ್ಮ ಜವಾಬ್ದಾರಿ ಮುಂದುವರಿಯುತ್ತದೆ. ಇಲ್ಲದಿದ್ದರೆ ಚುನಾವಣೆ ನಂತರ ಈ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುವುದು. ನೀವು ಅಲ್ಲಿ ಸಹಕಾರ ನೀಡಿ ಕೆಲಸ ಮಾಡಬೇಕೇ ಹೊರತು ಅಲ್ಲಿ ಲೀಡರ್ ಗಿರಿ ತೋರಿಸಬಾರದು. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ನೀಡಿದ್ದು, ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಈ ಕೈ ಗಟ್ಟಿ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ವರ್ಷಕ್ಕೆ 52 ಸಾವಿರ ಕೋಟಿ ಹಣ ಮೀಸಲಿಟ್ಟಿದೆ. ನಮ್ಮ ಯೋಜನೆಗಳು 1.56 ಕೋಟಿ ಕುಟುಂಬಗಳನ್ನು ತಲುಪುತ್ತಿವೆ. ಇನ್ನು ಎಐಸಿಸಿ ಐದು ಗ್ಯಾರಂಟಿಯನ್ನು ಘೋಷಣೆ ಮಾಡಿದ್ದು, ಗೃಹಲಕ್ಷ್ಮಿ ಯೋಜನೆಯಂತೆ ಮಹಾಲಕ್ಷ್ಮಿ ಘೋಷಿಸಿದ್ದು, ಈ ಯೋಜನೆಯಲ್ಲಿ ವರ್ಷಕ್ಕೆ ಬಡ ಕುಟುಂಬದ ಮಹಿಳೆಯೊಬ್ಬರಿಗೆ ವಾರ್ಷಿಕ 1 ಲಕ್ಷ ನೀಡಲಾಗುವುದು. ಸಾಲಮನ್ನಾ ಪ್ರಾಧಿಕಾರ ರಚನೆ, ಬೆಂಬಲ ಬೆಲೆ, ಜಾತಿ ಗಣತಿ, ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿದ್ದಾರೆ. ಕರ್ನಾಟಕ ಹಾಗು ತೆಲಂಗಾಣದಲ್ಲಿ ಜಾರಿ ಮಾಡಿರುವಂತೆ ರಾಷ್ಟ್ರಮಟ್ಟದಲ್ಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಈ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿದ್ದೇವೆ.
ಆರು ಬಾರಿ ಶಾಸಕರಾಗಿರುವ ತನ್ವೀರ್ ಸೇಠ್ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿರುವುದು ಹೆಮ್ಮೆಯ ವಿಚಾರ. ಜಿ.ಸಿ ಚಂದ್ರಶೇಖರ್ ಅವರು ವಿದ್ಯಾರ್ಥಿ ನಾಯಕತ್ವದಿಂದ ರಾಜ್ಯಸಭೆಗೆ ಪ್ರವೇಶ ಮಾಡಿದ್ದು, ವಿನಯ್ ಕುಲಕರ್ಣಿ ಅವರು ಯುವ ನಾಯಕತ್ವದಿಂದ ಮಾಜಿ ಸಚಿವರಾಗಿದ್ದು, ಮಂಜುನಾಥ ಭಂಡಾರಿ ಅವರು ವಿದ್ಯಾರ್ಥಿ ನಾಯಕರಾಗಿ ಶಾಸಕರಾಗಿದ್ದು, ಇವರ ಜತೆಗೆ ವಸಂತ ಕುಮಾರ್ ಅವರು ಕೂಡ ಯುವ ನಾಯಕತ್ವದಿಂದ ಬೆಳೆದು ಬಂದಿದ್ದು, ಇವರುಗಳು ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಪ್ರಚಾರಸಮಿತಿ ಅಧ್ಯಕ್ಷರಾಗಿ ವಿನಯ್ ಕುಮಾರ್ ಸೊರಕೆ ಅವರು ಆಯ್ಕೆಯಾಗಿದ್ದು, ಇವು ಪವಿತ್ರ ಕೆಲಸವಾಗಿದ್ದು, ನಿಮ್ಮ ಅವಧಿಯಲ್ಲಿ ನೀವು ಸಾಕ್ಷಿಗುಡ್ಡೆ ಬಿಟ್ಟು ಹೋಗಬೇಕು.
ಇನ್ನು ತುಮಕೂರಿನ ಜೆಡಿಎಸ್ ಪಕ್ಷದಿಂದ ಗೋವಿಂದರಾಜು, ಪ್ರೇಮಾ ಮಹಲಿಂಗಪ್ಪ, ತುಮಕೂರು ತಾಲೂಕು ಪಂಚಾಯ್ತಿ ಸದಸ್ಯರಾಗಿದ್ದ ಬೋರೇಗೌಡರು, ಆರ್.ಶಂಕರ್ ಹಾಗೂ ಅವರ ತಂಡ, ಸಿ.ಎಂ ಇಬ್ರಾಯಿಂ ಅವರ ಸುಪುತ್ರ ಸಿ.ಎಂ ಫಯಾಸ್ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಚಾರ.
*ಪದಗ್ರಹಣ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು ಮತ್ತು ನೂತನ ಕಾರ್ಯಾಧ್ಯಕ್ಷರ ಮಾತುಗಳು*
*ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ*
ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆ ಮೂಲಕ ರಾಜಕೀಯ ಚಟುವಟಿಕೆಗಳಿಗೆ ಬಂದವನು ನಾನು. ವಿದ್ಯಾರ್ಥಿ ನಾಯಕರಾಗಿದ್ದ ನಾನು, ಡಿ.ಕೆ.ಶಿವಕುಮಾರ್, ಎಸ್.ಎಂ.ನಾಗರಾಜ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು. ಅಂದು ರಾಜೀವ್ ಗಾಂಧಿ ಅವರು ನನ್ನ ಕ್ಷೇತ್ರ ಪುತ್ತೂರಿನಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದು ನನ್ನ ಅದೃಷ್ಟ.
ಅಖಿಲ ಭಾರತ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿದ್ದ ಕಾರಣ ಅನೇಕ ಹಿರಿಯ ನಾಯಕರ ಒಡನಾಟ ನನಗೆ ದೊರೆಯಿತು. ಕೆ.ಎಚ್.ಪಾಟೀಲ್, ಆಸ್ಕರ್ ಫರ್ನಾಂಡಿಸ್ ಸೇರಿದಂತೆ ಅನೇಕ ನಾಯಕರ ಜೊತೆ ಕೆಲಸ ಮಾಡಲು ನನಗೆ ಅವಕಾಶ ದೊರೆಯಿತು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ದ. ಅನೇಕ ಹಿರಿಯ ನಾಯಕರಿಗೆ ಸಿಕ್ಕಂತಹ ಅವಕಾಶ ನನಗೆ ದೊರೆತಿದೆ. ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದೇವೆ.
ಈ ಬಾರಿಯ ಲೋಕಸಭಾ ಚುನಾವಣೆ ಅತ್ಯಂತ ಪ್ರಮುಖವಾದುದು. ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಲಾಗಿದೆ. ಕಾಂಗ್ರೆಸ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಐಟಿ, ಇಡಿ, ಸಿಬಿಐ ಮುಖಾಂತರ ವಿರೋಧ ಪಕ್ಷಗಳನ್ನು ಮಟ್ಟ ಹಾಕುವ ಕೆಲಸ ಮಾಡಲಾಗುತ್ತಿದೆ. ಚುನಾವಣಾ ಆಯೋಗ ಪ್ರಧಾನಿಗಳಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ತಯಾರಿಸಿದೆ. ಸಂವಿಧಾನವನ್ನು ಬದಲಾಯಿಸಲು ಹೊರಟಿದೆ ಬಿಜೆಪಿ. ನಾವು ಸಂಕಷ್ಟದ ಕಾಲದಲ್ಲಿ ಇದ್ದು ಒಟ್ಟಾಗಿ ಹೋರಾಡ ಬೇಕಾಗಿದೆ.
ಕರ್ನಾಟಕದಲ್ಲಿ 10 ಸ್ಥಾನಗಳನ್ನು ಬಿಜೆಪಿ ಗೆಲ್ಲುವುದಿಲ್ಲ ಎಂದು ಗುಪ್ತಚರ ಇಲಾಖೆ ಮೋದಿಯವರಿಗೆ ಮಾಹಿತಿ ನೀಡಿದೆ. ಬಿಜೆಪಿಯ ಅಧ್ಯಕ್ಷನೊಬ್ಬ ಹೇಳಿದ್ದ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದರೆ ತಲೆ ಬೋಳಿಸಿಕೊಂಡು ವಿಧಾನಸೌಧದ ಬಳಿ ಕುಳಿತುಕೊಳ್ಳುತ್ತೇನೆ ಎಂದು. ನಮ್ಮ ಸರ್ಕಾರ ಕೇವಲ 6 ತಿಂಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದು ಕ್ರಾಂತಿಕಾರಿ ಬದಲಾವಣೆ ತಂದಿದೆ.
*ಕಾರ್ಯಧ್ಯಕ್ಷರಾದ ತನ್ವೀರ್ ಸೇಠ್*
ಯುದ್ಧದ ಸಂದರ್ಭದಲ್ಲಿ ನಾವಿದ್ದೇವೆ. ಇಂತಹ ವೇಳೆಯಲ್ಲಿ ನಮಗೆ ನೀಡಿರುವ ಜವಾಬ್ದಾರಿ ನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಮತ ಕೇಳುವಾಗ ಯಾವುದೇ ಮುಜುಗರ ಬೇಡ. ನಾವು ಪ್ರತಿ ಮನೆ ತಲುಪಿದ್ದೇವೆ. ಆದರೆ ಮನಗಳನ್ನು ತಲುಪಬೇಕು. ನನ್ನ ಬೂತು, ನಾನೇ ಅಭ್ಯರ್ಥಿ ಎನ್ನುವ ಘೋಷಣೆಯೊಂದಿಗೆ ನಾವೆಲ್ಲಾ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಮತಗಳನ್ನು ತರಬೇಕು.
ರಾಜಕೀಯ ಹಿನ್ನೆಲೆ ಇರುವ ಕುಟುಂಬದಿಂದ ಬಂದರೂ ವಿದ್ಯಾರ್ಥಿ ನಾಯಕನಾಗಿ ಬೆಳೆದು 6 ಬಾರಿ ಶಾಸಕನಾಗಿ, ಮಂತ್ರಿಯಾಗಿ ಸೇವೆ ಸಲ್ಲಿಸಿದ್ದೇನೆ. ಚುನಾವಣೆ ಇರುವ ಕಾರಣ ನಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಪಕ್ಷದ ಗೆಲುವಿಗೆ ಹೋರಾಡೋಣ.
*ಕಾರ್ಯಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್*
ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾಲ ನನಗೆ ಪಕ್ಷಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದರು. 8 ವರ್ಷಗಳ ಕಾಲ ಅಧ್ಯಕ್ಷರಾಗಿ ಪಕ್ಷವನ್ನು ಎರಡು ಬಾರಿ ಅಧಿಕಾರಕ್ಕೆ ತಂದವರು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 15ಕ್ಕೂ ಹೆಚ್ಚು ಬಾರಿ ಭೇಟಿ ನೀಡುವಂತೆ ಹೇಳಿ ಚುರುಕು ಮುಟ್ಟಿಸಿದವರು.
ಚಂದ್ರಶೇಖರ್ ಜಾತಿಯಲ್ಲಿ ಒಕ್ಕಲಿಗ ಅವನನ್ನು ಏಕೆ ಮಾಡಿದ್ದೀರಿ ಎಂದು ಅನೇಕ ಜನ ಕೇಳಿದರು. ಜಾತಿ ಯಾವುದಾದರೆ ಏನು ಪ್ರತಿಭೆ ಮುಖ್ಯ ಎಂದು ನನ್ನನ್ನು ಗುರುತಿಸಿದವರು. ಜಾತ್ಯಾತೀತ ತತ್ವಕ್ಕೆ ಕಾಂಗ್ರೆಸ್ ಎಂದಿಗೂ ದ್ರೋಹ ಬಗೆದಿಲ್ಲ.
ಎಂಎಲ್ಸಿಗೆ ಪ್ರಯತ್ನ ಪಡುತ್ತಿದ್ದ ನನ್ನ ರಾಜ್ಯಸಭೆಗೆ ಕಳಿಸಿದ ಶಿವಕುಮಾರ್ ಅವರು, ಪರಮೇಶ್ವರ್ ಅವರು, ಸಿದ್ದರಾಮಯ್ಯ ಅವರು. ನನಗೆ ಯಾವ ಹುದ್ದೆಗಳು ಸಂತಸ ನೀಡಿರಲಿಲ್ಲ. ಕಾರ್ಯಾಧ್ಯಕ್ಷ ಹುದ್ದೆ ಸಂತಸ ನೀಡಿದೆ. ಪಕ್ಷ ಗುರುತಿಸಿ ನೀಡುವ ಹುದ್ದೆ ಪಡೆಯಲು ಸಂಯಮ ಬೇಕು. ಎಷ್ಟೋ ಕಾರ್ಯಕರ್ತರು ಅಧಿಕಾರ ಸಿಗದೆ ಪಕ್ಷ ಎಂದು ಬದುಕು ಸವೆಸಿದ್ದಾರೆ. ನನಗೆ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ನಿಭಾಯಿಸಲಿದ್ದೇನೆ. ನಾವು ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಆಗ ಪಕ್ಷ ಗುರುತಿಸುತ್ತದೆ.
*ಕಾರ್ಯಧ್ಯಕ್ಷರಾದ ವಿನಯ್ ಕುಲಕರ್ಣಿ*
10 ವರ್ಷ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. ಇಂತಹ ಅವಕಾಶ ಸಿಗುವುದು ಅಪರೂಪ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಯಾರ ಮನೆಯ ಮೇಲೂ ದಾಳಿಯಾಗಿಲ್ಲ. ಆದರೆ ಇತರೇ ಪಕ್ಷಗಳ ನಾಯಕರ ಎದುರು ಇಡಿ, ಐಟಿ, ಸಿಬಿಐ ಎನ್ನುವ ಆಯ್ಕೆಗಳು ಇರುತ್ತವೆ.
ಬಿಜೆಪಿಯಲ್ಲಿ ಇರುವವರೆಲ್ಲಾ ಬಿಪಿಎಲ್ ಕಾರ್ಡ್ ಹೊಂದಿರುವವರು ಇರಬೇಕು. ಅಥವಾ ಸಿದ್ದರಾಮಯ್ಯ ಅವರು ನೀಡಿರುವ ಅಕ್ಕಿ ತಿನ್ನುವವರಿರಬೇಕು. ಅದಕ್ಕೆ ಯಾರ ಮನೆ ಮೇಲೂ ದಾಳಿಯಾಗುತ್ತಿಲ್ಲ.
ನನ್ನನ್ನು ನನ್ನ ಜಿಲ್ಲೆಗೂ ಹೋಗದಂತೆ ಮಾಡಿದರು. ನನ್ನ ಬೆಂಬಲಿಗರ 56 ಮಂದಿ ಮೇಲೆ ಐಟಿ ದಾಳಿ ನಡೆಸಿದರು. ಯಾರ ಮನೆಯಲ್ಲೂ 50 ಸಾವಿರ ಹಣ ಸಿಗಲಿಲ್ಲ. ಆದರೂ ಹಗಲು ರಾತ್ರಿ, ಐಟಿ ಕಚೇರಿಯಲ್ಲಿ ಕೂರಿಸಿಕೊಂಡರು.
ಕಾಂಗ್ರೆಸ್ ಪಕ್ಷದ್ದು ಬಸವ ತತ್ವ, ಬಸವಣ್ಣನ ಅನುಯಾಯಿಗಳು ನಾವು. ಬಿಜೆಪಿಗೆ ಬೆಂಬಲ ನೀಡುವ ಲಿಂಗಾಯತರು ಸನಾತನಿಗಳಿಗಿಂತ ಕಡೆ. 12 ನೇ ಶತಮಾನದಲ್ಲೇ ಎಲ್ಲಾ ಸಮುದಾಯಗಳನ್ನು ಒಂದೂಗೂಡಿಸಿ ಅವರಿಗೆ ನ್ಯಾಯ ಸಿಗುವಂತೆ ಮಾಡಿದವರು. ಆ ಕನಸನ್ನು ಕಾಂಗ್ರೆಸ್ ಮಾತ್ರ ನನಸು ಮಾಡಲಿದೆ. ಇಡೀ ದೇಶವೇ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಸಿದ್ದರಾಮಯ್ಯ, ಶಿವಕುಮಾರ್ ಅವರು ಮಾಡಿದ್ದಾರೆ.
ಎಲ್ಲರೂ ಮನೆ, ಮನೆಗೆ ಹೋಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಬೇಕು. ನಾವು ನಿಮ್ಮ ಹಿಂದೆ ನಿಂತು ಕೆಲಸ ಮಾಡುತ್ತೇವೆ.
*ಕಾರ್ಯಧ್ಯಕ್ಷರಾದ ಮಂಜುನಾಥ್ ಭಂಡಾರಿ*
ವಿದ್ಯಾರ್ಥಿ ಸಂಘದಲ್ಲಿ ಇದ್ದ ನನ್ನ ಆಸ್ಕರ್ ಫರ್ನಾಂಡಿಸ್ ಗುರುತಿಸಿ ಉನ್ನತ ಮಟ್ಟಕ್ಕೆ ಬೆಳೆಸಿದರು. ದೆಹಲಿಯ ಹಿರಿಯ ಪತ್ರಕರ್ತರನ್ನು ಭೇಟಿ ಮಾಡಿದಾಗ ಅವರು ಹೀಗೆ ಹೇಳಿದರು. “ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಶೇ 43 ರಷ್ಟು ಮತಗಳನ್ನು ಕಾಂಗ್ರೆಸ್ ಪಡೆದಿದೆ. ಲೋಕಸಭಾ ಚುನಾವಣೆಯಲ್ಲಿ ನೀವು ಕೊಟ್ಟ ಕಾರ್ಯಕ್ರಮಗಳನ್ನು ನೋಡಿ ಮತ ಹಾಕಿದರೆ ರಾಜ್ಯದಲ್ಲಿ 22- 24 ಸ್ಥಾನಗಳನ್ನು ನೀವು ಗೆಲ್ಲುತ್ತೀರಾ” ಎಂದರು.
ನಾನು ಯುವ ಕಾಂಗ್ರೆಸ್ ಮತ್ತು ಕಾರ್ಯಾಧ್ಯಕ್ಷನ ಜವಾಬ್ದಾರಿ ನೀಡಿದ್ದಾರೆ ಪ್ರತಿ ಮನೆಗೂ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ತಲುಪಿಸಿ ಪಕ್ಷವನ್ನು ಗೆಲ್ಲಿಸುವಂತಹ ಕೆಲಸ ಮಾಡುತ್ತೇನೆ.
*ಕಾರ್ಯಧ್ಯಕ್ಷರಾದ ವಸಂತ್ ಕುಮಾರ್*
ಸಾಮಾನ್ಯ ಕಾರ್ಯಕರ್ತನಾಗಿ ಇಂದು ಉನ್ನತ ಮಟ್ಟಕ್ಕೆ ಬೆಳೆದಿದ್ದೇನೆ. ಇದಕ್ಕೆ ನಾನು ಪಕ್ಷಕ್ಕೆ ನಿಸ್ವಾರ್ಥವಾಗಿ ದುಡಿದಿದ್ದು ಕಾರಣವಾಗಿದೆ. ನನ್ನ ಕೆಲಸ ದೊಡ್ಡ ಮಟ್ಟಕ್ಕೆ ನನ್ನ ಬೆಳೆಸಿದೆ.
ಬಿಜೆಪಿ ಈ ದೇಶದಲ್ಲಿ ಅವಾಂತರವನ್ನು ಸೃಷ್ಟಿಸಿ ದುರಾಡಳಿತವನ್ನು ನೀಡುತ್ತಿದೆ. ಜನರನ್ನು ಒಡೆದು ಅಳುವ ನೀತಿಯ ಮೂಲಕ ಅಧಿಕಾರ ನಡೆಸುತ್ತಿದೆ ಬಿಜೆಪಿ. ಸನಾತನ ಸಿದ್ಧಾಂತಕ್ಕೆ ನಾವು ತಡೆ ಹಾಕಬೇಕಾಗಿದೆ. ಎಲ್ಲರನ್ನು ಸಮಾನವಾಗಿ ಕಾಣುವ ಸಿದ್ಧಾಂತಕ್ಕೆ ನಾವು ಮತ್ತೆ ಜೀವ ನೀಡಬೇಕಾಗಿದೆ. ಮೋದಿ ಅವರದ್ದು ಸರ್ವಾಧಿಕಾರಿ ಧೋರಣೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಕೆಲಸ ಮಾಡುತ್ತಿದ್ದು, ಅದಕ್ಕೆ ನಾವೆಲ್ಲಾ ಸೇರಿ ಕಡಿವಾಣ ಹಾಕೋಣ.